Advertisement

ದಿಲ್ಲಿಯಲ್ಲಿ ಶತಮಾನದ ಚಳಿ: ಕನಿಷ್ಠ ತಾಪಮಾನ 9.4 ಡಿಗ್ರಿ ಸೆಲ್ಸಿಯಸ್‌

10:06 AM Dec 31, 2019 | sudhir |

– ಏರ್‌ಪೋರ್ಟ್‌ನಿಂದ 500ಕ್ಕೂ ಅಧಿಕ ವಿಮಾನ ಹಾರಾಟಕ್ಕೆ ಅಡ್ಡಿ

Advertisement

ನವದೆಹಲಿ: ಎರಡು ವಾರಗಳಿಂದ ಚಳಿ ಹೊಡೆತಕ್ಕೆ ಅಕ್ಷರಶಃ ನಡುಗುತ್ತಿರುವ ರಾಷ್ಟ್ರ ರಾಜಧಾನಿ ನವದೆಹಲಿ, ಸೋಮವಾರ “ಶತಮಾನದ ತೀವ್ರ ಚಳಿ’ಗೆ ಸಾಕ್ಷಿಯಾಗಿದೆ. ಸೋಮವಾರ ಕನಿಷ್ಠ 9.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, 1901ರಿಂದ ಈವರೆಗಿನ ಅತ್ಯಂತ ತೀವ್ರ ಚಳಿಯ ಡಿಸೆಂಬರ್‌ ತಿಂಗಳು ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಡಿಸೆಂಬರ್‌ನ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಸೋಮವಾರದ ಉಷ್ಣಾಂಶ ಅರ್ಧದಷ್ಟು ಕಡಿಮೆಯಿತ್ತು. ಹೀಗಾಗಿ ಕಳೆದ 118 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳ “ತೀವ್ರ ಚಳಿ ದಿನ’ ಇದಾಗಿದೆ ಎಂದು ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್‌ ಶ್ರೀವಾಸ್ತವ್‌ ತಿಳಿಸಿದ್ದಾರೆ.

ಕಳೆದ 22 ವರ್ಷಗಳಿಂದ ನವದೆಹಲಿಯು ಅನಿಶ್ಚಿತ ಚಳಿಗಾಲಗಳನ್ನು ಎದುರಿಸುತ್ತಿದ್ದು, ಈ ಅವಧಿಯ ಕೆಲ ದಿನಗಳಲ್ಲಿ ಕನಿಷ್ಠ 3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿರುವ ಉದಾಹರಣೆಗಳೂ ಇವೆ. ಪ್ರಸಕ್ತ ವರ್ಷ ಡಿ.14ರಿಂದ ರಾಜಧಾನಿಯ ಜನತೆ ತೀವ್ರ ಚಳಿಗೆ ತತ್ತರಿಸಿ ಹೋಗಿದ್ದಾರೆ. ಸೋಮವಾರ ಮುಂಜಾನೆ ನವದೆಹಲಿಯನ್ನು ದಟ್ಟ ಮಂಜು ಆವರಿಸಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಮಾನ ಯಾನಕ್ಕೆ ಅಡ್ಡಿ: ರಸ್ತೆಗಳಲ್ಲಿನ ಸಂಚಾರ ದಟ್ಟಣೆಗೆ ಕುಖ್ಯಾತಿ ಪಡೆದಿರುವ ದೆಹಲಿಯ ಆಗಸದಲ್ಲೂ ಸೋಮವಾರ ಮಂಜಿನ ದಟ್ಟಣೆ ಸೃಷ್ಟಿಯಾಗಿತ್ತು. ಪರಿಣಾಮ 530 ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು. ಈ ಪೈಕಿ ದೆಹಲಿ ನಿಲ್ದಾಣದಿಂದ ಹೊರಡಬೇಕಿದ್ದ 320 ವಿಮಾನಗಳು ಮತ್ತು ನಿಲ್ದಾಣಕ್ಕೆ ಬರಬೇಕಿದ್ದ 210 ವಿಮಾನಗಳು ನಿಗದಿತ ಸಮಯಕ್ಕೆ ಹಾರಲಿಲ್ಲ, ಬಂದಿಳಿಯಲಿಲ್ಲ. ಮಧ್ಯಾಹ್ನ 12.52ರ ನಂತರ ಮಂಜು ಸರಿದು, ವಿಮಾನಗಳ ಕಾರ್ಯಾಚರಣೆ ಆರಂಭವಾಯಿತು.

Advertisement

ಚಳಿಗೆ ತತ್ತರಿಸಿದ ಉತ್ತರ: ಸಾಮಾನ್ಯಕ್ಕಿಂತಲೂ ಅತೀ ಹೆಚ್ಚು ಚಳಿಯ ಹೊಡೆತದಿಂದಾಗಿ ಸೋಮವಾರ ಉತ್ತರ ಭಾರತದ ಪಂಜಾಬ್‌ ಹಾಗೂ ಹರ್ಯಾಣ ರಾಜ್ಯಗಳು ತತ್ತರಿಸಿ ಹೋಗಿವೆ. ಪಂಜಾಬ್‌ನ ಫ‌ರಿಕೋಟ್‌ನಲ್ಲಿ ಅತಿ ಕಡಿಮೆ; 0.7 ಕನಿಷ್ಠ ತಾಪಮಾನ ದಾಖಲಾಗಿದ್ದು, ಸಾಮಾನ್ಯ ತಾಪಮಾನಕ್ಕೆ ಹೋಲಿಸಿದರೆ ಆರು ಅಂಶಗಳಷ್ಟು ಕುಸಿದಿದೆ ಎಂದು ಹವಾಮಾನ ಇಲಾಖೆ ತಮಾಹಿತಿ ನೀಡಿದೆ.

ಆರು ಮಂದಿ ಸಾವು: ತೀವ್ರ ಸ್ವರೂಪದ ಚಳಿಯಿಂದಾಗಿ ನವದೆಹಲಿಯಲ್ಲಿ ಸೋಮವಾರ ಒಂದೇ ದಿನ ಇಬ್ಬರು ಮಕ್ಕಳು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ ಇದೇ ವೇಳೆ ದಟ್ಟ ಮಂಜು ಆವರಿಸಿದ್ದರಿಂದ ಚಾಲಕನಿಗೆ ದಾರಿ ಕಾಣದೆ ಕಾರೊಂದು ಕೆನಾಲ್‌ಗೆ ಬಿದ್ದ ಘಟನೆ ಗ್ರೇಟರ್‌ ನೋಯ್ಡಾದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಟ್ಟ ಮಂಜು ಆವರಿಸಿದ್ದರಿಂದ ರಸ್ತೆ ಕಾಣದೆ, ವಾಹನಗಳು ನಿಧಾನವಾಗಿ ಸಾಗಿದ್ದರಿಂದ ಬೆಳಗ್ಗೆಯೇ ತೀವ್ರ ಸಂಚಾರ ದಟ್ಟಣೆ ಉಂಟಾಗಿ, ಕಚೇರಿ, ಶಾಲೆಗೆ ಹೋಗುವವರು ಸಂಕಷ್ಟ ಅನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next