Advertisement

Raksha Bandhan:ರಾಖಿ ಕಟ್ಟುವ ಮಗಳ ಆಸೆ ಪೂರೈಸಲು 1 ತಿಂಗಳ ಮಗುವನ್ನು ಅಪಹರಿಸಿದ ದಂಪತಿ!

03:56 PM Aug 26, 2023 | Team Udayavani |

ನವದೆಹಲಿ: ರಕ್ಷಾ ಬಂಧನದ ಹಬ್ಬದಂದು (ಆಗಸ್ಟ್‌ 30) ರಾಖಿ ಕಟ್ಟಲು ತನಗೊಬ್ಬ ಸಹೋದರ ಬೇಕೆಂದು ಮಗಳು ಆಸೆ ಪಟ್ಟಿದ್ದಕ್ಕಾಗಿ ಆಕೆಯ ಇಷ್ಟವನ್ನು ನೆರವೇರಿಸಲು ಒಂದು ತಿಂಗಳ ಗಂಡು ಮಗುವನ್ನು ಅಪಹರಿಸಿರುವ ಆರೋಪದಲ್ಲಿ ದಂಪತಿಯನ್ನು ಬಂಧಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:Spandana: ಎದೆಗೊತ್ತಿ ಪ್ರೀತಿಸುವೆ.. ವಿವಾಹ ವಾರ್ಷಿಕ ದಿನ ಪತ್ನಿ ನೆನೆದು ರಾಘು ಭಾವುಕ

ಛಟ್ಟಾ ರೈಲ್ವೆ ಚೌಕ್‌ ನ ಬೀದಿಬದಿಯಲ್ಲಿ ಮಲಗಿದ್ದ ದಂಪತಿಯ ಸಮೀಪದಲ್ಲಿದ್ದ ಒಂದು ತಿಂಗಳ ಗಂಡು ಮಗುವನ್ನು ಸಂಜಯ್‌ ಗುಪ್ತಾ (41ವರ್ಷ) ಮತ್ತು ಅನಿತಾ ಗುಪ್ತಾ (36ವರ್ಷ) ದಂಪತಿ ಅಪಹರಿಸಿದ್ದರು.

ಫುಟ್‌ ಪಾತ್‌ ನಲ್ಲಿ ನಿದ್ರಿಸುತ್ತಿದ್ದ ವೇಳೆ ಬೆಳಗ್ಗಿನ ಜಾವ 3ಗಂಟೆ ಹೊತ್ತಿಗೆ ಎಚ್ಚರವಾದಾಗ ತಮ್ಮ ಮಗು ಕಾಣೆಯಾಗಿರುವುದು ತಿಳಿದುಬಂದಿದ್ದು, ಯಾರೋ ಮಗುವನ್ನು ಅಪಹರಿಸಿರಬೇಕೆಂದು ದಂಪತಿ ಪೊಲೀಸರಿಗೆ ದೂರು ಕೊಟ್ಟಿರುವುದಾಗಿ ವರದಿ ತಿಳಿಸಿದೆ.

ದೂರಿನ ಆಧಾರದ ಮೇಲೆ ಪೊಲೀಸರು ಸಮೀಪದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ, ಇಬ್ಬರು ವ್ಯಕ್ತಿಗಳು ಬೈಕ್‌ ನಲ್ಲಿ ಅಡ್ಡಾಡುತ್ತಿರುವುದು ಪತ್ತೆಯಾಗಿತ್ತು. ಕೊನೆಗೆ ಎಲ್ಲಾ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಶಂಕಿತ ಬೈಕ್‌ ಸಂಜಯ್‌ ಹೆಸರಿನಲ್ಲಿರುವುದು ತನಿಖೆ ವೇಳೆ ಬಯಲಾಗಿತ್ತು.

