Advertisement
ಈ ಸಂಬಂಧಿಸಿದಂತೆ ಕಿಸಾನ್ ಮಜದೂರ್ ಸಂಘರ್ಷ (ಕೆಎಂಎಸ್) ನಾಯಕ ಸರ್ವಾನ್ ಸಿಂಗ್ ಪಂಧೇರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಖನೌರಿಯಲ್ಲಿ ನಡೆದ ಘಟನೆ ಬಗ್ಗೆ ನಾವು ಚರ್ಚೆ ನಡೆಸುತ್ತೇವೆ. ದಿಲ್ಲಿ ಕಡೆಗಿನ ನಮ್ಮ ಪ್ರತಿಭಟನೆ ಜಾಥಾವನ್ನು 2 ದಿನ ಸ್ಥಗಿತಗೊಳಿಸುತ್ತಿದ್ದೇವೆ. ಚಳವಳಿಯ ಮುಂದಿನ ಭಾಗವೇನು, ಸಂಪೂರ್ಣ ಪರಿಸ್ಥಿತಿ ಏನು ಎಂಬುದರ ಬಗ್ಗೆ ಶುಕ್ರವಾರ ಸಂಜೆ ತಿಳಿಸುತ್ತೇವೆ ಎಂದಿದ್ದಾರೆ.
160 ರೈತರಿಗೆ ಗಾಯ: ಪಂಜಾಬ್ ಸರಕಾರ ವರದಿ
ದತ್ತ ಸಿಂಗ್-ಖನೌರಿ ಗಡಿಯಲ್ಲಿ ಪ್ರತಿಭಟನನಿರತ ರೈತರು ಪೊಲೀಸರನ್ನು ಸುತ್ತುವರಿದು ಕಳೆಗಳಿಗೆ ಮೆಣಸಿನಕಾಯಿ ಸುರಿದು ಬೆಂಕಿ ಹಚ್ಚಿ, ಘಾಟು ಎಬ್ಬಿಸಿದ್ದಾರೆ. ಅಲ್ಲದೆ ಪೊಲೀಸರ ಮೇಲೆಯೇ ದೊಣ್ಣೆ ಮತ್ತು ಮಚ್ಚುಗಳನ್ನು ಬಳಸಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ 12 ಮಂದಿ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹರಿಯಾಣ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದೇ ವೇಳೆ ಪಂಜಾಬ್ ಸರಕಾರವು ಹೇಳಿಕೆ ನೀಡಿದ್ದು, ಶಾಂತವಾಗಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಹರಿಯಾಣ ಪೊಲೀಸರು ಅಶ್ರುವಾಯು ಪ್ರಯೋಗಿಸುತ್ತಿದ್ದು, ಇದರಿಂದ 160 ರೈತರು ಗಾಯಗೊಂಡಿದ್ದಾರೆ ಎಂದಿದೆ. ಕೇಂದ್ರ ಗೃಹ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ಪಂಜಾಬ್ ಮುಖ್ಯ ಕಾರ್ಯದರ್ಶಿ ಅನುರಾಗ್ ವರ್ಮಾ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.
Related Articles
ಪ್ರತಿಭಟನೆಯ ಬಿಸಿ ಹೆಚ್ಚುತ್ತಿರುವಂತೆಯೇ ರೈತರೊಂದಿಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಲು ಕೇಂದ್ರ ಸರಕಾರ ನಿಶ್ಚಯಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಪ್ರತಿಭಟನನಿರತ ರೈತ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಎಂಎಸ್‌ಪಿ ಸಹಿತ ಎಲ್ಲ ವಿಚಾರಗಳನ್ನು ಚರ್ಚಿಸಲು ನಾವು ಸಿದ್ದರಿದ್ದೇವೆ. ಮಾತುಕತೆ ಮೂಲಕ ಮಾತ್ರವೇ ಸಮಸ್ಯೆ ಬಗೆಹರಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ರೈತ ನಾಯಕರನ್ನು ಮಾತುಕತೆಗೆ ಆಹ್ವಾನಿಸುತ್ತಿದ್ದು, ಶಾಂತಿ ಕಾಯ್ದುಕೊಳ್ಳುವಂತೆ ಪ್ರತಿಭಟನನಿರತ ರೈತರಿಗೆ ಮನವಿ ಮಾಡುತ್ತಿದ್ದೇನೆ ಎಂದು ಮುಂಡಾ ಹೇಳಿದ್ದಾರೆ. ಈ ಪ್ರಸ್ತಾವದ ಬಗ್ಗೆ ಚಿಂತನೆ ನಡೆಸುವುದಾಗಿ ರೈತ ನಾಯಕ ಸರ್ವಾನ್ ಹೇಳಿದ್ದಾರೆ.
Advertisement