ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬೆಂಗಾವಲು ಪಡೆಯ ಮೇಲೆ ಉದ್ರಿಕ್ತ ಜನರು ದಾಳಿ ನಡೆಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ನೂರಕ್ಕೂ ಹೆಚ್ಚು ಉದ್ರಿಕ್ತ ಜನರು ಕೈಯಲ್ಲಿ ಕೋಲುಗಳನ್ನು ಹಿಡಿದು ದಾಳಿ ನಡೆಸಿದ್ದಾರೆ. ಯಾರೊಬ್ಬರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.
ಉತ್ತರ ದೆಹಲಿಯ ನರೋಲಾದಲ್ಲಿ ಅನಧಿಕೃತ ಕಾಲೋನಿಯೊಂದರ ಉದ್ಘಾಟನೆಗೆ ತೆರಳಿದ್ದ ಸಿಎಂ ಕಾರನ್ನು ನೂರಕ್ಕೂ ಹೆಚ್ಚು ಜನ ಅಡ್ಡಗಟ್ಟಿದ್ದಾರೆ. ಕಾರಿನ ಗಾಜನ್ನೂ ಒಡೆಯಲು ಯತ್ನಿಸಿದ್ದಾರೆ.
ಇದೇ ಮೊದಲ ಬಾರಿಗೆ ಕೇಜ್ರಿವಾಲ್ ಅವರ ಮೇಲೆ ದಾಳಿ ನಡೆಯುತ್ತಿಲ್ಲ, ನವೆಂಬರ್ 2018 ರಂದು ವ್ಯಕ್ತಿಯೊಬ್ಬ ಕಚೇರಿಯ ಹೊರಗೆ ಮೆಣಸಿನ ಪುಡಿಯನ್ನು ಚೆಲ್ಲಿದ್ದ . ಒಮ್ಮೆ ಮಸಿಯನ್ನು , ಇನ್ನೊಮ್ಮೆ ಚಪ್ಪಲಿಯನ್ನೂ ಮಾತ್ರವಲ್ಲದೆ ಮೊಟ್ಟೆಯನ್ನೂ ಕೇಜ್ರಿವಾಲ್ ಅವರತ್ತ ತೂರಲಾಗಿತ್ತು.
2014 ರ ಲೋಕಸಭಾ ಚುನಾವಣೆ ವೇಳೆ ವ್ಯಕ್ತಿಯೊಬ್ಬ ಪ್ರಚಾರ ನಿರತ ಕೇಜ್ರಿವಾಲ್ ಅವರಿಗೆ ಕಪಾಲಮೋಕ್ಷ ಮಾಡಿದ್ದ.
ಹರಿಯಾಣದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಕೇಜ್ರಿವಾಲ್ ಅವರಿಗೆ ಪಂಚ್ ನೀಡಿದ್ದ.