Advertisement

ದೆಹಲಿ ಅಬಕಾರಿ ನೀತಿ ಹಗರಣ: ಇಂದು CBI ಮುಂದೆ ಕೇಜ್ರಿವಾಲ್‌ ಹಾಜರ್‌

07:59 PM Apr 15, 2023 | Team Udayavani |

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸಿಬಿಐ ಸಮನ್ಸ್‌ ಜಾರಿ ಮಾಡಿರುವಂತೆಯೇ, ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಮ್‌ ಆದ್ಮಿ ಪಕ್ಷ ಕೆಂಡಕಾರಿದೆ. ಭಾನುವಾರ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿರುವ ಸಿಎಂ ಕೇಜ್ರಿವಾಲ್‌, ಶನಿವಾರ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ವಾಚಾಮಗೋಚರ ವಾಗ್ಧಾಳಿ ನಡೆಸಿದ್ದಾರೆ.

Advertisement

ಸುಳ್ಳು ಹೇಳುತ್ತಿರುವ, ನ್ಯಾಯಾಲಯಗಳಲ್ಲಿ ಸುಳ್ಳು ಸಾಕ್ಷ್ಯಗಳನ್ನು ಹಾಜರುಪಡಿಸುತ್ತಿರುವ ಸಿಬಿಐ, ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ವಿರುದ್ಧ ಸೂಕ್ತ ಮೊಕದ್ದಮೆ ದಾಖಲಿಸುತ್ತೇವೆ ಎಂದು ಖಚಿತ ಸ್ವರದಲ್ಲಿ ಕೇಜ್ರಿವಾಲ್‌ ಹೇಳಿದ್ದಾರೆ.

ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳನ್ನು ಟಾರ್ಗೆಟ್‌ ಮಾಡಲು ಪ್ರಧಾನಿ ಮೋದಿಯವರು ಸಿಬಿಐ ಮತ್ತು ಇ.ಡಿ.ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನ್ಯಾಯಾಲಯಗಳಿಗೂ ಸುಳ್ಳುಗಳನ್ನೇ ಹೇಳಲಾಗುತ್ತಿದೆ. ಯಾರನ್ನೆಲ್ಲ ಬಂಧಿಸಲಾಗಿದೆಯೋ ಅವರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಅವರ ವಿರುದ್ಧ ಒಂದೇ ಒಂದು ತುಣುಕು ಪುರಾವೆಯನ್ನು ಕೂಡ ಈವರೆಗೆ ಕೋರ್ಟ್‌ಗೆ ಸಲ್ಲಿಸಿಲ್ಲ ಎಂದು ಕೇಜ್ರಿವಾಲ್‌ ಆರೋಪಿಸಿದ್ದಾರೆ.

ಕೇಜ್ರಿವಾಲ್‌ ಆರೋಪಗಳೇನು?
14 ಫೋಟೋಗಳನ್ನು ನಾಶಮಾಡಲಾಗಿದೆ ಎಂದು ತನಿಖಾ ಸಂಸ್ಥೆಗಳು ಕೋರ್ಟ್‌ಗಳಿಗೆ ಸುಳ್ಳೇ ಸುಳ್ಳು ಅಫಿಡವಿಟ್‌ಗಳನ್ನು ಸಲ್ಲಿಸುತ್ತಿವೆ. ಸುಳ್ಳನ್ನು ಒಪ್ಪಿಕೊಳ್ಳುವಂತೆ ಹಿಂಸಿಸಲಾಗುತ್ತಿದೆ. ಅಷ್ಟೇ ಅಲ್ಲ, “ನಾಳೆ ನಿನ್ನ ಮಗಳು ಕಾಲೇಜಿಗೆ ಹೇಗೆ ಹೋಗುತ್ತಾಳೆ ನೋಡುತ್ತೇವೆ” ಎಂಬಂಥ ಕೀಳುಮಟ್ಟದ ಬೆದರಿಕೆ ತಂತ್ರಗಳನ್ನೂ ಪ್ರಯೋಗಿಸಲಾಗುತ್ತಿದೆ ಎಂದೂ ಕೇಜ್ರಿವಾಲ್‌ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾವು ಎಲ್ಲ ಪಾವತಿಗಳನ್ನೂ ಚೆಕ್‌ ಮೂಲಕವೇ ಮಾಡಿದ್ದೇವೆ. ನಾವು 100 ಕೋಟಿ ರೂ. ಪಡೆದಿದ್ದೇವೆ ಎಂದು ಆರೋಪಿಸುವ ನೀವು, ಒಂದೇ ಒಂದು ರೂಪಾಯಿ ಪಡೆದಿದ್ದಕ್ಕೆ ಸಾಕ್ಷಿ ಕೊಡಿ ನೋಡೋಣ. “ನಾನೀಗ, ಪ್ರಧಾನಿ ಮೋದಿಯವರಿಗೆ ಒಂದು ಸಾವಿರ ಕೋಟಿ ರೂ.ಗಳನ್ನು ಸೆ.17ರಂದು ರಾತ್ರಿ 7 ಗಂಟೆಗೆ ನೀಡಿದ್ದೇನೆ ಎಂದು ಹೇಳಿದ ಕೂಡಲೇ, ಮೋದಿಯವರನ್ನು ನೀವು ಬಂಧಿಸುತ್ತೀರಾ? ಮತ್ತೆ ಯಾವುದೇ ಸಾಕ್ಷ್ಯವಿಲ್ಲದೇ ನಮ್ಮ ವಿರುದ್ಧ ಹೇಗೆ ಕ್ರಮ ಕೈಗೊಳ್ಳುತ್ತಿದ್ದೀರಿ” ಎಂದೂ ಪ್ರಶ್ನಿಸಿದ್ದಾರೆ ಕೇಜ್ರಿವಾಲ್‌.

