ಮುಂಡರಗಿ: ಮುಂಡರಗಿ ಮಾರ್ಗವಾಗಿ ಹರಪನಹಳ್ಳಿಗೆ ರೈಲು ಮಾರ್ಗ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಹೋರಾಟ ವೇದಿಕೆ, ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನಾ ಜಂಟಿ ಕ್ರಿಯಾ ಸಮಿತಿ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಕೈಗೊಳ್ಳಲು ಶುಕ್ರವಾರ ಪಟ್ಟಣದದಿಂದ ದೆಹಲಿಗೆ ತೆರಳಿದರು.
ಮುಖಂಡ ಬಸವರಾಜ ನವಲಗುಂದ ಮಾತನಾಡಿ, ಗದಗದಿಂದ ಮುಂಡರಗಿ ಮಾರ್ಗವಾಗಿ ಹರಪನಹಳ್ಳಿಗೆ ರೈಲು ಮಾರ್ಗ ಮಂಜೂರು ಮಾಡಬೇಕು. ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೂ ಕೇಂದ್ರ ಸರ್ಕಾರ ಈ ಭಾಗಕ್ಕೆ ನೂತನ ರೈಲು ಮಾರ್ಗ ಮಂಜೂರು ಮಾಡದೇ ಅನ್ಯಾಯ ಮಾಡಿದೆ ಎಂದು ದೂರಿದರು.
ನೂತನ ರೈಲು ಮಾರ್ಗ ಮಂಜೂರು ಮಾಡಬೇಕು ಎಂದು ಈಗಾಗಲೇ ಹಲವಾರು ಬಾರಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರೈಲು ಮಾರ್ಗಕ್ಕಾಗಿ ಪುನಃ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯಲು ಜು.7ರಂದು ದೆಹಲಿಯಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು. ಅಲ್ಲಿ ವಿವಿಧ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ವೀರಣ್ಣ ಘಟ್ಟಿ ಮಾತನಾಡಿ, ಈ ವರ್ಷ ನೂತನ ರೈಲು ಮಾರ್ಗ ಮಂಜೂರು ಮಾಡದಿದ್ದರೆ ಗದಗ, ಮುಂಡರಗಿ, ಹೂವಿನಹಡಗಲಿ, ಹರಪನಹಳ್ಳಿ ಜನರೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ವ್ಯಾಪಾರಿ ರಾಮಸ್ವಾಮಿ ಹೆಗ್ಗಡಾಳ ಅವರು ದೆಹಲಿ ಚಲೋ ಪ್ರತಿಭಟನೆಗೆ ಚಾಲನೆ ನೀಡಿದರು. ಯಮುನಪ್ಪ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಮಂಜು ಕಾಗನೂರಮಠ, ಕೃಷ್ಣ ಬಡಿಗೇರ, ಆನಂದಗೌಡ ಪಾಟೀಲ, ಸಂಗಪ್ಪ ಕುಂಬಾರ, ಮೌಲಾಸಾಬ್ ಭಗವಾನ, ನಾಗರಾಜ ಹೊಂಬಳಗಟ್ಟಿ, ಶಶಿಧರ ಹೊಸಪೇಟಿ, ಶಿವಯೋಗಿ ಕೊಪ್ಪಳ, ವಿ.ಆರ್.ಹಿರೇಮಠ, ಮಂಜುನಾಥ ಗಂಗಾವತಿ, ಅಶೋಕ ತ್ಯಾಮನವರ್, ಬಸಪ್ಪ ವಡ್ಡರ, ರವಿಗೌಡ ಪಟೀಲ ಮೊದಲಾದವರು ಉಪಸ್ಥಿತರಿದ್ದರು.