Advertisement

ರೈತರ ಬೆಂಕಿಗೆ ತುಪ್ಪ ಸುರಿದ ಸಿಎಂಗಳು; ಹರಿಯಾಣ- ಪಂಜಾಬ್‌ ಸಿಎಂಗಳ ವಾಕ್ಸಮರ

11:45 PM Nov 28, 2020 | mahesh |

ಹೊಸದಿಲ್ಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧದ “ದಿಲ್ಲಿ ಚಲೋ’ ರೈತಹೋರಾಟ ರಾಜಧಾನಿಗೆ ಲಗ್ಗೆ ಇಡುತ್ತಿದ್ದಂತೆಯೇ ಹರಿಯಾಣ ಮತ್ತು ಪಂಜಾಬ್‌ನ ಸಿಎಂಗಳ ವಾಕ್ಸಮರ ಶನಿವಾರ ಜೋರಾಗಿದೆ. ಪಂಜಾಬ್‌ನಿಂದ ಹೊರಟ ರೈತರು ದಿಲ್ಲಿ ತಲುಪುವವರೆಗೂ ಹರಿಯಾಣದುದ್ದಗಲ ಅಶ್ರುವಾಯು, ಜಲಫಿರಂಗಿ ಮೂಲಕ ಅನ್ನದಾತರನ್ನು ಚದುರಿಸಲೆತ್ನಿಸಿದ್ದ ಸಿಎಂ ಮನೋಹರ ಲಾಲ್‌ ಖಟ್ಟರ್‌ ಮಾತುಗಳು ಉರಿವ ಬೆಂಕಿಗೆ ತುಪ್ಪ ಸುರಿದಿದ್ದವು.

Advertisement

ಖಟ್ಟರ್‌ ಹೇಳಿದ್ದೇನು?: “ಪಂಜಾಬ್‌ ರೈತರಷ್ಟೇ ಪ್ರತಿಭಟಿಸುತ್ತಿದ್ದಾರೆ. ಹರಿಯಾಣ ರೈತರು ದೂರ ಉಳಿದಿದ್ದಾರೆ. ಖಲಿಸ್ತಾನ್‌ ಹೋರಾಟಗಾರರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಸಂಯಮ ಕಾಪಾಡಿ­ಕೊಂಡ ಹರಿಯಾಣ ರೈತರಿಗೆ, ಪೊಲೀಸರಿಗೆ ನನ್ನ ಧನ್ಯವಾದಗಳು. ಪ್ರತಿಭಟನೆಯ ಯಾವುದೇ ದುರಂತಕ್ಕೂ ಪಂಜಾಬ್‌ ಸಿಎಂ ನೇರ ಹೊಣೆ’ ಎಂದು ಹರಿಯಾಣ ಸಿಎಂ ಮನೋಹರ ಲಾಲ್‌ ಖಟ್ಟರ್‌ ಹೇಳಿದ್ದಾರೆ.

“ಕ್ಯಾಪ್ಟನ್‌’ ಕಿಡಿಕಿಡಿ: ನೆರೆರಾಜ್ಯದ ಬಿಜೆಪಿ ಸಿಎಂ ಮಾತುಗಳು, ಪಂಜಾಬ್‌ನ ಕಾಂಗ್ರೆಸ್‌ ಆಡಳಿತದ ದೊರೆ ಕ್ಯಾ| ಅಮರಿಂದರ್‌ ಸಿಂಗ್‌ರನ್ನು ಕೆರಳಿಸಿವೆ. “ಪಂಜಾಬ್‌ ರೈತರನ್ನು ತಡೆಯಲಿಲ್ಲ. ದಿಲ್ಲಿಯೂ ತಡೆಯಲಿಲ್ಲ. ಏಕೆಂದರೆ, ಪ್ರತಿಭಟಿಸುವುದು ಅವರ ಹಕ್ಕು. ಆದರೆ, ನೀವೇಕೆ ರೈತರನ್ನು ತಡೆದಿರಿ? ಅಶ್ರುವಾಯು, ಜಲಫಿರಂಗಿ­ಗಳಳೇಕೆ ಪ್ರಯೋಗಿಸಿದಿರಿ? ಹರಿಯಾಣ ಮುಖ್ಯ­ ಮಂತ್ರಿಯ ಅಪ್ರಾಮಾಣಿಕ ವರ್ತನೆ ನನಗೆ ಹಿಡಿಸೋದಿಲ್ಲ’ ಎಂದು ಕಿಡಿಕಾರಿದ್ದಾರೆ. “ಖಟ್ಟರ್‌ ನನಗೆ ಹತ್ತಾರು ಸಲ ಕರೆ ಮಾಡಿದ್ದಾರೆ. ಈಗಲೂ ಕರೆ ಮಾಡುತ್ತಿದ್ದಾರೆ. ಆದರೂ, ನಾನು ಕರೆ ಸ್ವೀಕರಿಸೋದಿಲ್ಲ. ಸ್ವಾಭಿಮಾನಿ ರೈತರನ್ನು ಖಲಿಸ್ತಾನಿಗರಿಗೆ ಹೋಲಿಸಿದ ಖಟ್ಟರ್‌ ಬಹಿರಂಗ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ. “ಕೊರೊನಾ ವೈರಸನ್ನೂ ಲೆಕ್ಕಿಸದೆ, ನಮ್ಮ ಮುಂದಿನ ಪೀಳಿಗೆಯ ರಕ್ಷಣೆಗಾಗಿ ಬೀದಿಗಿಳಿದ ರೈತರಿಗೆ ನಾನು ಆಭಾರಿ’ ಎಂದಿದ್ದಾರೆ.

