ನವ ದೆಹಲಿ: ದೆಹಲಿಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ವಿಜ್ಞಾನ ವಿಭಾಗದಲ್ಲಿ ಅಭ್ಯಸಿಸಲು ಸೀಟ್ ಸಿಗಲಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇತ್ತೀಚೆಗೆ ನಡೆದಿದೆ.
16 ರ ಹರೆಯದ ಕುನಾಲ್ ರಾಯ್ ಎಂಬ ವಿದ್ಯಾರ್ಥಿ ತನ್ನ ಗೆಳೆಯರೊಂದಿಗೆ ವಿಜ್ಞಾನ ವಿಭಾಗಕ್ಕೆ ಸೇರಲು ಬಯಸಿದ್ದ. ಆದರೆ ಆತನ ಗೆಳೆಯರೆಲ್ಲರು ತಮ್ಮ ಆದ್ಯತೆಯ ವಿಷಯವನ್ನು ಅಧ್ಯಯನ ನಡೆಸಲು ಇತರ ಸಂಸ್ಥೆಗಳಲ್ಲಿ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದಾಗ್ಯೂ, ಕುನಾಲ್ ವಿಜ್ಞಾನ ವಿಭಾಗದಲ್ಲೇ ಮುಂದುವರಿಯಲು ಪ್ರಯತ್ನಿಸಿದ್ದನಾದರೂ ಎಲ್ಲೂ ಸೀಟ್ ಸಿಗದ ಕಾರಣ ಕಲಾ ವಿಭಾಗಕ್ಕೆ ಸೇರಿದ್ದ.
ಗುರುವಾರ ದೆಹಲಿಯ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಶಾಲೆಯ ವಸತಿ ನಿಲಯದಲ್ಲೇ ಕುನಾಲ್ ನ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುನಾಲ್ ದೆಹಲಿಯ ನಂಗ್ಲೋಲಿಯ ರಾಣಿ ಖೇರಾ ನಿವಾಸಿಗಳಾದ ಶಿವ್‌ಚಾಂದ್ ರಾಯ್ ಅವರ ಮಗನಾಗಿದ್ದಾನೆ. ತಂದೆ ಕಲಾವಿಭಾಗಕ್ಕೆ ಸೇರಿದ ಬಳಿಕ ಮಗನ ಮನ ಪರಿವರ್ತಿಸಲು ಪ್ರಯತ್ನಪಟ್ಟರಾದರೂ ಕುನಾಲ್ ಒಂಟಿತನ ಮತ್ತು ಹತಾಶೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.
ಗುರುವಾರ ಬೆಳಗ್ಗೆ 6 ಗಂಟೆಯ ಆಸುಪಾಸಿನಲ್ಲಿ ಹರಿದ ಬೆಡ್ ಶೀಟ್ ಉಪಯೋಗಿಸಿಕೊಂಡು ಸೀಲಿಂಗ್ ನಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ರಾಡ್ ವೊಂದಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಆರ್.ಟಿ.ಆರ್.ಎಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.