ಕೇಜ್ರಿವಾಲ್‌ ಆರೋಪಿಯಲ್ಲ, ಸಾಕ್ಷಿ!
ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್‌ ಅವರನ್ನು ಸಾಕ್ಷಿಯಾಗಿ ವಿಚಾರಣೆಗೆ ಕರೆಯಲಾಗಿದೆಯೇ ವಿನಾ ಆರೋಪಿಯಾಗಿ ಅಲ್ಲ. ಈಗಾಗಲೇ ಬಂಧಿತರಾಗಿರುವ ಡಿಸಿಎಂ ಮನೀಷ್‌ ಸಿಸೋಡಿಯ ಅವರು, “ಅಬಕಾರಿ ಕರಡು ನೀತಿಯನ್ನು 2021ರ ಮಾರ್ಚ್‌ನಲ್ಲಿ ಕೇಜ್ರಿವಾಲ್‌ ಅವರ ನಿವಾಸದಲ್ಲಿ ತಮಗೆ ಹಸ್ತಾಂತರಿಸಲಾಯಿತು” ಎಂದು ಹೇಳಿದ್ದಾರೆ. ಹೀಗಾಗಿ, ಈ ವಿಚಾರದ ಬಗ್ಗೆ ಕೇಜ್ರಿವಾಲ್‌ ಅವರಿಂದ ಸಿಬಿಐ ಸ್ಪಷ್ಟ ಮಾಹಿತಿ ಪಡೆಯಲಿದೆ. ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ತನಿಖೆಗೆ ಆದೇಶಿಸಿದ ಬಳಿಕ ದೆಹಲಿ ಸಂಪುಟದಲ್ಲಿ ಅಬಕಾರಿ ನೀತಿಗೆ ಅಂಗೀಕಾರ ದೊರೆತಿತ್ತು.

Advertisement

ತನಿಖೆಗೆ ಆದೇಶಿಸಿದ ಬಳಿಕವೂ ಅಂಗೀಕಾರ ನೀಡಿದ್ದೇಕೆ, ಇದಾದ ಬಳಿಕ ನೀತಿಯನ್ನು ರದ್ದು ಮಾಡಿ ಹಳೆಯ ನೀತಿಯನ್ನೇ ಉಳಿಸಿಕೊಂಡಿದ್ದೇಕೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಜ್ರಿವಾಲ್‌ಗೆ ಭಾನುವಾರ ಕೇಳಲು ಸಿಬಿಐ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ, ಈ ಹಿಂದೆ ಸಚಿವರ ಸಮಿತಿಯ ಮುಂದೆ ಇಡಲಾಗಿದ್ದ ಕಡತವೊಂದು ಈಗ ನಾಪತ್ತೆಯಾಗಿದ್ದು ಅದರ ಬಗ್ಗೆಯೂ ಪ್ರಶ್ನಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next