Advertisement

ನಿಧಾನಗತಿಯ ರಸ್ತೆ ಕಾಮಗಾರಿ: 2 ಕಿ.ಮೀ. ನಡೆಯಬೇಕಾದ ಸ್ಥಿತಿ!

05:15 AM May 25, 2018 | Team Udayavani |

ಸಸಿಹಿತ್ಲು: ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸಸಿಹಿತ್ಲು ಮುಂಡ ಬೀಚ್‌ ಪ್ರದೇಶಕ್ಕೆ ಎರಡು ತಿಂಗಳಿನಿಂದ ಪ್ರವಾಸಿಗರ ಕೊರತೆ ತೀವ್ರವಾಗಿ ಕಾಡಿದೆ. ಇಲ್ಲಿನ ರಸ್ತೆ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿರುವುದೇ ಇದಕ್ಕೆಲ್ಲ ಕಾರಣ. ಸಸಿಹಿತ್ಲು ಭಗವತೀ ದೇವಸ್ಥಾನದ ದ್ವಾರದಿಂದ ಮುಂಡ ಬೀಚ್‌ನ ಬಸ್‌ ನಿಲ್ದಾಣದವರೆಗೆ ರಾಷ್ಟ್ರೀಯ ಬಿರುಗಾಳಿ ವಿಪತ್ತು ಕುಗ್ಗಿಸುವ ಯೋಜನೆಯನ್ನು (ಎನ್‌.ಸಿ.ಆರ್‌.ಎಂ.ಪಿ.) ಪ್ರವಾಸೋದ್ಯಮ ಇಲಾಖೆಯಿಂದ 4.5 ಕೋ. ರೂ. ವೆಚ್ಚದಲ್ಲಿ ಪಿಡಬ್ಲ್ಯೂಡಿ ನೇತೃತ್ವದಲ್ಲಿ ರಸ್ತೆಯು ಕಾಂಕ್ರೀಟ್‌ ಆಗುತ್ತಿದ್ದು, ಶಿಲಾನ್ಯಾಸ ನಡೆದು ಎರಡು ತಿಂಗಳು ಆಗಿ ಕಾಮಗಾರಿಗೆ ಚಾಲನೆ ಸಿಕ್ಕರೂ ಆಮೆಗತಿಯಲ್ಲಿ ಸಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

Advertisement

2 ಕಿ.ಮೀ. ನಡೆಯಬೇಕಾದ ಸ್ಥಿತಿ!
ಕಾಮಗಾರಿಗಾಗಿ ರಸ್ತೆಯನ್ನು ಬಂದ್‌ ಮಾಡಲಾಗಿದ್ದು, ಬೀಚ್‌ ಅಥವಾ ಮುಂಡ ಪ್ರದೇಶದ ಜನವಸತಿ ಪ್ರದೇಶಕ್ಕೆ ಹೋಗುವ ಜನರು ಹಾಗೂ ನಿವಾಸಿಗಳು ಸುಮಾರು 2 ಕಿ.ಮೀ. ನಡೆದೇ ಕ್ರಮಿಸಬೇಕು. ವಾಹನ ಸಂಚಾರ ಕೂಡ ಇಲ್ಲಿ ನಿಷೇಧಿಸಲಾಗಿದೆ. ಕೆಲವರು ಪ್ರಯಾಸಪಟ್ಟು ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಾರೆ. ಸರ್ವಿಸ್‌ ಬಸ್‌ಗಳು ಹಾಗೂ ರಿಕ್ಷಾಗಳು ಸಹ ದೇವಸ್ಥಾನದ ದ್ವಾರದವರೆಗೆ ಬಂದು ಸಂಚಾರ ಮೊಟಕುಗೊಳಿಸುತ್ತಿದೆ. 

ಬಿಕೋ ಎನ್ನುತ್ತಿದೆ ಬೀಚ್‌


ರಸ್ತೆ ಎರಡು ಸ್ಲಾಬ್‌ ನಲ್ಲಿ ಕಾಂಕ್ರೀಟ್‌ ಕಾಮಗಾರಿ ನಡೆಯುತ್ತಿದೆ. ಒಂದು ಭಾಗದ ಕಾಮಗಾರಿ ಮುಗಿದಿದ್ದರೂ ಅಗಲ ಕಿರಿದಾದ ಕಾರಣ ವಾಹನಗಳು ಸಂಚರಿಸಲು ಕಷ್ಟಕರವಾಗಿದೆ. ಲಘುವಾಹನಗಳು ಪ್ರವೇಶಿಸಬಹುದಾದರೂ ಅದಕ್ಕೆ ಅನುಮತಿ ಕೊಡುತ್ತಿಲ್ಲ. ರಸ್ತೆಯ ಉದ್ದಕ್ಕೂ ಇರುವ ಆಸುಪಾಸಿನ ನಿವಾಸಿಗಳು ಧೂಳಿನಿಂದ ಕಂಗೆಟ್ಟಿದ್ದಾರೆ. ಮುಂಡ ಬೀಚ್‌ಗೆ ಪ್ರವಾಸಿಗರ ಕೊರತೆಯಿಂದ ಮೂರು ಅಂಗಡಿಗಳಲ್ಲಿ ಎರಡು ಅಂಗಡಿಗಳು ಬಂದ್‌ ಆಗಿದೆ. ಒಂದು ಮಾತ್ರ ತೆರೆದಿದೆ. ಜನರ ಸಂಚಾರದಿಂದ ಬೀಚ್‌ ಪ್ರದೇಶ ಬಿಕೋ ಎನ್ನುತ್ತಿದೆ.

