ಬೆಂಗಳೂರು: “ವಿಳಂಬ’ ಅನ್ನುವುದು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್ಸಿ) ಒಂದು “ಚಾಳಿ’ಯಾಗಿ ಬಿಟ್ಟಿದೆ. ವರ್ಷಗಳು ಕಳೆದರೂ ಇಲ್ಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮಾತ್ರ ಪೂರ್ಣಗೊಳ್ಳುವುದಿಲ್ಲ. ಫಲಿತಾಂಶ ಪ್ರಕಟ, ಪಟ್ಟಿ ಪ್ರಕಟಕ್ಕೆ ಉದ್ಯೋಗಾಕಾಂಕ್ಷಿಗಳು ಎಷ್ಟೇ ಗೋಗರೆದರೂ ಕೆಪಿಎಸ್ಸಿ ಹೇಳುವುದು “ನೋಡಿ ಸ್ವಾಮಿ ನಾವಿರೋದೇ ಹೀಗೆ’ ಎಂದು.
ಹೌದು! ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಿವಿಧ ಇಲಾಖೆಗಳ “ಸಿ’ ದರ್ಜೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೆಪಿಎಸ್ಸಿಯ ವಿಳಂಬ ಪಟ್ಟಿಗೆ ಮತ್ತೂಂದು ಸೇರ್ಪಡೆ. ಕರ್ನಾಟಕ ಲೋಕಸೇವಾ ಆಯೋಗದ ಈ ಆಮೆ ನಡಿಗೆಗೆ ಪರೀಕ್ಷೆ ಬರೆದ ಅಭ್ಯರ್ಥಿಗಳು ನಲುಗಿ ಹೋಗಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 1,800ಕ್ಕೂ ಹೆಚ್ಚು “ಸಿ’ ದರ್ಜೆ ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿ ಪರೀಕ್ಷೆ ನಡೆಸಿ ಇಲ್ಲಿಗೆ ಬರೋಬ್ಬರಿ 22 ತಿಂಗಳು ಆಗಿದೆ. ಮೂಲ ದಾಖಲಾತಿಗಳ ಪರಿಶೀಲನೆ ನಡೆದು ವರ್ಷ ಕಳೆದಿದೆ. ಆದರೂ ಇಲ್ಲಿತನಕ ತಾತ್ಕಾಲಿಕ ಪಟ್ಟಿ ಪ್ರಕಟಿಸಿಲ್ಲ. ಈ ಬಗ್ಗೆ ವಿಚಾರಿಸಿದರೆ ಕೆಪಿಎಸ್ಸಿ ಅಧಿಕಾರಿಗಳು “ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂಬ ಸಿದಟಛಿ ಉತ್ತರ ನೀಡುತ್ತಾರೆ. ಒಂದೊಮ್ಮೆ ಸ್ವಲ್ಪ ಗಟ್ಟಿಯಾಗಿ ಕೇಳಿದರೆ, ಯಾವಾಗ ಏನು ಮಾಡಬೇಕು ಅನ್ನೋದು ನಮಗೆ ಗೊತ್ತು ಎಂದು ಅವರಿಂದ ಉಡಾಫೆ ಉತ್ತರ ಸಿಗುತ್ತದೆ ಎಂದು ನೊಂದ ಅಭ್ಯರ್ಥಿಗಳು ಅಳಲು ತೋಡಿಕೊಳ್ಳುತ್ತಾರೆ.
