ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ವಾಯು ಗುಣಮಟ್ಟ ಅತ್ಯಂತ ಕಳಪೆ ಗುಣಮಟ್ಟಕ್ಕೆ ಇಳಿದಿದೆ. ಈ ಕಾರಣದಿಂದ ದಿಲ್ಲಿಯ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ನವೆಂಬರ್ 10ರವರೆಗೆ ರಜೆ ಘೋಷಿಸಿ ದಿಲ್ಲಿ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಆಪ್ ಸರ್ಕಾರದ ಸಚಿವೆ ಆತಿಶಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.
“6ರಿಂದ 12ವರರೆಗಿನ ತರಗತಿಗಳಿಗೆ ಆನ್ ಲೈನ್ ತರಗತಿಗಳಿಗೆ ಬದಲಾಯಿಸುವ ಆಯ್ಕೆಯನ್ನು ನೀಡಲಾಗುತ್ತಿದೆ” ಎಂದು ಅತಿಶಿ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮೊದಲು, ದೆಹಲಿ ಸರ್ಕಾರವು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳನ್ನು ನವೆಂಬರ್ 2 ರವರೆಗೆ ಮುಚ್ಚಲು ಆದೇಶಿಸಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವಾಯು ಗುಣಮಟ್ಟ ಹದಗೆಡುತ್ತಿರುವ ಕಾರಣ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿದರು.
ಶುಕ್ರವಾರದಂದು ದೆಹಲಿಯ ಗಾಳಿಯ ಗುಣಮಟ್ಟವು ‘ಕನಿಷ್ಠ ಮಟ್ಟಕ್ಕೆ ಇಳಿದಿದೆ. ಅಂದಿನಿಂದ ಯಾವುದೇ ಸುಧಾರಣೆಯ ಲಕ್ಷಣವನ್ನು ತೋರಿಸಿಲ್ಲ. ರಾಷ್ಟ್ರ ರಾಜಧಾನಿ ಭಾನುವಾರ ಬೆಳಗ್ಗೆ 7 ಗಂಟೆಗೆ 460 ರ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ದಾಖಲಿಸಿದೆ, ಹೀಗಾಗಿ ‘ತೀವ್ರ’ ವಿಭಾಗದಲ್ಲಿ ಉಳಿದಿದೆ. ದೆಹಲಿಯ ಸರಾಸರಿ AQI ಶನಿವಾರ 415 ರಲ್ಲಿ ನೆಲೆಸಿದೆ.