ಗದಗ: ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡು ತಿಂಗಳುಗಳೇ ಕಳೆದರೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಜಾನುವಾರುಗಳಿಗೆ ತ್ವರಿತಗತಿಯಲ್ಲಿ ಲಸಿಕೆ ನೀಡಲು ವಿಳಂಬವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಶಿರಹಟ್ಟಿ, ಲಕ್ಷ್ಮೇಶ್ವರ ಭಾಗದಲ್ಲಿ ಆಕಳು, ಎತ್ತು ಹಾಗೂ ಕರುಗಳಲ್ಲಿ ಹೆಚ್ಚಾಗಿ ಉಲ್ಬಣಿಸಿರುವ ಚರ್ಮಗಂಟು ರೋಗವು ರೈತರ ನಿದ್ದೆಗೆಡಿಸಿದೆ. ಜಾನುವಾರುಗಳಿಗೆ ಮೈತುಂಬ ಗಡ್ಡೆ, ಕಾಲುಗಳಿಗೆ ಬಾವು, ರಕ್ತ ಸೋರುವ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪಶು ಇಲಾಖೆ ವತಿಯಿಂದ ಈಗಾಗಲೇ ಲಸಿಕಾಕರಣ ಆರಂಭವಾಗಿದ್ದರೂ, ಸಿಬ್ಬಂದಿ ಕೊರತೆಯಿಂದ ವಿಳಬವಾಗುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಾಹಿತಿ ಪ್ರಕಾರ ಶಿರಹಟ್ಟಿ, ಲಕ್ಷ್ಮೇಶ್ವರ ಸೇರಿದಂತೆ ಜಿಲ್ಲೆಯಾದ್ಯಂತ 590ರಿಂದ 600 ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣಿಸಿದ್ದು, ಈವರೆಗೆ ಕೇವಲ 15ರಿಂದ 20 ಸಾವಿರ ಜಾನುವಾರುಗಳಿಗೆ ಮಾತ್ರ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಆಕಳು, ಎತ್ತು, ಎಮ್ಮೆ ಹಾಗೂ ಕರುಗಳು ಸೇರಿ 1.92 ಲಕ್ಷ ಜಾನುವಾರುಗಳಿದ್ದು ಲಸಿಕೆ ವಿತರಣೆ ಕಾರ್ಯ ಪೂರ್ಣಗೊಳಿಸುವುದು ಯಾವಾಗ ಎಂಬ ಚಿಂತೆ ಜಿಲ್ಲೆಯ ರೈತರನ್ನು ಕಾಡುತ್ತಿದೆ.
ಕ್ಯಾಪ್ರಿಫಾಕ್ಸ್ ವೈರಸ್: ಕ್ಯಾಪ್ರಿಫಾಕ್ಸ್ ವೈರಸ್‌ನಿಂದ ಜಾನುವಾರುಗಳಿಗೆ ಚರ್ಮಗಂಟು ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದು, ಜಾನುವಾರುಗಳಿಂದ ಜಾನುವಾರುಗಳಿಗೆ ಹಬ್ಬುತ್ತಿದೆ. ಸೊಳ್ಳೆಗಳು ಹಾಗೂ ನೊಣಗಳಿಂದ ಚರ್ಮಗಂಟು ರೋಗ ವ್ಯಾಪಿಸುತ್ತಿದ್ದು, ತಮ್ಮ ವ್ಯಾಪ್ತಿಯಲ್ಲಿ ಸ್ವತ್ಛತೆ ಕಾಪಾಡುವಂತೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್‌ಗಳಿಗೆ ಸೂಚಿಸಲಾಗಿದೆ. ಅಲ್ಲದೇ, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತೆ ತಿಳಿಸಲಾಗಿದೆ.
ಸಿಬ್ಬಂದಿ ಕೊರತೆ: ಜಿಲ್ಲೆಯ ಗದಗ ತಾಲೂಕಿನಲ್ಲಿ 27, ಶಿರಹಟ್ಟಿ 13, ರೋಣ 23, ಮುಂಡರಗಿ 16ಹಾಗೂ ನರಗುಂದ ತಾಲೂಕಿನ 9 ಸೇರಿ ಒಟ್ಟು 88 ಪಶು ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿವೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಸಿಬ್ಬಂದಿ ಕೊರತೆಯಿಂದ ಸೊರಗಿ ಹೋಗಿದೆ. ಎ, ಬಿ, ಸಿ ಮತ್ತು ಡಿ ದರ್ಜೆಯ ಮಂಜೂರಾದ 384 ಸರ್ಕಾರಿ ಮಂಜೂರಾತಿ ಹುದ್ದೆಗಳ ಪೈಕಿ 121 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 263 ಹುದ್ದೆಗಳು ಖಾಲಿ ಉಳಿದಿವೆ. ಅದರಲ್ಲಿ 13 ಮುಖ್ಯ ಪಶು ವೈದ್ಯಾಧಿಕಾರಿಗಳು ಹಾಗೂ 50 ಪಶು ವೈದ್ಯಾಧಿಕಾರಿಗಳ ಹುದ್ದೆ ಖಾಲಿಯಿದ್ದು, ಜಾನುವಾರುಗಳಿಗೆ ಲಸಿಕೆ ವಿತರಣೆಯಲ್ಲಿ ವಿಳಂಬವಾಗುತ್ತಿದೆ.
ಜಾನುವಾರು ಸಂತೆ, ಜಾತ್ರೆ, ಸಾಗಾಣಿಕೆ ನಿಷೇಧ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗವನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಅ. 22ರ ವರೆಗೆ ಜಿಲ್ಲೆಯಾದ್ಯಂತ ಸಾಮೂಹಿಕ ಜಾನುವಾರುಗಳ ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗದಗ ಕೃಷಿ ಉತ್ಪನ್ನ ಮರುಕಟ್ಟೆ ಸಮಿತಿಯ ಜಾನುವಾರು ಮಾರುಕಟ್ಟೆಯಲ್ಲಿ ಪ್ರತಿ ಶನಿವಾರ ಜರುಗುವ ಜಾನುವಾರು ಮತ್ತು ಕುರಿ ಸಂತೆ, ವ್ಯಾಪಾರ ವಹಿವಾಟನ್ನು ಅ. 22ರ ವರೆಗೆ ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ಸಾಂಕ್ರಾಮಿಕ ರೋಗ ನಿವಾರಣೆಗೆ ನಿರ್ದಿಷ್ಟ ಲಸಿಕೆಯಿಲ್ಲ. ಕ್ಯಾಪ್ರಿಫಾಕ್ಸ್ ವೈರಸ್‌ನಿಂದ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಲಸಿಕೆಯನ್ನು ಕಂಡು ಹಿಡಿಯಲಾಗುತ್ತಿದೆ. ಈಗಾಗಲೇ ಚರ್ಮಗಂಟು ರೋಗ ನಿಯಂತ್ರಣಕ್ಕೆ ಲಸಿಕಾಕರಣ ಆರಂಭವಾಗಿದ್ದು, ಶೀಘ್ರ ಲಸಿಕಾಕರಣ ಪೂರ್ಣಗೊಳಿಸಲಾಗುವುದು. ∙
ಡಾ| ಎಚ್.ಬಿ. ಹುಲಗಣ್ಣವರ, ಉಪನಿರ್ದೇಶಕರು, ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