ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಶನಿವಾರ ಮತದಾನ ನಡೆಯುತ್ತಿದೆ. 70 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯತ್ತಿದೆ.
ದೆಹಲಿಯ ವಿಧಾನಸಭೆಯ ಅತೀ ಹಿರಿಯ ಮತದಾರರಾಗಿರುವ ಕಲಿತಾರ ಮಂಡಲ್ ಇಂದು ಮತ ಚಲಾಯಿಸಿದರು. 110 ವರ್ಷ ಪ್ರಾಯದ ಹಿರಿಯ ಮತದಾರರಾಗಿರುವ ಅವರು ಇಲ್ಲಿನ ಗ್ರೇಟರ್ ಕೈಲಾಶ್ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ಹಕ್ಕು ಚಲಾಯಿಸದರು.
ಗ್ರೇಟರ್ ಕೈಲಾಶ್ ವಿಧಾನಸಭೆ ಕ್ಷೇತ್ರದ ಚಿತ್ತರಂಜನ್ ಪಾರ್ಕ್ ನ ಎಸ್ ಡಿಎಂಸಿ ಪ್ರಾಥಮಿಕ ಶಾಲೆಯಲ್ಲಿ ಮಂಡಲ್ ಮತ ಚಲಾಯಿಸಿದರು. ಮಂಡಲ್ ಅವರು ಮತ ಚಲಾಯಿಸಲು ಬರುತ್ತಿದ್ದಂತೆ ಚುನಾವಣಾ ಅಧಿಕಾರಿಗಳು ಹೂ ಗುಚ್ಛ ನೀಡಿ ಸ್ವಾಗತಿಸಿದರು.
ನಾನು ಬದುಕಿಇರುವವರೆಗೆ ಮತದಾನ ಮಾಡುತ್ತೇನೆ ಎಂದು ಮಂಡಲ್ ಹೇಳಿದರು. ದೆಹಲಿ ಚುನಾವಣೆಯಲ್ಲಿ ನೂರು ವರ್ಷಕ್ಕೆ ಹೆಚ್ಚಿನ ವಯಸ್ಸಾದ ಒಟ್ಟು 130 ಮತದಾರರಿದ್ದಾರೆ.
ಆದರೆ ದೆಹಲಿಯ ಯುವ ಮತದಾರರು ಚುನಾವಣೆಯಲ್ಲಿ ಅಷ್ಟಾಗಿ ಉತ್ಸಾಹ ತೋರಿಸಿಲ್ಲ. ಮಧ್ಯಾಹ್ನ 1 ಗಂಟೆಯವರೆಗೆ 19.37% ಮತದಾನವಾಗಿದೆ. ಸಂಜೆಯ ವೇಳೆಗೆ ಮತದಾನ ವೇಗ ಪಡೆಯುವ ನಿರೀಕ್ಷೆಯಿದೆ. 2015ರ ವಿಧಾನಸಭಾ ಚುನಾವಣೆಯಲ್ಲಿ 67.12% ಮತದಾನ ನಡೆದಿತ್ತು.
ಆಮ್ ಆದ್ಮಿ ಪಕ್ಷ ಎಲ್ಲಾ 70 ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರೆ, ಬಿಜೆಪಿ 67 ಕ್ಷೇತ್ರಗಳಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದೆ.