Advertisement

ಮುಂದುವರಿದ ಹಗ್ಗಜಗ್ಗಾಟ : ದಿಲ್ಲಿಯಲ್ಲಿ ಚುನಾವಣೆ ಮುಗಿದರೂ ನಿಂತಿಲ್ಲ ವಾಗ್ಯುದ್ಧ

10:01 AM Feb 11, 2020 | Team Udayavani |

ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದರೂ, ರಾಜಕೀಯ ಪಕ್ಷಗಳ ನಡುವಿನ ವಾಗ್ಯುದ್ಧಗಳು ನಿಂತಿಲ್ಲ. ಮತಗಟ್ಟೆ ಸಮೀಕ್ಷೆಗಳು ಆಮ್‌ ಆದ್ಮಿ ಪಕ್ಷಕ್ಕೇ ಬಹುಮತ ನೀಡಿವೆಯಾದರೂ, ಆ ಪಕ್ಷದ ನಾಯಕರು ಮಾತ್ರ ಫ‌ಲಿತಾಂಶಕ್ಕೆ ಸಂಬಂಧಿಸಿ ಅನೇಕ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

Advertisement

ಚುನಾವಣಾ ಆಯೋಗವು ಮತದಾನ ಪ್ರಮಾಣವನ್ನು ಬಹಿರಂಗಪಡಿಸಲು ವಿಳಂಬ ಮಾಡಿರುವುದು,ಇವಿಎಂ ಗಳನ್ನು ತಿರುಚಲಾಗುತ್ತಿದೆಯೇ ಎಂಬ ಅನುಮಾನವೇ ಇದಕ್ಕೆ ಕಾರಣ.

ರವಿವಾರ ಸುದ್ದಿಗೋಷ್ಠಿ ನಡೆಸಿದ ಆಪ್‌ ನಾಯಕ ಸಂಜಯ್‌ ಸಿಂಗ್‌, ಅಕ್ರಮವಾಗಿ ಇವಿಎಂಗಳನ್ನು ಸಾಗಿಸಲಾಗುತ್ತಿದೆ ಎನ್ನಲಾದ ವೀಡಿಯೋಗಳನ್ನು ಸುದ್ದಿಗಾರರ ಮುಂದಿಟ್ಟಿದ್ದಾರೆ. “ವಿದ್ಯುನ್ಮಾನ ಮತಯಂತ್ರಗಳನ್ನುಸೂಕ್ತ ಭದ್ರತೆಯೊಂದಿಗೆ ಒಯ್ಯಬೇಕು. ಆದರೆ, ಅಕ್ರಮವಾಗಿ ಹೊತ್ತೂಯ್ಯುತ್ತಿರುವುದು ಎಲ್ಲಿಗೆ ಎಂಬ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಬೇಕು’ ಎಂದು ಸಿಂಗ್‌ ಆಗ್ರಹಿಸಿದ್ದಾರೆ. ಇದೇ ವೇಳೆ, ಎಲ್ಲ ಸ್ಟ್ರಾಂಗ್‌ ರೂಂಗಳ ಮೇಲೂ ಹದ್ದಿನ ಕಣ್ಣಿಡುವಂತೆ ಕಾರ್ಯಕರ್ತರಿಗೆ ಸಿಎಂ ಕೇಜ್ರಿವಾಲ್‌ ಕರೆ ನೀಡಿದ್ದಾರೆ. ಮಂಗಳವಾರ ಫ‌ಲಿತಾಂಶ ಪ್ರಕಟವಾಗಲಿದೆ.

ಗೆಲುವು ನಮ್ಮದೇ: ಇನ್ನು ಬಿಜೆಪಿ ನಾಯಕಿ ಮೀನಾಕ್ಷಿ ಲೇಖೀ ಅವರು, “ಮತಗಟ್ಟೆ ಸಮೀಕ್ಷೆಗಳು ನಿಜವೇ ಆಗಿರಬೇಕೆಂದೇನೂ ಇಲ್ಲ. ಅಲ್ಲದೆ, ಈ ಸಮೀಕ್ಷೆಗಳಿಗೆ ಸಂಜೆ 4 ಅಥವಾ 5 ಗಂಟೆಯವರೆಗಿನ ದತ್ತಾಂಶಗಳನ್ನೇ ಸಂಗ್ರಹಿಸಿರಲಾಗಿರುತ್ತದೆ. ಆ ಅನಂತರ ನಡೆದ ಮತದಾನದ ದತ್ತಾಂಶ ಇರುವುದಿಲ್ಲ. ಎಷ್ಟೋ ಬಾರಿ ಮತಗಟ್ಟೆ ಸಮೀಕ್ಷೆ ಸುಳ್ಳಾಗಿದ್ದಿದೆ ಎಂದಿದ್ದಾರೆ.

