Advertisement

ಸ್ವಾಧೀನ ವಿಳಂಬದಿಂದ ಕಾಮಗಾರಿ ಕುಂಠಿತ

10:54 AM Jan 28, 2020 | Suhan S |

ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಕೆಲವೆಡೆ ಭೂಸ್ವಾಧೀನ ವಿಳಂಬವಾಗಿದ್ದರಿಂದ ಕಾಮಗಾರಿ ಪ್ರಗತಿಯೂ ಕುಂಠಿತವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಸಮಜಾಯಿಷಿ ನೀಡಿದೆ.

Advertisement

ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಡಿಸೆಂಬರ್‌ನ ಮಾಸಿಕ ವಾರ್ತಾ ಪತ್ರದಲ್ಲಿ ಬಿಎಂಆರ್‌ಸಿಎಲ್‌ ಈ ಸಮಜಾಯಿಷಿನೀಡಿದೆ. ಪ್ರತ್ಯೇಕ ಮಾರ್ಗ ಗೊಟ್ಟಿಗೆರೆ-ನಾಗವಾರ ನಡುವೆ ಬರುವ ಸ್ವಾಗತ ಕ್ರಾಸ್‌ ರಸ್ತೆ (ರೀಚ್‌-6) ಮಾರ್ಗದಲ್ಲಿ ಕಾಮಗಾರಿ ಪ್ರಗತಿ ಕುಂಠಿತಗೊಂಡಿದೆ. ಅದೇ ರೀತಿ, ರೀಚ್‌-5ಕ್ಕೆ ಸಂಬಂಧಿಸಿದಂತೆ ನೈಸ್‌ ಭೂಮಿ ಸ್ವಾಧೀನಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ, ರೀಚ್‌ 6ರ ಕಾಮಗಾರಿಯೂ ತುಸು ಕುಂಠಿತಗೊಂಡಿದೆ. ತಡೆಯಾಜ್ಞೆ ತೆರವುಗೊಳಿಸಲು ಸತತ ಪ್ರಯತ್ನ ನಡೆದಿದೆ ಎಂದು ಬಿಎಂಆರ್‌ಸಿಎಲ್‌ ಸ್ಪಷ್ಟಪಡಿಸಿದೆ.

ಗೊಟ್ಟಿಗೆರೆ-ಸ್ವಾಗತ ಕ್ರಾಸ್‌ ರಸ್ತೆ ಕಾಮಗಾರಿಯು ಕೇವಲ ಶೇ. 22ರಷ್ಟು ಪ್ರಗತಿ ಕಂಡಿದೆ. ಅದೇ ರೀತಿ, ಬೊಮ್ಮಸಂದ್ರ-ಹೊಸೂರು ರಸ್ತೆ ಶೇ. 65ರಷ್ಟು, ಹೊಸೂರು ರಸ್ತೆ-ಎಚ್‌ಎಸ್‌ಆರ್‌ ಲೇಔಟ್‌ ಶೇ. 69ರಷ್ಟು, ಹೆಸರಘಟ್ಟ ಕ್ರಾಸ್‌-ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ಶೇ. 54, ಬೈಯಪ್ಪನಹಳ್ಳಿ-ವಿಶ್ವೇಶ್ವರಯ್ಯ ಕೈಗಾರಿಕೆಪ್ರದೇಶ ಮಾರ್ಗದ ಕಾಮಗಾರಿ ಶೇ. 56ರಷ್ಟು ಪ್ರಗತಿ ಸಾಧಿಸಿದೆ ಎಂದು ಮಾಹಿತಿ ನೀಡಿದೆ.

ಭೂಮಿ ಮಂಜೂರು: ಅಲ್ಲದೆ, ಎರಡನೇ ಹಂತದಲ್ಲಿ ಕಾಡುಗೋಡಿ ಮತ್ತು ಅಂಜನಾಪುರ ಡಿಪೋ ನಿರ್ಮಾಣಕ್ಕಾಗಿ ಸರ್ಕಾರವು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಕಾಡುಗೋಡಿ ಅರಣ್ಯಪ್ರದೇಶದಲ್ಲಿನ 18.11 ಹೆಕ್ಟೇರ್‌ ಹಾಗೂ ಯು.ಎಂ. ಕಾವಲ್‌ ಅರಣ್ಯದಲ್ಲಿನ 0.71 ಹೆಕ್ಟೇರ್‌ ಭೂಮಿ ನೀಡಲು ಸರ್ಕಾರ ಅನುಮತಿ ನೀಡಿದೆ. ರಾಜ್ಯ ಸರ್ಕಾರ ರಚಿಸಿದ ತಜ್ಞರ ಸಮಿತಿಯು ಈ ಪ್ರದೇಶದ ಪರಿಶೀಲನೆ ನಡೆಸಿ, ಅನುಮತಿ ನೀಡಿದ ನಂತರ ಮರಗಳನ್ನು ಕಡಿಯುವ ಅಥವಾ ಸ್ಥಳಾಂತರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದೂ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next