ಜೇವರ್ಗಿ: ಪಟ್ಟಣದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಮುಖ್ಯ ರಸ್ತೆ ಕಾಮಗಾರಿಯಿಂದ ಪಟ್ಟಣದ ಜನತೆ ಬೇಸತ್ತು ಹೋಗಿದ್ದು, ಕಾಮಗಾರಿ ಆರಂಭವಾಗಿ 10 ತಿಂಗಳು ಕಳೆದರೂ ಇನ್ನೂ ಅರ್ಧದಷ್ಟು ಮುಗಿದಿಲ್ಲ. ನಿತ್ಯ ಅನುಭವಿಸುತ್ತಿರುವ ಟ್ರಾμಕ್ ಸಮಸ್ಯೆಯಿಂದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆ ವತಿಯಿಂದ 2019-20ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನ ಅಡಿಯಲ್ಲಿ 17ಕೋಟಿ ರೂ.ವೆಚ್ಚದಲ್ಲಿ ಪಟ್ಟಣದ ರದ್ದೇವಾಡಗಿ ಪೆಟ್ರೋಲ್ ಬಂಕ್‌ನಿಂದ ಬಸವೇಶ್ವರ ಸರ್ಕಲ್ ವರೆಗೆ ಸಿಸಿ ರಸ್ತೆ, ಚರಂಡಿ, ಫುಟ್‌ಪಾತ್ ಕಾಮಗಾರಿ, ಬಸವೇಶ್ವರ ಸರ್ಕಲ್‌ದಿಂದ ಜ್ಯೋತಿ ಹೋಟೆಲ್, ಅಗ್ನಿಶಾಮಕ ಠಾಣೆವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯತ್ತಿದ್ದು, ಕಳೆದ ಜನವರಿ 28ರಂದು ಶಾಸಕ ಡಾ|ಅಜಯಸಿಂಗ್ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಚಾಲನೆ ನೀಡಿದ್ದರು.
ಕಾಮಗಾರಿ ಆರಂಭವಾಗಿ 10 ತಿಂಗಳು ಗತಿಸಿದರೂ ಶೇ.50 ಕೆಲಸವಾಗಿಲ್ಲ. ರಸ್ತೆಯ ಒಂದು ಬದಿ ಅಗೆದು ಕಾಮಗಾರಿ ಆರಂಭಿಸಲಾಗಿದ್ದು, ಅರ್ಧಂಬರ್ಧ ಸಿಸಿ ರಸ್ತೆ ಮಾಡಿ ಉಳಿದ ರಸ್ತೆ ಮೇಲೆ ಮುರುಮ್ ಹಾಕಿ ರೂಲಿಂಗ್ ಮಾಡಲಾಗಿದೆ. ಈ ಮೊದಲಿದ್ದ 30 ಅಡಿಯ ಡಾಂಬರ್ ರಸ್ತೆ ಅಗೆದು ಕೇವಲ 20ಅಡಿ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಇನ್ನೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ನಿತ್ಯ ಸಾವಿರಾರು ವಾಹನಗಳು ಪಟ್ಟಣದ ಮೂಲಕ ಹಾಯ್ದು ಹೋಗುವುದರಿಂದ ಟ್ರಾμಕ್ ಕಿರಿಕಿರಿ ಹೆಚ್ಚಾಗಿದೆ. ವಾಹನಗಳು ರಸ್ತೆಯ ಒಂದೇ ಬದಿ ಸಂಚರಿಸುವುದರಿಂದ ನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಈ ಕಾಮಗಾರಿಯಿಂದ ವ್ಯಾಪಾರ-ವಹಿವಾಟಿಗೂ ಸಾಕಷ್ಟು ಹೊಡೆತ ಬಿದ್ದಿದೆ. ಬೀದಿ ಬದಿ ವ್ಯಾಪಾರಿಗಳು ಇದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಕೆಲ ಕಡೆ ಸಿಸಿ ರಸ್ತೆ ಮಾಡಿದ ಕೆಲವೇ ದಿನಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಗುಣಮಟ್ಟದ ಕಾಮಗಾರಿ ನಡೆಯುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗುತ್ತಿದೆ. ಸ್ಥಳಿಯರು ಈ ಬಗ್ಗೆ ಹಲವಾರು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆ ಕಾಮಗಾರಿ ವಿರುದ್ಧ ಹಲವು ಸಂಘ-ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದರೂ ಕ್ಯಾರೆ ಎನ್ನದ ಗುತ್ತಿಗೆದಾರ ಹಾಗೂ ಅ ಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಗುಣಮಟ್ಟದ 30 ಅಡಿಯ ಡಾಂಬರ್ ರಸ್ತೆ ಅಗೆದು 20ಅಡಿಯ ಸಿಸಿ ರಸ್ತೆ ಮಾಡುವ ಅಗತ್ಯವಿರಲಿಲ್ಲ. ಆದರೂ ಸರ್ಕಾರದ ಹಣ ಲೂಟಿ ಮಾಡಲು ಈ ಕಾಮಗಾರಿ
ನಡೆಸಲಾಗುತ್ತಿದೆ. ಜನರ ತಾಳ್ಮೆಗೂ ಮಿತಿ ಇರುತ್ತದೆ. ಮಿತಿ ಮೀರಿದರೆ ರಸ್ತೆಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಗುಣಮಟ್ಟದ ರಸ್ತೆ ನಿರ್ಮಿಸುವುದರ ಜತೆಗೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.
*ಎಂ.ಎಸ್.ಪಾಟೀಲ ನರಿಬೋಳ,
ಅಧ್ಯಕ್ಷರು, ಪ್ರತ್ಯೇಕ ರಾಜ್ಯ ಹೋರಾಟ
ಸಮಿತಿ, ಕಲಬುರಗಿ
*ವಿಜಯಕುಮಾರ ಎಸ್.ಕಲ್ಲಾ