Advertisement

HC: ಮೃತ ಬಾಲಕನ ತಂದೆಗೆ ಪರಿಹಾರ ವಿಳಂಬ- ಸರಕಾರಕ್ಕೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್‌

08:44 PM Nov 09, 2023 | Team Udayavani |

ಬೆಂಗಳೂರು: ಹತ್ತು ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ತೆರೆದ ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿದ ಆರು ವರ್ಷದ ಬಾಲಕನ ತಂದೆಗೆ 5 ಲಕ್ಷ ರೂ. ಪರಿಹಾರ ನೀಡಲು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಸರಕಾರಕ್ಕೆ ಹೈಕೋರ್ಟ್‌ 1 ಲಕ್ಷ ರೂ. ದಂಡ ವಿಧಿಸಿದೆ.

Advertisement

ಅಲ್ಲದೆ, ಆರು ವಾರಗಳಲ್ಲಿ ಬಾಲಕನ ತಂದೆ ಕರಣ್‌ ಸಿಂಗ್‌ ರಾಜ ಪುರೋಹಿತ್‌ ಅವರಿಗೆ ಪರಿಹಾರ ಧನ ತಲುಪದಿದ್ದರೆ ಶೇ.12ರಷ್ಟು ಬಡ್ಡಿ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಒಂದು ವೇಳೆ ರಾಜಪುರೋಹಿತ್‌ಗೆ ಪರಿಹಾರ ಧನ ತಲುಪಿಸುವುದು ವಿಳಂಬ ಮಾಡಿದರೆ ದಂಡದ ಮೊತ್ತ 1 ಲಕ್ಷ ರೂ.ಗಳಿರುವುದು ಪ್ರತಿ ತಿಂಗಳಿಗೆ 50 ಸಾವಿರ ರೂಪಾಯಿಗಳಷ್ಟು ಹೆಚ್ಚಿಸಲಾಗುವುದು ಎಂದು ಕೋರ್ಟ್‌ ಎಚ್ಚರಿಕೆ ನೀಡಿದೆ. ಅಲ್ಲದೆ, ಅನಗತ್ಯ ವಿಳಂಬ ಮಾಡಿರುವ ತಪ್ಪಿತಸ್ಥ ಅಧಿಕಾರಿಯಿಂದ ಬಡ್ಡಿ ಮತ್ತು ದಂಡದ ಮೊತ್ತ ವಸೂಲಿಗೆ ರಾಜ್ಯ ಸರಕಾರ ಮುಕ್ತವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಈ ವಿಚಾರವಾಗಿ ಮೃತ ಬಾಲಕನ ತಂದೆ ಕರಣ್‌ ಸಿಂಗ್‌ ಎಸ್‌. ರಾಜಪುರೋಹಿತ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

2013ರಿಂದ ಅರ್ಜಿದಾರರು ಮೂರನೇ ಬಾರಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹಾಗಾಗಿ ವಿಪತ್ತು ನಿರ್ವಹಣ ಕಾಯ್ದೆಯಡಿ ಅವರಿಗೆ ನಿಗದಿಯಂತೆ 5 ಲಕ್ಷ ಪರಿಹಾರವನ್ನು 2013ರ ಅಕ್ಟೋಬರ್‌ 15ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.6ರಷ್ಟು ಬಡ್ಡಿ ಸಹಿತ ಆರು ವಾರಗಳಲ್ಲಿ ಪರಿಹಾರ ಪಾವತಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಮಗ ಅಥವಾ ಮಗಳ ಹಠಾತ್‌ ಸಾವು ಪೋಷಕರಿಗೆ ಭೀಕರವಾದ ಹೊಡೆತವಾಗಿದೆ ಎಂಬುದನ್ನು ಮರೆಯಲಾಗುವುದಿಲ್ಲ. ಮಗುವನ್ನು ಕಳೆದುಕೊಂಡು ಅರ್ಜಿದಾರರು ಜೀವನದ ಅತ್ಯಂತ ನೋವಿನ ಕ್ಷಣಗಳಲ್ಲಿರುವಾಗ ಅವರಿಗೆ ಮತ್ತೆ ನೋವು ನೀಡುವುದು, ಅವರನ್ನು ಕಚೇರಿಯಿಂದ ಕಚೇಗೆ ಅಲೆದಾಡಿಸುವುದು ಸರಿಯೇ ಎಂದು ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರಕಾರ ಎಚ್ಚರಿಕೆ ವಹಿಸಬೇಕು. ನಾಗರಿಕರ ಹಿತರಕ್ಷಣೆ ಸರಕಾರದ ಆದ್ಯ ಕರ್ತವ್ಯವಾಗಬೇಕು ಎಂದು ಅಭಿಪ್ರಾಯಪಟ್ಟಿದೆ.

Advertisement

ಪ್ರಕರಣದ ಹಿನ್ನೆಲೆ
2013ರ ಜು.15ರಂದು ಭಾರೀ ಮಳೆ ಕಾರಣ ರಿತೇಶ್‌ ಸಿಂಗ್‌ ತೆರೆದ ಚರಂಡಿಯಲ್ಲಿ ಬಿದ್ದು ಕೊಚ್ಚಿ ಹೋಗಿ ಸಾವನ್ನಪ್ಪಿದ್ದ. ಅವರ ತಂದೆ ಕರಣ್‌ ಸಿಂಗ್‌ ಎಸ್‌. ರಾಜಪುರೋಹಿತ್‌ ಖಾಸಗಿ ಕಂಪೆನಿಯಲ್ಲಿ ಸೇಲ್ಸ್‌ಮನ್‌ ಆಗಿದ್ದರು. ಅವರು ನಗರಪಾಲಿಕೆ ವಿರುದ್ಧ ದೂರು ನೀಡಿದ್ದರು. ವಿಪತ್ತು ನಿರ್ವಹಣ ಕಾಯಿದೆಯಡಿ 5 ಲಕ್ಷ ರೂ. ಮಾತ್ರ ಪರಿಹಾರ ನೀಡಲಾಗುವುದು ಪಾಲಿಕೆ ಅಧಿಕಾರಿಗಳು ಹೇಳಿದ್ದರು. ಆದರೆ ಅರ್ಜಿದಾರರು ಹೆಚ್ಚಿನ ಪರಿಹಾರ ಕೋರಿ ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಅಧಿಕಾರಿಗಳು ಪರಿಗಣಿಸಿರಲಿಲ್ಲ. ಹಾಗಾಗಿ ಅವರು ಎರಡು ಬಾರಿ ಹೈಕೋರ್ಟ್‌ ಮೊರೆ ಹೋಗಿದ್ದರು. ಆಗ ಹೈಕೋರ್ಟ್‌ ಹೆಚ್ಚಿನ ಪರಿಹಾರ ನೀಡುವಂತೆ ಹೇಳಿತ್ತು. ಅದರೂ ಅವರ ಮನವಿ ಪರಿಗಣಿಸದೆ ಸರಕಾರ ಮತ್ತು ಪಾಲಿಕೆ ನಿರ್ಲಕ್ಷಿಸಿತ್ತು. ಅದಕ್ಕಾಗಿ ಮೂರನೇ ಬಾರಿಗೆ ಬಾಲಕನ ತಂದೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next