Advertisement

ನಿಲ್ಲದ ಚೀನ ಕ್ಯಾತೆ; ಏಮ್ಸ್‌ ಸರ್ವರ್‌ ಹ್ಯಾಕ್‌ ಹಿಂದೆ ಚೀನಿ ಹ್ಯಾಕರ್‌ಗಳ ಕೈವಾಡ ಪತ್ತೆ

12:22 AM Dec 15, 2022 | Team Udayavani |

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ದಾಳಿಯ ದುಃಸ್ಸಾಹಸ ನಡೆಸಲು ಹೋಗಿ ಪೆಟ್ಟು ತಿಂದ ಚೀನ, ದೇಶದ ಮೇಲೆ ಪರೋಕ್ಷವಾಗಿ ದಾಳಿ ನಡೆಸುತ್ತಿರುವುದು ಗೊತ್ತಾಗಿದೆ.

Advertisement

ಮಂಗಳವಾರವಷ್ಟೇ ಚೀನ ಗುಪ್ತಚರ ಹಡಗು “ಯುಹಾನ್‌ ವಾಂಗ್‌ 5′ ಹಿಂದೂ ಮಹಾಸಾಗರ ಬಿಟ್ಟು ತೆರಳಿತ್ತು ಎಂದು ದೃಢಪಡಿಸುತ್ತಿದ್ದಂತೆಯೇ ಬುಧವಾರ ದೇಶದ ಜಲಗಡಿ ವ್ಯಾಪ್ತಿಯಲ್ಲಿ ಡಿ.12ರಂದು ಪುನಃ ವಿವಿಧ ಟ್ರ್ಯಾಕಿಂಗ್‌ ಮತ್ತು ಕಣ್ಗಾವಲು ಸಾಧನಗಳನ್ನು ಅಳವಡಿಸಿರುವ ಚೀನದ ಗೂಢಚರ್ಯೆ ಹಡಗು ಕಾಣಿಸಿಕೊಂಡಿದೆ.

ಹಿಂದಿನ ಸಂದರ್ಭದಲ್ಲಿ ಇದು ಭಾರತ, ಚೀನ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿತ್ತು.

ಡಿ.15ರಂದು ಒಡಿಶಾ ದ್ವೀಪದಲ್ಲಿ ಅಗ್ನಿ-5 ಖಂಡಾಂತರ ಕ್ಷಿಪಣಿ ಪರೀಕ್ಷೆಗೆ ಭಾರತ ಮುಂದಾಗಿದೆ. ಅದಕ್ಕೆ ಪೂರಕವಾಗಿ ಬೆಳವಣಿಗೆ ನಡೆದಿದೆ.

ಏಮ್ಸ್‌ ಸರ್ವರ್‌ ಹ್ಯಾಕ್‌ ಹಿಂದೆ ಚೀನ:
ದೆಹಲಿಯ ಏಮ್ಸ್‌ ಆಸ್ಪತ್ರೆಯ ಸರ್ವರ್‌ ಗುರಿಯಾಗಿಸಿಕೊಂಡು ನಡೆದ ಉದ್ದೇಶಿಪೂರ್ವಕ ಸೈಬರ್‌ ದಾಳಿಯಲ್ಲಿ ಚೀನ ಮೂಲದ ಹ್ಯಾಕರ್‌ಗಳ ಕೈವಾಡ ಇರುವುದು ಪತ್ತೆಯಾಗಿದೆ. ಹ್ಯಾಕರ್‌ಗಳಿಂದ ಡೇಟಾ ಅನ್ನು ಯಶಸ್ವಿಯಾಗಿ ಹಿಂಪಡೆಯಲಾಗಿದೆ.

Advertisement

ನ.23ರಂದು ದೆಹಲಿ ಏಮ್ಸ್‌ ಆಸ್ಪತ್ರೆಯ ಸರ್ವರ್‌ ಡೌನ್‌ ಆಗಿತ್ತು. ಇದು ಒಳರೋಗಿ, ಹೊರರೋಗಿ, ಪ್ರಯೋಗಾಲಯ ಸೇರಿದಂತೆ ಆಸ್ಪತ್ರೆಯ ಎಲ್ಲ ಸೇವೆಗಳ ಮೇಲೆ ಪರಿಣಾಮ ಬೀರಿತು. ಸರ್ವರ್‌ ಹ್ಯಾಕ್‌ ಆಗಿರುವುದು ತಿಳಿದು, ಈ ಸಂಬಂಧ ನ.25ರಂದು ದೆಹಲಿ ಸೈಬರ್‌ ಅಪರಾಧ ಕೇಂದ್ರದಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸೈಬರ್‌ ಹ್ಯಾಕ್‌ ಆಗಿರುವುದು ನೆರೆಯ ಚೀನಾದಿಂದ ಎಂಬುದು ಪತ್ತೆಯಾಗಿದೆ.

ಹಳೆಯ ವಿಡಿಯೋ ವೈರಲ್‌:
ಭಾರತ-ಚೀನ ಗಡಿಯ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಡಿ.9 ಘರ್ಷಣೆ ಏರ್ಪಟ್ಟ ಮಾರನೆಯ ದಿನ ಎಲ್ಲೆಡೆ ವಿಡಿಯೋ ಒಂದು ವೈರಲ್‌ ಆಗಿತ್ತು. ಈ ವಿಡಿಯೋದಲ್ಲಿ ಭಾರತೀಯ ಸೈನಿಕರು ಗಡಿಯಲ್ಲಿ ಚೀನ ಸೈನಿಕರನ್ನು ಹಿಗ್ಗಾ-ಮುಗ್ಗ ಲಾಠಿಯಲ್ಲಿ ಥಳಿಸುತ್ತಿರುವುದು ಕಂಡುಬಂದಿದೆ. ಆದರೆ ಈ ವಿಡಿಯೋ ಡಿ.9ರ ಘರ್ಷಣೆಗೆ ಸಂಬಂಧಿಸಿದ್ದಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next