Advertisement

ಇದೊಂದು ಅಪರಾಧ ಕೃತ್ಯಗಳ ಪ್ರದೇಶ ಎಂದೇ ಪರಿಗಣಿಲ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 15 ಮಂದಿ ಶಸ್ತ್ರ್‌ ಸಜ್ಜಿತ ಪೊಲೀಸರು ಪ್ರದೇಶವನ್ನು ಸುತ್ತುವರಿದಿದ್ದರು. ರಘುಬೀರ್‌ ನಗರದ ಸಿ ಬ್ಲಾಕ್‌ ನ ಟ್ಯಾಗೋರ್‌ ಗಾರ್ಡರ್ನ್ಸ್‌ ನಲ್ಲಿ ಆರೋಪಿತ ದಂಪತಿಯನ್ನು ಸೆರೆಹಿಡಿದಿದ್ದು, ಈ ಸಂದರ್ಭದಲ್ಲಿ ಮಗು ಕೂಡಾ ಪತ್ತೆಯಾಗಿತ್ತು ಎಂದು ಡೆಪ್ಯುಟಿ ಪೊಲೀಸ್‌ ಕಮಿಷನರ್‌ ಸಾಗರ್‌ ಸಿಂಗ್‌ ಕಾಲ್ಸಿ ತಿಳಿಸಿದ್ದಾರೆ.

ಬಂಧಿತ ದಂಪತಿಯನ್ನು ವಿಚಾರಣೆಗೊಳಪಡಿಸಿದಾಗ, ಕಳೆದ ವರ್ಷ ಆಗಸ್ಟ್‌ 17ರಂದು ತಮ್ಮ 17 ವರ್ಷದ ಪುತ್ರ ಟೇರೇಸ್‌ ನಿಂದ ಬಿದ್ದು ಸಾವನ್ನಪ್ಪಿದ್ದ. ಈ ವಿಷಯ ನಮ್ಮ ಮಗಳಿಗೆ ತಿಳಿದಿಲ್ಲ. ಏತನ್ಮಧ್ಯೆ ರಕ್ಷಾ ಬಂಧನ ದಿನಾಚರಣೆಯಂದು ತನಗೆ ರಾಖಿ ಕಟ್ಟಲು ಸಹೋದರ ಬೇಕೆಂದು ಮಗಳು ಇಚ್ಛೆಯನ್ನು ವ್ಯಕ್ತಪಡಿಸಿರುವುದಾಗಿ ಸಂಜಯ್‌ ಮತ್ತು ಅನಿತಾ ತಿಳಿಸಿದ್ದರು.

ಮಗಳ ಇಚ್ಛೆಯನ್ನು ಈಡೇರಿಸುವ ನಿಟ್ಟಿನಲ್ಲಿ ದಂಪತಿ ಮಗುವನ್ನು ಅಪಹರಿಸಲು ನಿರ್ಧರಿಸಿದ್ದರು. ಅದರಂತೆ ಛಟ್ಟಾ ರೈಲ್‌ ಚೌಕ್‌ ಬಳಿ ಮಲಗಿದ್ದ ದಂಪತಿಯ ಪಕ್ಕದಲ್ಲಿದ್ದ ಒಂದು ತಿಂಗಳ ಗಂಡು ಮಗುವನ್ನು ಅಪಹರಿಸಿರುವುದಾಗಿ ತನಿಖೆ ವೇಳೆ ತಿಳಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂಜಯ್‌ ಟ್ಯಾಟೋ ಆರ್ಟಿಸ್ಟ್‌ ಆಗಿದ್ದು, ಪತ್ನಿ ಅನಿತಾ ಮೆಹಂದಿ ಆರ್ಟಿಸ್ಟ್‌ ಆಗಿರುವುದಾಗಿ ವರದಿ ತಿಳಿಸಿದೆ. ಮಗುವಿನ ತಾಯಿಗೆ ಎರಡೂ ಕೈ ಮತ್ತು ಕಾಲುಗಳಿಲ್ಲ. ತಂದೆ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ದಂಪತಿಗೆ ಮನೆ ಇಲ್ಲದಿದ್ದರಿಂದ ಫುಟ್‌ ಪಾತ್‌ ನಲ್ಲೇ ಆಶ್ರಯ ಪಡೆದಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next