ಗುಳೇದಗುಡ್ಡ: ಕಟಗೇರಿ ಗ್ರಾಪಂ ಪಿಡಿಒ ಆರತಿ ಕ್ಷತ್ರಿಯ ವಿರುದ್ಧ ತನಿಖೆ ಕೈಗೊಳ್ಳಲು ವಿಳಂಬವಾಗುತ್ತಿರುವುದಕ್ಕೆ ತಾಪಂ ಇಒ ಸಿದ್ದಪ್ಪ ನಕ್ಕರಗುಂದ ಅವರನ್ನು ತಾಪಂ ಸದಸ್ಯ ಕೈಲಾಸ ಕುಂಬಾರ ತೀವ್ರ ತರಾಟೆ ತಗೆದುಕೊಂಡಿದ್ದಾರೆ.
ಗುರುವಾರ ತಾಪಂ ಕಚೇರಿಯಲ್ಲಿ ಅಧ್ಯಕ್ಷೆ ರೇಣುಕಾ ಗಾಜಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಕಳೆದ ಎಂಟು ತಿಂಗಳಿಂದ ಶಾಸಕರಾದ ಸಿದ್ದರಾಮಯ್ಯ ಹಾಗೂ ಜಿಪಂ ಅಧ್ಯಕ್ಷರು, ಪಿಡಿಒ ವಿರುದ್ಧ ತನಿಖೆ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಆದರೂ ಇಲ್ಲಿಯವರೆಗೆ ಪಿಡಿಒ ವಿರುದ್ಧ ತನಿಖೆ ನಡೆಸುತ್ತಿಲ್ಲ. ಪಿಡಿಒ ಎಲ್ಲದರಲ್ಲಿಯೂ ಅಕ್ರಮ ನಡೆಸಿದ್ದಾರೆ ಎಂದು ಸದಸ್ಯರು ದೂರಿದರು.
ಪಿಡಿಒ ವಿರುದ್ಧ ತನಿಖೆಗೆ ಅಧಿಕಾರಿಗಳು ಬಂದರೂ ಅವರೊಂದಿಗೆ ಸಹಕರಿಸುತ್ತಿಲ್ಲ. ತನಿಖಾಧಿಕಾರಿಗಳ ದಾರಿ ತಪ್ಪಿಸುವ ಕೆಲಸ ನಡೆದಿದೆ. ತಾಪಂ ಇಒ, ಪಿಡಿಒ ವಿರುದ್ಧ ಕ್ರಮ ಕೈಗೊಳ್ಳದೇ ದಿನ ಕಳೆಯುತ್ತಿದ್ದಾರೆ. ಅವರ ಮೇಲೆ ತನಿಖೆ ಕೈಗೊಳ್ಳದಿದ್ದರೆ ಮುಂದಿನ ಸಭೆ ನಡೆಸಲು ಬಿಡುವುದಿಲ್ಲ ಎಂದು ಜಿಪಂ ಸದಸ್ಯೆ ಸರಸ್ವತಿ ಮೇಟಿ ಹಾಗೂ ತಾಪಂ ಸದಸ್ಯ ಕೈಲಾಸ ಕುಂಬಾರ ಪಟ್ಟು ಹಿಡಿದರು.
ಸಾಮಾನ್ಯ ಸಭೆಯಲ್ಲಿದ್ದ ಜಿಪಂ ಸದಸ್ಯ ಆಸಂಗೆಪ್ಪ ನಕ್ಕರಗುಂದಿ ಮಧ್ಯಪ್ರವೇಶಿಸಿ ತನಿಖೆ ವಿಳಂಬದ ಬಗ್ಗೆ ವಿವರ ಪಡೆದು ಅ ಧಿಕಾರಿಗಳ ಮೇಲೆ ಒತ್ತಡ ಹೇರಿದರು. ಅವರ ವಿರುದ್ಧದ ತನಿಖೆ ವಿಳಂಬಕ್ಕೆ ಕಾರಣ ನೀಡಿ, ಮತ್ತು ಅದರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿ ಕಾರಿಗಳಿಗೆ ತಾಕೀತು ಮಾಡಿದರು. ತನಿಖೆ ವಿಳಂಬದ ಕುರಿತು ಮೇಲಧಿ ಕಾರಿಗಳನ್ನು ಭೇಟಿಯಾಗಿ ವಿಚಾರಿಸೋಣ ಎಂದು ಸದಸ್ಯರನ್ನು ಮನವೊಲಿಸಲು ಮುಂದಾದರು.
ಮೇಲಧಿಕಾರಿಗಳು ಸಭೆಗೆ ಬರುವವರೆಗೂ ಸಭೆ ನಡೆಸಲು ಬಿಡುವುದಿಲ್ಲ ಎಂದು ಸದಸ್ಯರು ಪಟ್ಟು ಹಿಡಿದು ಸಭೆಯಿಂದ ಹೊರ ನಡೆದರು. ಸಭಾತ್ಯಾಗ ಮಾಡಿ ಹೊರ ನಡೆದ ಕಾಂಗ್ರೆಸ್‌ನ ತಾಪಂ ಹಾಗೂ ಜಿಪಂ ಸದಸ್ಯರನ್ನು ಅಧಿಕಾರಿಗಳು ಸಮಾಧಾನ ಪಡಿಸಿ ಸಭೆಗೆ ವಾಪಸ್ ಕರೆದುಕೊಂಡು ಬಂದು ಬೇರೆ ಕೊಠಡಿಯೊಳಗೆ ಸದಸ್ಯರೊಂದಿಗೆ ಕುಳಿತು ತನಿಖೆ ವಿಳಂಬದ ಬಗ್ಗೆ ಚರ್ಚಿಸಿದರು.
ಇದನ್ನೂ ಓದಿ :ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ
ಜಿಪಂ ಸದಸ್ಯ ಆಸಂಗೆಪ್ಪ ನಕ್ಕರಗುಂದಿ ಎರಡು ದಿನಗಳಲ್ಲಿ ಮೇಲಧಿಕಾರಿಗಳನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡೋಣ ಎಂದು ಹೇಳಿದ ನಂತರ ಸಾಮಾನ್ಯ ಸಭೆ ಮುಂದುವರಿಯಿತು. ಉಪಾಧ್ಯಕ್ಷ ಯಮನಪ್ಪ ವಡ್ಡರ, ಸದಸ್ಯರಾದ ಕನಕಪ್ಪ ಬಂದಕೇರಿ, ದೇವಕ್ಕೆವ್ವ ಪಾದನಕಟ್ಟಿ, ತಾಪಂ ಇಒ ಸಿದ್ದಪ್ಪ ನಕ್ಕರಗುಂದಿ ಹಾಜರಿದ್ದರು.