ಡಿ.3ರ ಒಳಗಾಗಿ ರೈತರೊಂದಿಗೆ ಕೇಂದ್ರ ಮಾತುಕತೆ ನಡೆಸ­ಬೇಕಾದರೆ ಸರಿಯಾದ ರೀತಿಯ ಸ್ಥಳಕ್ಕೆ ತೆರಳಿ ಪ್ರತಿಭಟಿಸಿ. ತತ್‌ಕ್ಷಣವೇ ಸರಕಾರ ನಿಮ್ಮ ಬಳಿಗೆ ಬಂದು ಮಾತುಕತೆ ನಡೆಸಲಿದೆ ಮತ್ತು ಸಮಸ್ಯೆಗಳನ್ನು ಪರಿಹರಿಸಲಿದೆ.
ಅಮಿತ್‌ ಶಾ, ಗೃಹ ಸಚಿವ

ನಾವೇನು ಪಾಕ್‌ನವ್ರಾ?
“ಹರಿಯಾಣದ ರೈತರ್ಯಾರೂ ಹೋರಾಟದಲ್ಲಿ ಪಾಲ್ಗೊಂಡಿಲ್ಲ’ ಎಂದ ಸಿಎಂ ಮನೋಹರ ಲಾಲ್‌ ಖಟ್ಟರ್‌ ವಿರುದ್ಧ ಸ್ವತಃ ರಾಜ್ಯದ ರೈತರು ಸಿಟ್ಟಿಗೆದ್ದಿದ್ದಾರೆ. ಹಲವರು ತಮ್ಮ ಆಧಾರ್‌ ಕಾರ್ಡ್‌ ಪ್ರದರ್ಶಿಸಿ, “ನಾವು ಹರಿಯಾಣದವರಲ್ಲದೆ, ಪಾಕಿಸ್ಥಾನದವ್ರಾ?’ ಎಂದು ಖಾರವಾಗಿ ಪ್ರಶ್ನಿಸಿರುವ ವೀಡಿಯೋಗಳು
ವೈರಲ್‌ ಆಗಿವೆ.

Advertisement

ಹೈವೋಲ್ಟೇಜ್‌ ಹೇಗಿತ್ತು?
ಝಾನ್ಸಿ- ಮಿರ್ಜಾಪುರ ರಾಷ್ಟ್ರೀಯ ಹೈವೇ ಮಧ್ಯದಲ್ಲಿ ಉ.ಪ್ರ.ದ 500 ರೈತರು 2 ತಾಸು ಕುಳಿತು ಪ್ರತಿಭಟಿಸಿ, ನೂತನ ಕೃಷಿ ಕಾಯ್ದೆ ವಿರುದ್ಧ ಆಕ್ರೋಶ ಹೊರಹಾಕಿದರು.  ಶಾಂತಿಯುತ ಪ್ರತಿಭಟನೆಗೆ ಅನುಮತಿಸಿದ್ದ­ರಿಂದಾಗಿ ಬುರಾರಿಯ “ನಿರಂಕಾರಿ ಸಮಾಗಮ್‌’ ಮೈದಾನ ತಲುಪಿರುವ 400ಕ್ಕೂ ಅಧಿಕ ರೈತರು ಘೋಷಣೆ ಕೂಗುತ್ತಾ, ರೈತಗೀತೆ ಹಾಡುತ್ತಾ, ಕೆಂಪು- ಹಸುರು- ನೀಲಿ ಧ್ವಜ ಪ್ರದರ್ಶಿಸಿದರು.
ಘಾಜಿಯಾಬಾದ್‌- ದಿಲ್ಲಿ ಗಡಿಯಲ್ಲಿ ಮತ್ತೆ ಪೊಲೀಸ್‌- ರೈತರ ವಿರುದ್ಧ ಸಂಘರ್ಷ ಏರ್ಪಟ್ಟಿತ್ತು. ಕ್ರಿಕೆಟಿಗ ಯುವರಾಜ್‌ ಸಿಂಗ್‌ರ ತಂದೆ ಯೋಗರಾಜ್‌ ಸಿಂಗ್‌ ದಿಲ್ಲಿ ಗಡಿಯಲ್ಲಿ ರೈತರನ್ನು ಭೇಟಿಯಾಗಿ, ಧೈರ್ಯ ತುಂಬಿದರು. ಪಂಜಾಬ್‌ನ ವಿವಿಧೆಡೆ ರೈತ ಹೋರಾಟಗಾರರು ರೈಲುಗಳನ್ನು ತಡೆದರು.

Advertisement

Udayavani is now on Telegram. Click here to join our channel and stay updated with the latest news.

Next