ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯನ್ನು ಕಾಡುತ್ತಿರುವ ವಾಯು ಮಾಲಿನ್ಯ ಸಮಸ್ಯೆ ದಿನದಿಂದ ದಿನಕ್ಕೆ ಕೈ ಮೀರುತ್ತಿದೆ. ಇದನ್ನು ತಡೆಗಟ್ಟಲು ದಿಲ್ಲಿ ಸರಕಾರ ತನ್ನ ರಸ್ತೆ ಸಂಚಾರ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಜಾರಿಗೆ ತಂದಿದ್ದು, ತಕ್ಕಮಟ್ಟಿಗೆ ಯಶಸ್ವಿಯಾಗುತ್ತಿದೆ. ಪ್ರತಿ ವರ್ಷ ದೀಪಾವಳಿ ಬಳಿಕದ ತಿಂಗಳಲ್ಲಿ ದಿಲ್ಲಿ ಕಳಪೆ ವಾಯು ಸಮಸ್ಯೆಯನ್ನು ಎದುರಿಸುತ್ತದೆ.
ಈ ವರ್ಷ ದೀಪಾವಳಿಯ ಸಂದರ್ಭ ಅದು ಮುಂದುವರೆದಿದ್ದು, ಕಳೆದೆರಡು ವಾರಕ್ಕೆ ಹೋಲಿಸಿದರೆ ಈ ವಾರ ಉಸಿರಾಡುವ ಗಾಳಿ ತೀರಾ ಕಳಪೆ ಮಟ್ಟವನ್ನು ತಳೆದಿದೆ. ಆದರೆ ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪರಿಸ್ಥಿತಿ ಸುಧಾರಿಸಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯ ಹೇಳಿದೆ.
ದಿಲ್ಲಿಯಲ್ಲಿ ಪಟಾಕಿ ಬಳಕೆಗೆ ಕಾರ್ಯಸೂಚಿ ಇದೆಯಾದರೂ ಜನರು ತಮ್ಮ ಹಬ್ಬದ ಸಂಭ್ರಮದಲ್ಲಿ ಅವುಗಳನ್ನು ಮರೆತಿದ್ದಾರೆ. ಪರಿಣಾಮವಾಗಿ ಪಟಾಕಿಗಳು ಸಿಡಿಯುತ್ತಲೇ ಇದ್ದು, ಮಾಲಿನ್ಯಕಾರಕ ಹೊಗೆ ಗಾಳಿಯೊಂದಿಗೆ ಸೇರಿಕೊಂಡಿದೆ. ಗಾಜಿಯಾಬಾದ್, ಗ್ರೇಟರ್ ನೋಯ್ಡಾ, ಗುರ್ಗಾಂವ್, ನೋಯ್ಡಾ ಮೊದಲಾದ ನಗರಗಳಲ್ಲಿ ಗಾಳಿಯ ಗುಣಮಟ್ಟ ದಿಲ್ಲಿ ನಗರಕ್ಕೆ ಹೋಲಿಸಿದರೆ ಉತ್ತಮವಾಗಿದೆ.
ಗಾಳಿ ಗುಣಮಟ್ಟವನ್ನು ಅಳೆಯುವ AQI ಮಟ್ಟ ದಿಲ್ಲಿಯಲ್ಲಿ ರಾತ್ರಿ 11.30ಕ್ಕೆ 327 ದಾಖಲಾಗಿತ್ತು. ಬಳಿಕ ಬೆಳಗ್ಗೆ 3.30ರ ಸುಂಆರಿಗೆ 323ಕ್ಕೆ ಇಳಿಕೆಯಾಗಿದೆ. ಮರುದಿನ ಬೆಳಗ್ಗೆ 8.30ಕ್ಕೆ ಇದು 340ನ್ನು ದಾಟಿತ್ತು.
AQI 0-50 ಇದ್ದರೆ ಉತ್ತಮ, 51-100 ಇದ್ದರೆ ತೃಪ್ತಿದಾಯಕ, 101-200 ಇದ್ದರೆ ಮಧ್ಯಮ, 201-300 ದಾಖಲಾದರೆ ಕಳಪೆ, 301-400 ತೀರಾ ಕಳಪೆ, 401-500 ತುಂಬಾ ಅಪಾಯ ಎಂದರ್ಥ. ಸದ್ಯದ ಮಟ್ಟಿಗೆ ದಿಲ್ಲಿಯಲ್ಲಿ ಕಳಪೆ ಗಾಳಿಗಳು ಹೆಚ್ಚು ಇವೆ.