Advertisement

ಇಂದು ಡೆಲ್ಲಿ-ಬೆಂಗಾಲ್‌ ಫೈನಲ್‌; ಮೊದಲ ಕಬಡ್ಡಿ ಕಿರೀಟಕ್ಕೆ ಫೈಟ್‌

10:58 AM Oct 20, 2019 | Sriram |

ಅಹ್ಮದಾಬಾದ್‌: ಪ್ರೊ ಕಬಡ್ಡಿ 7ನೇ ಆವೃತ್ತಿ ಫೈನಲ್‌ ಹಂತಕ್ಕೆ ತಲುಪಿದೆ. ಕೌತುಕದ ಹೋರಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಅಹ್ಮದಾಬಾದ್‌ನಲ್ಲಿ ಶನಿವಾರ ದಬಾಂಗ್‌ ಡೆಲ್ಲಿ-ಬೆಂಗಾಲ್‌ ವಾರಿಯರ್ ಪ್ರಶಸ್ತಿ ಸಮರದಲ್ಲಿ ಮುಖಾಮುಖೀಯಾಗಲಿದ್ದು, ಅಭಿಮಾನಿಗಳು ಈ ರೋಚಕ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಎರಡೂ ತಂಡಗಳು ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ್ದರಿಂದ ಪ್ರೊ ಕಬಡ್ಡಿ ಇತಿಹಾಸದಲ್ಲಿ ನೂತನ ಚಾಂಪಿಯನ್‌ ಒಂದರ ಉದಯವಾಗಲಿದೆ.

Advertisement

ಡೆಲ್ಲಿ ಸ್ಥಿರ ಪ್ರದರ್ಶನ
ಕೂಟದ ಆರಂಭದಿಂದಲೂ ಡೆಲ್ಲಿ ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ. ಪ್ರತೀ ಹಂತದಲ್ಲೂ ತನ್ನ ಸಾಮರ್ಥ್ಯವನ್ನು ತೆರೆದಿರಿಸಿದೆ. ನವೀನ್‌ ಕುಮಾರ್‌ ಡೆಲ್ಲಿ ತಂಡದ ಯಶಸ್ವಿ ರೈಡರ್‌. ಪ್ರತಿ ಪಂದ್ಯದಲ್ಲೂ ಇವರು ತೋರಿರುವ ನಿರ್ವಹಣೆ ಅಮೋಘ. ಫೈನಲ್‌ನಲ್ಲೂ ಅವರಿಂದ ಸಾಕಷ್ಟು ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ಅಕಸ್ಮಾತ್‌ ನವೀನ್‌ ವಿಫ‌ಲರಾದರೂ ಚಂದ್ರನ್‌ ರಂಜಿತ್‌ ಮತ್ತು ವಿಜಯ್‌ ಯಾವುದೇ ಸಂದರ್ಭದಲ್ಲೂ ತಂಡಕ್ಕೆ ನೆರವಾಗಬಲ್ಲರು. ಬ್ಯಾಕ್‌ ಅಪ್‌ ಟೀಮ್‌ ಪವರ್‌ ಏನು ಎನ್ನುವುದು ಬೆಂಗಳೂರು ವಿರುದ್ಧದ ಸೆಮಿಫೈನಲ್‌ನಲ್ಲಿ ಸಾಬೀತಾಗಿದೆ. ರೈಡಿಂಗ್‌ ಮಾತ್ರವಲ್ಲದೆ ಅಗತ್ಯಬಿದ್ದರೆ ಟ್ಯಾಕಲ್‌ನಲ್ಲೂ ಇವರಿಬ್ಬರು ಮಿಂಚುವ ಸಾಹಸಿಗರು. ಉಳಿದಂತೆ ರವಿಂದರ್‌ ಪಹಲ್‌, ಜೋಗಿಂದರ್‌ ನರ್ವಾಲ್‌ ಮತ್ತು ವಿಶಾಲ್‌ ಮಾನೆ ಟ್ಯಾಕಲ್‌ ವಿಭಾಗದಲ್ಲಿ ಅದ್ಭುತ ನಿರ್ವಹಣೆ ನೀಡಬಲ್ಲರು.