ಉದ್ಘಾಟನೆಯ ಆಸಕ್ತಿ ಕಾಮಗಾರಿಗಿಲ್ಲ
ಈ ರಸ್ತೆಯ ಶಿಲಾನ್ಯಾಸದ ಉದ್ಘಾಟನೆಗೆ ಎರಡು ಪ್ರಮುಖ ಪಕ್ಷಗಳ ಧುರೀಣರು ಬಹಳಷ್ಟು ಆಸಕ್ತಿ ವಹಿಸಿದ್ದರಲ್ಲದೇ ಎರಡೆರಡು ಬಾರಿ ಶಿಲಾನ್ಯಾಸ ನಡೆಸಲಾಗಿತ್ತು. ಅಂದಿನ ಶಾಸಕರು ಹಾಗೂ ಸಂಸದರು ಶಿಲಾನ್ಯಾಸ ನೆರವೇರಿಸಿ ಅನುದಾನ ನಾವೇ ತಂದಿದ್ದು ಎಂದು ಹೇಳಿಕೊಂಡಿದ್ದರು. ಆದರೆ ಆ ಆಸಕ್ತಿ ಮಾತ್ರ ಕಾಮಗಾರಿಯ ವೇಗಕ್ಕೆ ಬಳಕೆಯಾಗಿಲ್ಲ ಎನ್ನುವುದು ಇಲ್ಲಿನ ಗ್ರಾಮಸ್ಥರ ಆಕ್ರೋಶವಾಗಿದೆ. ಕೇವಲ ಚುನಾವಣೆಯ ಮುಂದಾಲೋಚನೆಯಿಂದ ಶಿಲಾನ್ಯಾಸಕ್ಕೆ ಆಸಕ್ತಿ ವಹಿಸಿದ್ದರು ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ. ಶಿಲಾನ್ಯಾಸದ ನಾಮಫಲಕ ಸಹ ಕಿಡಿಗೇಡಿಗಳಿಂದ ಧರಶಾಹಿಯಾಗಿದೆ.

ವಾರದಲ್ಲಿ ಸಂಚಾರಕ್ಕೆ ಒಂದು ಭಾಗ ಮುಕ್ತ
ಸಸಿಹಿತ್ಲು ಬೀಚ್‌ನಿಂದ ದರ್ಗಾದವರೆಗೆ ಸುಮಾರು 6.1 ಕಿ.ಮೀ. ಉದ್ದದ ರಸ್ತೆಯನ್ನು ಒಂಭತ್ತು ತಿಂಗಳ ಕಾಲಾವಕಾಶದಲ್ಲಿ ನಿರ್ಮಿಸಲಾಗುತ್ತಿದೆ. 4 ಮೀ. ಅಗಲದ ಈ ರಸ್ತೆಯನ್ನು ಮೂರು ಹಂತಗಳಾಗಿ ನಿರ್ಮಾಣ ಮಾಡಲಾಗುತ್ತಿದೆ. ಭಗವತೀ ದ್ವಾರದ ಬಳಿಯ ರಸ್ತೆಯ 1.5 ಕಿ.ಮೀ.ಯ ಒಂದು ಭಾಗವನ್ನು ಮುಂದಿನ ವಾರದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಸೂಕ್ತವಾದ ಕ್ಯೂರಿಂಗ್‌ ನಡೆಯದೇ ಬಿಟ್ಟರೇ ಬಿರುಕು ಬಿಡುವ ಸಾಧ್ಯತೆ ಇದೆ. ನಾಗರಿಕರು ಸಹಕರಿಸಬೇಕು.
– ರವಿಕುಮಾರ್‌, ಸ.ಕಾ.ನಿ.ಅಭಿಯಂತರ,ಲೋಕೋಪಯೋಗಿ ಇಲಾಖೆ

Advertisement

ಸಸಿಹಿತ್ಲು ಫೇವರಿಟ್‌…
ಕಾಲೇಜಿನ ರಜೆಯನ್ನು ಸುಂದರ ಪರಿಸರದಲ್ಲಿ ಕಳೆಯಲು ಹಲವು ಬಾರಿ ಬಂದಿದ್ದೆವು. ಆದರೆ ಈಗ ಕಾಮಗಾರಿ ನಡೆಯುತ್ತಿರುವುದರಿಂದ 2 ಕಿ.ಮೀ. ನಡೆದುಕೊಂಡು ಬರಲು ಬೇಸರವಾಗುತ್ತಿದೆ. 
– ರಂಜಿತಾ, ಕಾಲೇಜು ವಿದ್ಯಾರ್ಥಿನಿ, ಮಂಗಳೂರು

— ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next