ಜತೆಗೆ ನಮ್ಮ ಮತಾದರರೆಲ್ಲ ಲೇಟಾಗಿ ಬಂದು, ಲೇಟಾಗಿ ಹಕ್ಕು ಚಲಾಯಿಸಿದ್ದಾರೆ. ಹಾಗಾಗಿ, ದಿಲ್ಲಿಯಲ್ಲಿ ಬಿಜೆಪಿಯೇ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ ಎಂದೂ ಲೇಖೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶೇ.62.59 ಮತದಾನ: ದಿಲ್ಲಿಯಲ್ಲಿ ಒಟ್ಟಾರೆ ಶೇ.62.59 ಮತದಾನ ದಾಖಲಾಗಿದೆ ಎಂದು ರವಿವಾರ ಸಂಜೆ ಚುನಾವಣ ಆಯೋಗದ ಅಧಿಕಾರಿಗಳು ಘೋಷಿಸಿದ್ದಾರೆ.

Advertisement

2015ರ ಚುನಾವಣೆಯಲ್ಲಿ ಶೇ.67.47ರಷ್ಟು ಮತದಾನ ದಾಖಲಾಗಿತ್ತು. ಲೋಕಸಭೆ ಚುನಾವಣೆಗೆ ಹೋಲಿಸಿದರೆ ಶೇ.2ರಷ್ಟು ಹೆಚ್ಚು ಮತದಾನ ದಾಖಲಾಗಿದೆ ಎಂದು ದಿಲ್ಲಿ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್‌ ಸಿಂಗ್‌ ಹೇಳಿದ್ದಾರೆ. ಜತೆಗೆ, ಹಲವು ಹಂತದ ಪರಿಶೀಲನೆಯಿಂದಾಗಿ ಘೋಷಣೆ ವಿಳಂಬವಾಯಿತು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ ಟ್ವೀಟ್‌ ಮಾಡಿದ್ದ ಸಿಎಂ ಕೇಜ್ರಿವಾಲ್‌, “ಮತದಾನ ಮುಗಿದು ಇಷ್ಟು ಗಂಟೆಗಳಾದರೂ ಇನ್ನೂ ಮತ ಪ್ರಮಾಣವನ್ನು ಏಕೆ ಘೋಷಿಸುತ್ತಿಲ್ಲ? ಚುನಾವಣ ಆಯೋಗ ಏನು ಮಾಡುತ್ತಿದೆ? ಇದೆಲ್ಲ ನೋಡಿದರೆ ಆಘಾತವಾಗುತ್ತಿದೆ’ ಎಂದಿದ್ದರು.

ದಿಲ್ಲಿ ಚುನಾವಣೆಯಲ್ಲಿ ನಾವು ಅದ್ಭುತ ಸಾಧನೆ ಮಾಡುತ್ತೇವೆಂದು ಎಲ್ಲೂ ಹೇಳಿಕೊಂಡಿಲ್ಲ. ಆದರೂ ಪ್ರಯತ್ನ ನಡೆಸಿದ್ದೇವೆ. ಒಂದು ವೇಳೆ ಆಮ್‌ ಆದ್ಮಿ ಪಕ್ಷ ಗೆದ್ದರೆ, ಅದು ಅಭಿವೃದ್ಧಿಯನ್ನು ಗೆಲ್ಲಿಸಿದಂತೆ.
– ಅಧೀರ್‌ ರಂಜನ್‌ ಚೌಧರಿ, ಕಾಂಗ್ರೆಸ್‌ ನಾಯಕ

ಬಿಹಾರದತ್ತ ಈಗ ಆಪ್‌ ಕಣ್ಣು
ದಿಲ್ಲಿಯಲ್ಲಿ ಜಯ ಸಾಧಿಸಿದ್ದೇ ಆದಲ್ಲಿ, ನಮ್ಮ ಮುಂದಿನ ನಡೆ ಬಿಹಾರದತ್ತ ಎಂಬ ಸುಳಿವನ್ನು ಆಪ್‌ ನಾಯಕರೊಬ್ಬರು ನೀಡಿದ್ದಾರೆ. ಮುಂದಿನ 7-8 ತಿಂಗಳಲ್ಲೇ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ಆಗ ಎಲ್ಲ 40 ಕ್ಷೇತ್ರಗಳಲ್ಲೂ ನಮ್ಮ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಈಗಾಗಲೇ ನಾವು ಕೆಲಸ ಆರಂಭಿಸಿದ್ದೇವೆ. ಬೇರುಮಟ್ಟದಲ್ಲೇ ಸಂಘಟನೆಯನ್ನು ಬಲಪಡಿಸಲು ಜನ ಸಂವಾದ ಯಾತ್ರೆಗಳನ್ನು ನಡೆಸುತ್ತಿದ್ದೇವೆ. ಅಷ್ಟೇ ಅಲ್ಲ, ಪರ್ಯಾಯ ರಾಜಕೀಯ ಪಕ್ಷವಾಗಿ ಆಪ್‌ ಬೆಳೆಯಲಿದೆ ಎಂದು ಬಿಹಾರದ ಆಪ್‌ ಅಧ್ಯಕ್ಷ ಶತ್ರುಘ್ನ ಸಾಹು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next