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ರಾಜ್ಯ ಮೂಲ ವೃಂದದ 1,442 ಹೈದರಾಬಾದ್ -ಕರ್ನಾಟಕ ವೃಂದದ 400 ಹುದ್ದೆಗಳು ಸೇರಿ “ಸಿ’ದರ್ಜೆಯ ಒಟ್ಟು 1,842 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗವು 2016ರ ಅ.5ಕ್ಕೆ ಪ್ರಥಮ ಅಧಿಸೂಚನೆ ಹಾಗೂ ಅ.22ರಂದು ಸೇರ್ಪಡೆ ಅಧಿಸೂಚನೆ ಹೊರಡಿಸಿತ್ತು. ಅದೇ ವರ್ಷ ಡಿ.18ರಂದು ನಡೆದ ಪರೀಕ್ಷೆಗೆ ಸುಮಾರು 1.19 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಬಳಿಕ 1:2 ಅನುಪಾತದಂತೆ 2017ರ ಆಗಸ್ಟ್ 28ರಿಂದ 30ರವರೆಗೆ ಮೂಲ ದಾಖಲಾತಿಗಳ ಪರಿಶೀಲನೆ ನಡೆಯಿತು. ಒಟ್ಟು ಹುದ್ದೆಗಳಿಗಿಂತ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಆಗದ ಹಿನ್ನೆಲೆಯಲ್ಲಿ 1:3 ಅನುಪಾತದಂತೆ ದಾಖಲಾತಿಗಳ ಪರಿಶೀಲನೆ ನಡೆಯಿತು. ಈಗ ಅದೂ ಮುಗಿದು ವರ್ಷ ಕಳೆದಿದೆ. ಆದರೆ, ಇಲ್ಲಿವರೆಗೆ ಕೆಪಿಎಸ್ಸಿ ತಾತ್ಕಾಲಿಕ ಪಟ್ಟಿ ಪ್ರಕಟಿಸಿಲ್ಲ.
ಸಿಎಂಗೆ ಮನವಿ
ತಾತ್ಕಾಲಿಕ ಪಟ್ಟಿ ಪ್ರಕಟ ಮಾಡಲು ಕೆಪಿಎಸ್ಸಿ ವಿಳಂಬ ಮಾಡುತ್ತಿರುವುದರಿಂದ ಕಂಗೆಟ್ಟ ಅಭ್ಯರ್ಥಿಗಳು ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕೆಪಿಎಸ್ಸಿ ಕಾರ್ಯದರ್ಶಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಯಾವುದೇ ನೇಮಕಾತಿ ಪ್ರಕ್ರಿಯೆ 6 ತಿಂಗಳಲ್ಲಿ ಮುಗಿಸಬೇಕು. ಆದರೆ, ತಾನೇ ಮಾಡಿಕೊಂಡ ಈ ನಿಯಮವನ್ನು ಕೆಪಿಎಸ್ಸಿ ಪಾಲಿಸುತ್ತಿಲ್ಲ. ಕೂಡಲೇ ಮಧ್ಯಪ್ರವೇಶಿಸಿ ಪಟ್ಟಿ ಪ್ರಕಟಿಸುವಂತೆ ಕೆಪಿಎಸ್ಸಿಗೆ ಸೂಚಿಸುವಂತೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ ಮನವಿಯಲ್ಲಿ ಕೇಳಿಕೊಂಡಿದ್ದೇವೆ. ಆದರೆ,ಅಲ್ಲಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಉದ್ಯೋಗಕಾಂಕ್ಷಿಗಳು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಪರೀಕ್ಷೆ ನಡೆದು ಎರಡು ವರ್ಷ ಆಗಿದೆ. ಮೂಲ ದಾಖಲಾತಿಗಳ ಪರಿಶೀಲನೆ ನಡೆದು ವರ್ಷ ಕಳೆದಿದೆ. ಆದರೆ, ಕೆಪಿಎಸ್ಸಿ ತಾತ್ಕಾಲಿಕ ಪಟ್ಟಿ ಪ್ರಕಟಿಸುತ್ತಿಲ್ಲ. “ಸಿ’ ದರ್ಜೆ ಹುದ್ದೆಗಳ ಭರ್ತಿ ಅಧಿಸೂಚನೆ ನಂತರದ ಎಲ್ಲ ಅಧಿಸೂಚನೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ನಮ್ಮ ನೇಮಕಾತಿ ಪ್ರಕ್ರಿಯೆ ಮಾತ್ರ ನೆನೆಗುದಿಗೆ ಬಿದ್ದಿದೆ.
– ನೊಂದ ಅಭ್ಯರ್ಥಿ.
– ರಫೀಕ್ ಅಹ್ಮದ್