Advertisement

ಡಿಲೀಟ್‌ ಮಾಡು,ಇಲ್ಲ ನಿನ್ನನ್ನೇ ಡಿಲೀಟ್‌ ಮಾಡ್ತೇವೆ ಎಂದಿದ್ದರಂತೆ

07:15 PM Jan 04, 2018 | udayavani editorial |

ಮಂಗಳೂರು : ಕಾಟಿಪಳ್ಳ ನಿವಾಸಿ, ಬಿಜೆಪಿ ಕಾರ್ಯಕರ್ತ ಎನ್ನಲಾಗಿರುವ, ದೀಪಕ್‌ ರಾವ್‌ ಕೊಲೆ, ಬ್ಯಾನರ್‌ಗಳನ್ನು ಕಟ್ಟುವ ಬಂಟಿಂಗ್ಸ್‌ ವಿಚಾರದಲ್ಲಿ ಉಂಟಾಗಿದ್ದ  ವೈಮನಸ್ಸು  ಮತ್ತು ಜಗಳದ ಪರಿಣಾಮವಾಗಿಯೇ ನಡೆದಿರಬಹುದು ಎಂಬುದನ್ನು ಈಗ ಬಲವಾಗಿ ಶಂಕಿಸಲಾಗಿದೆ. 

Advertisement

ದೀಪಕ್‌ ರಾವ್‌ ತನ್ನ ಸ್ಮಾರ್ಟ್‌ ಫೋನ್‌ನಲ್ಲಿ  ಬಂಟಿಂಗ್ಸ್‌ ವಿಚಾರದಲ್ಲಿ ಅದೇನೋ ವಿಡಿಯೋ ಶೂಟ್‌ ಮಾಡಿಕೊಂಡಿದ್ದ. ಅದನ್ನು ಡಿಲೀಟ್‌ ಮಾಡುವಂತೆ ಆತನಿಗೆ ಹಂತಕರು ಡಿ.3ರಂದು ಎಚ್ಚರಿಕೆ ಕೊಟ್ಟಿದ್ದರು; “ಒಂದೋ ಅದನ್ನು ಡಿಲೀಟ್‌ ಮಾಡುವ ಇಲ್ಲದಿದ್ದರೆ ನಿನ್ನನ್ನೇ ನಾವು ಡಿಲೀಟ್‌ ಮಾಡುತ್ತೇವೆ” ಎಂಬ ಬೆದರಿಕೆಯನ್ನು ಹಂತಕರು ಒಡ್ಡಿದ್ದರು ಎನ್ನಲಾಗಿದೆ.ಆ ಬೆದರಿಕೆ ವಸ್ತುತಃ  ಕೊಲೆ ಬೆದರಿಕೆಯೇ ಆಗಿತ್ತು ಎಂಬುದೀಗ ದೀಪಕ್‌ ಕೊಲೆಯೊಂದಿಗೆ ಅನಾವರಣಗೊಂಡಿದೆ.

ಆದರೆ ತನ್ನನ್ನು ಆ ಕಾರಣಕ್ಕಾಗಿ ಯಾರಾದರೂ ಕೊಲೆ ಮಾಡಬಹುದು ಎಂಬ ಬಗ್ಗೆ ಆತ ತಲೆ ಕೆಡಿಸಿಕೊಂಡಿರಲಿಲ್ಲ. ದೀಪಕ್‌ ರಾವ್‌ಗೆ ಎಚ್ಚರಿಕೆ ಕೊಡಲಾದ ಸರಿಯಾಗಿ ಒಂದು ತಿಂಗಳ ಬಳಿಕ ಅಂದರೆ  ಜ.3ರಂದು ಆತನನ್ನು ಹಂತಕರು ಕೊಂದಿದ್ದಾರೆ.

ಮಂಗಳೂರು ಪೊಲೀಸ್‌ ಆಯುಕ್ತರು ದೀಪಕ್‌ ರಾ‌ವ್‌ ಕೊಲೆ ಸಂಬಂಧ ಇಬ್ಬರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಆದರು ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ದೃಶ್ಯ ಮಾಧ್ಯಮಗಳು ಹೇಳಿವೆ. 

ಮಂಗಳೂರಿನ ಕಾಟಿಪಳ್ಳ ದೀಪಕ್‌ ರಾವ್‌ ಕೆಲಸ ಮಾಡಿಕೊಂಡಿದ್ದ ಮೊಬೈಲ್‌ ಸಿಮ್‌ ಅಂಗಡಿಯ ಮಾಲಕ ಮಜೀದ್‌ ಅವರು ದೀಪಕ್‌ ಕೊಲೆ ಬಗ್ಗೆ ಖೇದ, ಆಘಾತ, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆತನನ್ನು ಯಾರಾದರೂ ಯಾವ ಕಾರಣಕ್ಕೆ ಕೊಲೆ ಮಾಡಿರಬಹುದು ಎಂಬುದೇ ತನಗೆ ಅರ್ಥವಾಗುತ್ತಿಲ್ಲ ಎಂದವರು ಹೇಳಿದ್ದಾರೆ. 

Advertisement

ದೀಪಕ್‌ ರಾವ್‌ ಕೊಲೆ ಸಂಬಂಧ ಇಂದು ಬಂಧಿತರಾಗಿರುವ ಇಬ್ಬರು ಆರೋಪಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ದೀಪಕ್‌ ರಾವ್‌ಗೆ “ಡಿಲೀಟ್‌ ಮಾಡು” ಎಂದು ತಿಂಗಳ ಹಿಂದೆ ಹಂತಕರು ಬೆದರಿಕೆ ಕೊಟ್ಟಿದ್ದರ ಹಿಂದಿನ ವಿಡಿಯೋ ಸಂಗತಿಯಾದರೂ ಯಾವುದು ಎಂಬುದನ್ನು ಈಗ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ದೃಶ್ಯ ಮಾಧ್ಯಮ ವರದಿ ತಿಳಿಸಿದೆ. 

ಕಾಟಿಪಳ್ಳ ಕೋರ್ದಬ್ಬು ದೈವೈಸ್ಥಾನದ ಬಳಿ ಕೆಲ ಸಮಯದ ಹಿಂದೆ ಬಂಟಿಂಗ್ಸ್‌ ವಿಚಾರದಲ್ಲಿ ನಡೆದಿದ್ದ ಗಲಭೆ, ಜಗಳವನ್ನು ಪೊಲೀಸರು ಸಕಾಲದಲ್ಲಿ ಮಧ್ಯಪ್ರವೇಶಿಸಿ ನಿವಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next