ನವದೆಹಲಿ: ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನೇತೃತ್ವ ದೆಹಲಿ ಸರ್ಕಾರ ಸಮಿತಿಯನ್ನು ರಚಿಸುವುದಾಗಿ ತಿಳಿಸಿದೆ. ಅಲ್ಲದೇ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಸೋಂಕಿತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಇದನ್ನೂ ಓದಿ:ಜೂ.15ರಿಂದ ಶೈಕ್ಷಣಿಕ ವರ್ಷಾರಂಭವಿಲ್ಲ; 2021-22ನೇ ಸಾಲಿನ ನೂತನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ
ಈ ಸಮಿತಿಯನ್ನು ರಚಿಸಲು ದೆಹಲಿ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ಅನಿ ಬೈಜಲ್ ಅವರ ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದೆ. ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ.
ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಕುರಿತು ತನಿಖೆ ನಡೆಸಲು ವೈದ್ಯಕೀಯ ತಜ್ಞರು ಸೇರಿದಂತೆ ನಾಲ್ವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು. ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ದೊರೆತ ಕೂಡಲೇ ಸಮಿತಿ ತನಿಖೆಯನ್ನು ನಡೆಸಲು ಆರಂಭಿಸಲಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ಸಮಿತಿ ಸದಸ್ಯರು ವಾರದಲ್ಲಿ ಎರಡು ಬಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪ್ರತಿಯೊಂದು ಪ್ರಕರಣದ ಬಗ್ಗೆ ತನಿಖೆ ನಡೆಸಿ, ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿದೆಯೇ ಅಥವಾ ಇತರ ಕಾರಣಗಳಿಂದಾಗಿಯೇ ಎಂಬುದನ್ನು ನಿರ್ಧರಿಸಲಿದೆ. ಒಂದು ವೇಳೆ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವುದಾಗಿ ಪತ್ತೆಯಾದರೆ ಆ ಕುಟುಂಬದ ಸದಸ್ಯರಿಗೆ ದೆಹಲಿ ಸರ್ಕಾರ ಐದು ಲಕ್ಷ ರೂ. ಪರಿಹಾರ ನೀಡಲಿದೆ ಎಂದು ತಿಳಿಸಿದ್ದಾರೆ.