ನವದೆಹಲಿ: ಸಚಿವ ಸತ್ಯೇಂದ್ರ ಜೈನ್ ಅವರ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ಮತ್ತು ಜಾಮೀನು ಪ್ರಕ್ರಿಯೆಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಸೋಮವಾರ (ಸೆ.19) ತಡೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಐ ಫೋನ್ 14 ಖರೀದಿಗಾಗಿ ಕೊಚ್ಚಿಯಿಂದ ದುಬೈಗೆ ಪಯಣ: ಈತ ಹೀಗೆ ಮಾಡಿರುವುದು ಇದೇ ಮೊದಲಲ್ಲ!
ಸತ್ಯೇಂದ್ರ ಜೈನ್ ಗೆ ಸಂಬಂಧಿಸಿದ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನು ಮತ್ತೊಂದು ಕೋರ್ಟ್ ಗೆ ವರ್ಗಾಯಿಸಬೇಕೆಂದು ಕೋರಿ ಜಾರಿ ನಿರ್ದೇಶನಾಲಯ ಮನವಿ ಸಲ್ಲಿಸಿದ್ದ ನಂತರ ಕೋರ್ಟ್ ಈ ಆದೇಶ ನೀಡಿರುವುದಾಗಿ ವರದಿ ವಿವರಿಸಿದೆ.
ವಿಚಾರಣೆಯನ್ನು ವರ್ಗಾಯಿಸಬೇಕೆಂದು ಜಾರಿ ನಿರ್ದೇಶನಾಲಯ ಮನವಿ ಹಿನ್ನೆಲೆಯಲ್ಲಿ ರೋಸ್ ಅವೆನ್ಯೂ ಕೋರ್ಟ್ ಎಲ್ಲಾ ಆರೋಪಿಗಳಿಗೂ ನೋಟಿಸ್ ಜಾರಿಗೊಳಿಸಿದೆ. ಅಕ್ರಮ ಹಣಕಾಸು ವರ್ಗಾವಣೆ ನಿಗ್ರಹ ಕಾಯ್ದೆಯಡಿ ಮೇ 30ರಂದು ಜೈನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಪ್ರಸ್ತುತ ಜೈನ್ ನ್ಯಾಯಾಂಗ ಬಂಧನದಲ್ಲಿರುವುದಾಗಿ ವರದಿ ತಿಳಿಸಿದೆ.
ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಪತ್ನಿ ಪೂನಮ್ ಜೈನ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು ನೀಡಿತ್ತು. ಜೈನ್ ಅವರ ನಿಕಟವರ್ತಿಗಳ ನಿವಾಸದ ಮೇಲೆ ಜೂನ್ 6ರಂದು ದಾಳಿ ನಡೆಸಿದ್ದ ಸಂದರ್ಭದಲ್ಲಿ 2.85 ಕೋಟಿ ನಗದು ಹಾಗೂ 133 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.