ನವದೆಹಲಿ: ಜನವರಿ 05ರಂದು ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ಹಿಂಸಾಚಾರ ಘಟನೆಗಳಿಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರಕಾರವನ್ನು ನೇರ ಹೊಣೆಯನ್ನಾಗಿಸಿದ್ದಾರೆ. ಮತ್ತು ಸಕಾಲದಲ್ಲಿ ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ಮತ್ತು ಸಂತ್ರಸ್ತ ವಿದ್ಯಾರ್ಥಿಗಳಿಗೆ ಭದ್ರತೆಯನ್ನು ಒದಗಿಸುವಲ್ಲಿ ವಿಫಲರಾಗುವ ಮೂಲಕ ಸರ್ವತ್ರ ಟೀಕೆಗೆ ಗುರಿಯಾಗಿರುವ ದೆಹಲಿ ಪೊಲೀಸರ ಪರವಾಗಿ ಕೇಜ್ರಿವಾಲ್ ಮಾತನಾಡಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜನವರಿ 5ರಂದು ಜೆ.ಎನ್.ಯು. ಕ್ಯಾಂಪಸ್ ನಲ್ಲಿ ನಡೆದ ವಿದ್ಯಾರ್ಥಿ ಘರ್ಷಣೆಯನ್ನು ತಡೆಯಲು ಪೊಲೀಸರಿಗೆ ಆದೇಶವೇ ದೊರೆತಿರಲಿಲ್ಲ ಎಂದು ಹೇಳಿದ್ದಾರೆ. ದೆಹಲಿ ಪೊಲೀಸ್ ಇಲಾಖೆಯು ನೇರವಾಗಿ ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿ ಬರುತ್ತದೆ.
‘ಹಿಂಸಾಚಾರವನ್ನು ತಡೆಯಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಪಾಲಿಸಲು ಅವರಿಗೆ ಆದೇಶ ಸಿಗಲಿಲ್ಲವೆಂದಾದರೆ, ದೆಹಲಿ ಪೊಲೀಸರು ಮಾಡುವುದಾದರೂ ಏನು? ಮತ್ತು ಈ ಆದೇಶಗಳನ್ನು ಅವರು ಪಾಲಿಸಲಿಲ್ಲವೆಂದಾದರೆ, ಅವರು ತಮ್ಮ ಕೆಲಸವನ್ನೇ ಕಳೆದುಕೊಳ್ಳುತ್ತಿದ್ದರು.’ ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ನೇರವಾಗಿ ಕೇಂದ್ರ ಸರಕಾರ ಹೆಸರನ್ನು ಎತ್ತದೇ ಕೇಂದ್ರದ ನಡೆಯನ್ನು ಟೀಕಿಸಿದ್ದಾರೆ.
ಜನವರಿ 05 ರವಿವಾರದಂದು ರಾತ್ರಿ ಜೆ.ಎನ್.ಯು. ಕ್ಯಾಂಪಸ್ ನಲ್ಲಿ ಭುಗಿಲೆದ್ದ ಘರ್ಷಣೆಯಲ್ಲಿ ಜೆ.ಎನ್.ಯು. ವಿದ್ಯಾರ್ಥಿ ನಾಯಕಿ ಐಷೆ ಘೋಷ್ ಸೇರಿದಂತೆ ಸುಮಾರು 28 ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಕ್ಯಾಂಪಸ್ ಹಿಂಸೆಗೆ ಸಂಬಂಧಿಸಿದಂತೆ ಸಭೆಯೊಂದು ನಡೆಯುತ್ತಿದ್ದ ಸಂದರ್ಭದಲ್ಲಿ ಕಾಲೇಜು ಆವರಣಕ್ಕೆ ನುಗ್ಗಿದ ಹಲ್ಲೆಕೋರರು ಅಲ್ಲಿದ್ದ ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್ ಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಬಳಿಕ ಹಾಸ್ಟೆಲ್ ಗಳ ಒಳಗೂ ನುಗ್ಗಿ ಸಿಕ್ಕ ಸಿಕ್ಕವರ ಮೇಲೆಲ್ಲಾ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದರು.