ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು ತೀರಾ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರ ರಾಜಧಾನಿ ಪ್ರದೇಶ(ಎನ್‌ಸಿಆರ್) ವ್ಯಾಪ್ತಿಯಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದ್ದು ಉಸಿರಾಟಕ್ಕೂ ಕಷ್ಟಸಾಧ್ಯವಾಗಿದೆ. ರಾಷ್ಟ್ರ ರಾಜಧಾನಿ ಮಟ್ಟಿಗೆ ಇದೊಂದು ವಾರ್ಷಿಕ ಸಮಸ್ಯೆ ಯಾಗಿ ಮಾರ್ಪಟ್ಟಿದ್ದು ದಿಲ್ಲಿ ಸರಕಾರ ಮತ್ತು ಕೇಂದ್ರ ಸರಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿರುವ ಬಗೆಗೆ ಸಾರ್ವ ಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಚಳಿಗಾಲ ಋತು ಆರಂಭಗೊಳ್ಳುತ್ತಿರುವಂತೆಯೇ ದಿಲ್ಲಿ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರುವುದು ಕಳೆದೊಂದು ದಶಕದಿಂದ ಸಾಮಾನ್ಯ ಎಂಬಂತಾಗಿದೆ. ನೆರೆ ರಾಜ್ಯಗಳಾದ ಹರಿ ಯಾಣ ಮತ್ತು ಪಂಜಾಬ್‌ನಲ್ಲಿ ಈ ಅವಧಿಯಲ್ಲಿ ಬೆಳೆ ಕಳೆಗಳನ್ನು ರಾಶಿ ಹಾಕಿ ಸುಡುವುದರಿಂದ ಇದರ ಹೊಗೆ ವಾತಾವರಣವನ್ನು ಸೇರಿ ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರೀ ಪ್ರಮಾಣದಲ್ಲಿ ಇಂಗಾಲ ವನ್ನು ಹೊರಸೂಸುವ ಸರಕು ಸಾಗಣೆಯ ವಾಹನಗಳು, ನಗರದ ಹೊರವಲ ಯದಲ್ಲಿನ ಕೈಗಾರಿಕ ಪ್ರದೇಶಗಳಲ್ಲಿನ ಕೈಗಾರಿಕ ಕಂಪೆನಿಗಳು ಹೊರಸೂಸುವ ಹೊಗೆ, ಕಟ್ಟಡ ನಿರ್ಮಾಣ ಮತ್ತು ಹಳೆಯ ಕಟ್ಟಡಗಳನ್ನು ಕೆಡಹುವ ಪ್ರಕ್ರಿ ಯೆಗಳು, ಹೆಚ್ಚುತ್ತಿರುವ ಖಾಸಗಿ ವಾಹನಗಳು, ವಿವಿಧ ಅಭಿವೃದ್ಧಿ ಕಾಮ ಗಾರಿಗಳು…ಹೀಗೆ ಹತ್ತು ಹಲವು ಕಾರಣಗಳಿಂದಾಗಿ ದಿಲ್ಲಿ ವಾಯು ಮಾಲಿನ್ಯದಿಂದಾಗಿ ತತ್ತರಿಸುವಂತಾಗಿದೆ. ಕಳೆದೆರಡು ದಿನಗಳಿಂದೀಚೆಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಸರಕಾರ ನಗರದಾದ್ಯಂತ ವಾಯು ತುರ್ತುಸ್ಥಿತಿಯನ್ನು ಘೋಷಿಸಿದೆ.
ಎನ್‌ಸಿಆರ್ ವ್ಯಾಪ್ತಿಯಲ್ಲಿನ ವಾಯುಮಾಲಿನ್ಯದ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ದಿಲ್ಲಿ ಸರಕಾರ ಮತ್ತು ದಿಲ್ಲಿ ಮಹಾನಗರ ಪಾಲಿಕೆ ಬಿಗಿ ಕ್ರಮಗಳನ್ನು ಕೈಗೊಂಡಿವೆ.
ಪ್ರತೀ ವರ್ಷವೂ ದಿಲ್ಲಿ ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ ತೀರಾ ಕಳಪೆ ಮಟ್ಟಕ್ಕೆ ತಲುಪಿದಾಗ ಸರಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಇಂತಹುದೇ ತಾತ್ಕಾಲಿಕ ಕ್ರಮಗಳಿಗೆ ಶರಣಾಗುತ್ತಿವೆಯೇ ವಿನಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸದಿರುವುದು ತೀರಾ ವಿಪರ್ಯಾಸ. ವಾಯುಮಾಲಿನ್ಯದ ವಿಚಾರ ಮುನ್ನೆಲೆಗೆ ಬಂದಾಗಲೆಲ್ಲ ದಿಲ್ಲಿಯ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಪರಸ್ಪರ ಬೆರಳು ತೋರಿಸುವ ಪ್ರಯತ್ನ ನಡೆಸುತ್ತಿವೆಯೇ ಹೊರತು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ದೇಶದ ರಾಜಧಾನಿಯಲ್ಲಿ ಉಸಿರಾಟ ನಡೆಸುವುದೂ ಕಷ್ಟಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗುತ್ತಿರುವುದು ಇದೇ ಮೊದಲೇನಲ್ಲ. ಹಾಗಿದ್ದರೂ ಸರಕಾರ ನಗರದ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾವುದೇ ದೂರದೃಷ್ಟಿಯ ಯೋಚನೆ, ಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸುವತ್ತ ಲಕ್ಷ್ಯ ಹರಿಸದಿರುವುದು ಬಲುದೊಡ್ಡ ಪ್ರಮಾದವೇ ಸರಿ. ನಮ್ಮನ್ನಾಳುವವರಿಗೆ ಜನಸಾಮಾನ್ಯನ ಸಂಕಷ್ಟ ಅರಿವಿಗೆ ಬರದೇ ಹೋದರೆ ಇಂಥ ಅವ್ಯವಸ್ಥೆಗಳು ಮರುಕಳಿಸುತ್ತಲೇ ಇರುತ್ತವೆ. ಎಲ್ಲದಕ್ಕೂ “ಸದ್ಯ ಬೀಸೋ ದೊಣ್ಣೆಯಿಂದ ಪಾರಾದರೆ ಸಾಕು’ ಎಂಬ ನಿಲುವಿಗೆ ಅಂಟಿಕೊಂಡರೆ ಇಂಥ ದುಃಸ್ಥಿತಿ ಬಂದೊದಗುತ್ತದೆ. ಇನ್ನಾದರೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ರಾಜಧಾನಿಯ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಚ್ಛಾಶಕ್ತಿ, ಬದ್ಧತೆಯನ್ನು ಪ್ರದರ್ಶಿಸಬೇಕು.