ಬೆಂಗಾಲ್‌ಗೆ ಮಣಿಂದರ್‌ ಚಿಂತೆ
ಬೆಂಗಾಲ್‌ ತಂಡದ ತಾರಾ ಆಟಗಾರ ಮಣಿಂದರ್‌ ಸಿಂಗ್‌ ಗಾಯಕ್ಕೆ ತುತ್ತಾಗಿದ್ದಾರೆ. ಇವರು ಫೈನಲ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಇದು ತಂಡಕ್ಕೆ ಭಾರೀ ಹೊಡೆತವಾಗಿ ಪರಿಗಣಿಸಬಹುದು. ಸೆಮಿಫೈನಲ್‌ನಲ್ಲೂ ಮಣಿಂದರ್‌ ಆಡಿರಲಿಲ್ಲ. ಇವರ ಅನುಪಸ್ಥಿತಿಯಲ್ಲೂ ಗೆದ್ದ ಬೆಂಗಾಲ್‌ ಫೈನಲ್‌ಗೆ ಏರಿದ್ದನ್ನು ಮರೆಯುವಂತಿಲ್ಲ.
ಮಣಿಂದರ್‌ ಸಿಂಗ್‌ ಭುಜದ ನೋವಿನಿಂದ ಬಳಲುತ್ತಿದ್ದಾರೆ. ಸದ್ಯ ನೋವು ಕಡಿಮೆಯಾಗಿದೆ ಎನ್ನಲಾಗಿದೆ. ಶುಕ್ರವಾರ ನಡೆದ ಪತ್ರಿಕಾಗೋಷ್ಠಿಗೆ ಮಣಿಂದರ್‌ ಸಿಂಗ್‌ ಆಗಮಿಸಿದ್ದರು. ಈ ವೇಳೆ ತಾನು ಗುಣಮುಖನಾಗಿದ್ದು, ವೈದ್ಯರು ಸೂಚನೆ ನೀಡಿದರೆ ಫೈನಲ್‌ನಲ್ಲಿ ಆಡಲು ಸಿದ್ಧ ಎಂದರು.

ಸುಕೇಶ್‌ ಹೆಗ್ಡೆ, ಮೊಹಮ್ಮದ್‌ ನಬಿಭಕ್‌, ಕೆ. ಪ್ರಪಂಜನ್‌, ರಿಂಕು ನರ್ವಾಲ್‌, ಜೀವಾ ಕುಮಾರ್‌ ಫಾರ್ಮ್ ನಲ್ಲಿರುವುದು ಬೆಂಗಾಲ್‌ ಪಾಲಿಗೆ ಸಮಾಧಾನಕರ ಸಂಗತಿ.

Advertisement

ಮೊದಲ ಸಲ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖೀ ಯಾಗುತ್ತಿವೆ. ಯಾವ ತಂಡ ಗೆಲ್ಲುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ಕಾದು ನೋಡೋಣ.
-ಬಿ.ಸಿ. ರಮೇಶ್‌,
ಬೆಂಗಾಲ್‌ ಕೋಚ್‌.

ಎರಡೂ ತಂಡಗಳು ಬಲಿಷ್ಠವಾಗಿವೆ. ಫೈನಲ್‌ಗೆ ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದೇವೆ. ನಮ್ಮ ತಂಡವೇ ಕಪ್‌ ಗೆಲ್ಲಲಿ ಎಂದು ಆಶಿಸುವೆ.
-ಕೃಶನ್‌ ಕುಮಾರ್‌ ಹೂಡಾ,
ಡೆಲ್ಲಿ ಕೋಚ್‌.

Advertisement

Udayavani is now on Telegram. Click here to join our channel and stay updated with the latest news.

Next