Advertisement

ಮಹದಾಯಿಗೆ ಆಗ್ರಹಿಸಿ ರೈತರಿಂದ ದೆಹಲಿ ಚಲೋ

10:20 AM Nov 25, 2019 | Team Udayavani |

ಹುಬ್ಬಳ್ಳಿ: ಮಹದಾಯಿ, ಕಳಸಾ- ಬಂಡೂರಿ ಯೋಜನೆ ಅನುಷ್ಠಾನ ಹಾಗೂ ಗೆಜೆಟ್‌ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ಮನವಿ ಮಾಡಲು ಮಲಪ್ರಭಾ, ಮಹದಾಯಿ, ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟದ ನೇತೃತ್ವದಲ್ಲಿ ರೈತ ಹೋರಾಟಗಾರರು ರವಿವಾರ ದೆಹಲಿ ಪ್ರಯಾಣ ಬೆಳೆಸಿದರು.

Advertisement

ನವಲಗುಂದ, ನರಗುಂದದಿಂದ ಆಗಮಿಸಿದ್ದ ಹೋರಾಟಗಾರರು ಇಲ್ಲಿನ ರೈಲ್ವೆ ನಿಲ್ದಾಣದಿಂದ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲಿನ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು. ಸುಮಾರು 35 ರೈತ ಹೋರಾಟಗಾರರು ದೆಹಲಿಗೆ ಪ್ರಯಾಣಿಸಿದ್ದು, ಸಚಿವ ಪ್ರಹ್ಲಾದ ಜೋಶಿ ಅವರ ಮೂಲಕ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸುವುದು, ಗೋವಾ ಸರಕಾರದ ತಕಾರರು ಮಾಡದಂತೆ ಸೂಚನೆ ನೀಡುವುದು, ನ್ಯಾಯಾಧಿಕರಣದ ತೀರ್ಪಿನ ಪ್ರಕಾರ ನೀರು ಬಳಕೆ ಮಾಡಿಕೊಳ್ಳಲು ಯೋಜನೆ ಅನುಷ್ಠಾನಗೊಳಿಸಲು ಮನವಿ ಮಾಡಲಿದ್ದಾರೆ.

ಮಾಧ್ಯಮದವರೊಂದಿಗೆ ರೈತ ಹೋರಾಟಗಾರ ಸುಭಾಶ್ಚಚಂದ್ರಗೌಡ ಪಾಟೀಲ ಮಾತನಾಡಿ, ನಾಲ್ಕೈದು ದಶಕಗಳ ಈ ಬೇಡಿಕೆ ಈಡೇರಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಹಾಗೂ ಈ ಭಾಗದ ಜನಪ್ರತಿನಿಧಿಗಳ ಸಂಪೂರ್ಣ ನಿರ್ಲಕ್ಷ್ಯವಿದೆ. ಈ ಭಾಗದ ನಿರಂತರ ಹೋರಾಟದ ಫಲವಾಗಿ ನ್ಯಾಯಾಧಿಕರಣ ಮಹದಾಯಿ ನೀರು ಬಳಸಿಕೊಳ್ಳಲು ತೀರ್ಪು ನೀಡಿದರೂ ಕೇಂದ್ರ ಸರಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ. ಕುಡಿಯುವ

ನೀರಿನ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಒಂದೂವರೆ ವರ್ಷ ಕಳೆದರೂ ನ್ಯಾಯಾಧಿಕರಣದ ತೀರ್ಪು ಅನುಷ್ಠಾನಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಯಾವುದೇ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಈ ಸಮಸ್ಯೆಯನ್ನು ಜೀವಂತವಾಗಿಡುವ ಕೆಲಸ ರಾಜಕಾರಣಿಗಳಿಂದ ನಡೆಯುತ್ತಿದೆ ಎಂದರು. ಒಕ್ಕೂಟದ ಅಧ್ಯಕ್ಷ ಬಸಪ್ಪ ಬೀರಣ್ಣವರ ಮಾತನಾಡಿ, ನ್ಯಾಯಾಧಿಕರಣದ ತೀರ್ಪನ್ನು ಧಿಕ್ಕರಿಸಿ ಗೋವಾ ಸರಕಾರ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ. ಪರಿಸರ ನೆಪವೊಡ್ಡಿ ಯೋಜನೆ ವಿಳಂಬ ಮಾಡುತ್ತಿರುವುದು ಸ್ಪಷ್ಟವಾಗಿದೆ.

ಗೋವಾ ಸರಕಾರ ನ್ಯಾಯಾಂಗ ವ್ಯವಸ್ಥೆಗೂ ಗೌರವ ನೀಡುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಬೆಳವಣಿಗೆ ಮಾರಕವಾಗಿದೆ. ಸಮುದ್ರ ಸೇರುವ ನೀರು ಕೊಡಲು ಗೋವಾ ಸರಕಾರ ವಿನಾ ಕಾರಣ ಸಮಸ್ಯೆ ಉಂಟು ಮಾಡುತ್ತಿದೆ. ಕೆಲಸಕ್ಕೆ ಬಾರದ ವಿಷಯಗಳಿಂದ ಕೇಂದ್ರ ಸರಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಇದೆಲ್ಲವನ್ನೂ ವಿರೋಧಿಸಿ ದೆಹಲಿಗೆ ಹೊರಟಿದ್ದು, ಸಚಿವ ಪ್ರಹ್ಲಾದ ಜೋಶಿ ಅವರ ಮೂಲಕ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಆದಷ್ಟು ಬೇಗೆ ಯೋಜನೆ ಅನುಷ್ಠಾನಗೊಳಿಸುವಂತೆ ಮನವಿ ಮಾಡಲಾಗುವುದು ಎಂದರು.

Advertisement

ಹೋರಾಟಗಾರ ಹೇಮನಗೌಡ ಬಸವನಗೌಡರ ಮಾತನಾಡಿ, ಎಲ್ಲ ರಾಜಕೀಯ ಪಕ್ಷದ ನಾಯಕರಿಗೂ ಮಹದಾಯಿ ಯೋಜನೆಗೆ ಪರಿಹಾರ ದೊರಕಿಸುವುದು ಬೇಕಿಲ್ಲ. ರಾಜಕಾರಣಕ್ಕಾಗಿ ಈ ಯೋಜನೆಯನ್ನು ಜೀವಂತವಾಗಿಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next