Advertisement

ದಿಲ್ಲಿಯಲ್ಲಿ ಅಗರಬತ್ತಿ, ಮೇಣದ ಬತ್ತಿಗೂ ಬ್ರೇಕ್‌

07:10 AM Oct 31, 2018 | Team Udayavani |

ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ವಾಯುಮಾಲಿನ್ಯವು ಮಂಗಳವಾರ ಗಂಭೀರ ಸ್ಥಿತಿಗೆ ತಲುಪಿದ್ದು, ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 401ಕ್ಕೇರಿದೆ. ಇದು ಅಪಾಯದ ಸ್ಥಿತಿಯಾಗಿರುವ ಕಾರಣ, ದಿಲಿ ನಿವಾಸಿಗಳಿಗೆ ಸರಕಾರಿ ಸ್ವಾಮ್ಯದ ವಾಯು ಗುಣಮಟ್ಟ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆಯು (ಸಫ‌ರ್‌) ಹಲವು ಸೂಚನೆಗಳನ್ನು ನೀಡಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ಬರುವವರೆಗೆ ಯಾರೂ ಅಗರಬತ್ತಿ, ಮೇಣದ ಬತ್ತಿಗಳನ್ನು ಉರಿಸುವುದಾಗಲೀ, ವಾಕಿಂಗ್‌ ಹೋಗುವುದಾಗಲೀ, ಕಿಟಕಿಗಳನ್ನು ತೆರೆ ದಿಡುವುದಾಗಲೀ ಮಾಡಬಾರದು ಎಂದು ನಾಗರಿಕರಿಗೆ ನಿರ್ದೇಶಿಸಲಾಗಿದೆ. ಮನೆಗಳಿಂದ ಹೊರಗೆ ಹೋಗುವುದಿದ್ದರೆ ಸುರಕ್ಷತೆಗಾಗಿ ಕೇವಲ ಡಸ್ಟ್‌ ಮಾಸ್ಕ್ಗಳ ಮೊರೆ ಹೋಗಬೇಡಿ. ಅದರ ಬದಲಿಗೆ ಎನ್‌-95 ಅಥವಾ ಪಿ-100 ಮಾಸ್ಕ್ಗಳನ್ನಷ್ಟೇ ಬಳಸಿ ಎಂದೂ ಸೂಚಿಸಲಾಗಿದೆ.

Advertisement

ಖಾಸಗಿ ವಾಹನಗಳಿಗೂ ನಿಷೇಧ?: ವಾಯು ಗುಣಮಟ್ಟವು 0-50 ಇದ್ದರೆ ‘ಉತ್ತಮ’ವೆಂದೂ, 51-100 ಇದ್ದರೆ ‘ತೃಪ್ತಿದಾಯಕ’ ಎಂದೂ, 200 ಇದ್ದರೆ ‘ಮಧ್ಯಮ’ವೆಂದೂ, 300 ಅನ್ನು ‘ಕಳಪೆ’, 301-400 ಇದ್ದರೆ ‘ಅತಿ ಕಳಪೆ’ ಎಂದೂ ಹಾಗೂ 401-500 ಇದ್ದರೆ ‘ಗಂಭೀರ’ ಎಂದೂ ಪರಿಗಣಿಸಲಾಗುತ್ತದೆ. ದಿಲ್ಲಿಯಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಈ ಸೂಚ್ಯಂಕವು 402 ಎಂದು ತೋರಿಸಿದ್ದರಿಂದ ಹೆಚ್ಚಿನ ಆತಂಕ ಸೃಷ್ಟಿಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಹೇಳಿದೆ. ಒಂದು ವೇಳೆ ಹೀಗೇ ಮುಂದುವರಿದರೆ ದಿಲ್ಲಿಯಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೂ ನಿಷೇಧ ಹೇರುವ ಸಾಧ್ಯತೆಯಿದೆ ಎಂದೂ ಪ್ರಾಧಿಕಾರ ತಿಳಿಸಿದೆ.

ನಿರ್ಮಾಣ ಸ್ಥಗಿತ: ಈ ನಡುವೆ, ನ.1ರಿಂದ 10 ದಿನಗಳ ಕಾಲ ದಿಲ್ಲಿಯಾದ್ಯಂತ ಎಲ್ಲ ರೀತಿಯ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಹಾಗೂ ಪ್ರಮುಖ ಸ್ಥಳಗಳಲ್ಲಿ ಗಸ್ತು ಹೆಚ್ಚಿಸುವಂತೆ ಸುಪ್ರೀಂಕೋರ್ಟ್‌ ನೇಮಕ ಮಾಡಿರುವ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಸೂಚಿಸಿದೆ.

ಗಾಳಿ ಶುದ್ಧೀಕರಿಸುವ ತಂತ್ರಜ್ಞಾನಕ್ಕೆ ಒಪ್ಪಿಗೆ 
ವಾಯುಮಾಲಿನ್ಯ ಏರಿಕೆ ಕಾಣುತ್ತಿದ್ದಂತೆಯೇ ಸಾರ್ವಜನಿಕ ಪ್ರದೇಶಗಳ ವಾಯು ಶುದ್ಧೀಕರಿಸುವ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಲ್ಯಾಬೊರೇಟರಿಯು ಅನುಮತಿ ನೀಡಿದೆ. ಶೇ. 90ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪರಿಸರದಲ್ಲಿನ ಮಾಲಿನ್ಯವನ್ನು ಈ ತಂತ್ರಜ್ಞಾನ ನಿವಾರಿಸುತ್ತದೆ ಎಂದು ರಾಷ್ಟ್ರೀಯ ಭೌತಿಕ ಲ್ಯಾಬ್‌ ಮುಖ್ಯ ಕಾರ್ಯದರ್ಶಿ ಶಂಕರ್‌ ಅಗರ್‌ವಾಲ್‌ ಹೇಳಿದ್ದಾರೆ. ಈ ತಂತ್ರಜ್ಞಾನವನ್ನು ಎವರ್‌ಜೆನ್‌ ಸಿಸ್ಟಂ ಅಭಿವೃದ್ಧಿಪಡಿಸಿದ್ದು, ಪ್ರಾಯೋಗಿಕವಾಗಿ ಗುರುದ್ವಾರ ರಕಬ್‌ಗಂಜ್‌ ಸಾಹಿಬ್‌ ಇದನ್ನು ಬಳಸುತ್ತಿದೆ. ಇದನ್ನು ಆಸ್ಪತ್ರೆ, ಶಾಲೆ, ಬಸ್‌ ನಿಲ್ದಾಣಗಳಲ್ಲಿ ಅಳವಡಿಸಬಹುದು. ಈ ತಂತ್ರಜ್ಞಾನವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸುವುಕ್ಕಾಗಿ ಸರ್ಕಾರಿ ಸಂಸ್ಥೆಗಳ ಜೊತೆ ಕಂಪೆನಿ ಮಾತುಕತೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next