Advertisement

ಭಟ್ಕಳ: ಬಸ್ತಿ-ಉತ್ತರ ಕೊಪ್ಪ ರಸ್ತೆ ಕಾಮಗಾರಿ ವಿಳಂಬ; ಸಾರ್ವಜನಿಕರ ಪ್ರತಿಭಟನೆ

12:51 PM Jul 21, 2022 | Team Udayavani |

ಭಟ್ಕಳ: ತಾಲೂಕಿನ ಬಸ್ತಿ-ಉತ್ತರ ಕೊಪ್ಪ ರಸ್ತೆ ಸಂಪೂರ್ಣ ಹಾಳಾಗಿದ್ದು ಹೊಸದಾಗಿ ಮಾಡುತ್ತಿರುವ ಸಿಮೆಂಟ್ ರಸ್ತೆ ಕೂಡಾ ಅರ್ಧಕ್ಕೆ ನಿಂತಿರುವುದರಿಂದ ನಾಗರೀಕರು ಓಡಾಡುವುದೇ ಕಷ್ಟಕರವಾಗಿದೆ ಎಂದು ದೂರಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

Advertisement

ಕಳೆದ 2018ನೇ ಸಾಲಿನಲ್ಲಿ ರಸ್ತೆ ಮಳೆಯಿಂದ ಕೊಚ್ಚಿ ಹೋಗಿದೆ ಎಂದು ಅತಿವೃಷ್ಟಿ ಯೋಜನೆಯಡಿಯಲ್ಲಿ 140 ಲಕ್ಷ ಮಂಜೂರಾಗಿತ್ತು. ಮಂಜೂರಾದ ಹಣದಲ್ಲಿ ಈ ಹಿಂದೆ ಇದ್ದ ಡಾಂಬರ್ ರಸ್ತೆಯನ್ನು ತೆಗೆದು ಸಿಮೆಂಟ್ ರಸ್ತೆ ಮಾಡಲಾಗುತ್ತಿದೆ. ಗುತ್ತಿಗೆದಾರರು ಅಲ್ಲಲ್ಲಿ ಕೆಲಸ ಮಾಡಿದ್ದು ಹೆಚ್ಚಿನ ಕಡೆಗಳಲ್ಲಿ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ. ಇದರಿಂದ ವಾಹನ ಓಡಾಟಕ್ಕೆ, ದಿನ ನಿತ್ಯ ಶಾಲಾ ಮಕ್ಕಳು ಓಡಾಡುವುದಕ್ಕೆ ತೀರಾ ತೊಂದರೆಯಾಗಿದೆ. ಕಳೆದ ಹಲವಾರು ಸಮಯದಿಂದ ಉತ್ತರ ಕೊಪ್ಪಕ್ಕೆ ಹೋಗುತ್ತಿದ್ದ ಬಸ್ಸು ಕೂಡಾ ಬರುತ್ತಿಲ್ಲ. ಸುಮಾರು 26 ಕಿ.ಮೀ. ರಸ್ತೆಯುದ್ದಕ್ಕೂ ಸಾವಿರಾರು ಮನೆಗಳಿದ್ದು, ಪ್ರತಿಯೊಬ್ಬರೂ ಖಾಸಗಿ ವಾಹನವನ್ನೇ ಬಳಸಬೇಕಾದ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬುಧವಾರ ಕಾಮಗಾರಿ ನಡೆಸುತ್ತಿರುವ ಉತ್ತರಕೊಪ್ಪ ರಸ್ತೆಯಲ್ಲಿ ಸೇರಿದ ಸಾರ್ವಜನಿಕರು ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ರಸ್ತೆ ಕಾಂಕ್ರೀಟಿಕರಣ ನಡೆಯುತ್ತಿದ್ದು, ಬಸ್ಸುಗಳು ಸಂಚರಿಸುತ್ತಿಲ್ಲ. ಇದರಿಂದ ಶಿರಾಣಿ, ಉತ್ತರಕೊಪ್ಪ ಮುಂತಾದ ಭಾಗಗಳಿಂದ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಈ ಭಾಗದಲ್ಲಿ ದೇವಸ್ಥಾನ, ಶಾಲೆ, ಫ್ಯಾಕ್ಟರಿ ಮುಂತಾದವುಗಳಿದ್ದು ಓಡಾಡುವುದಕ್ಕೆ ರಸ್ತೆ ಕಾಮಗಾರಿ ವಿಳಂಬವಾಗಿರುವುದರಿಂದ ತೊಂದರೆಯಾಗುತ್ತಿದೆ. ಕಾಂಕ್ರಿಟ್ ರಸ್ತೆ ಮಾಡದೇ ಇರುವುದು, ರಸ್ತೆ ಕಿರಿದಾಗಿದ್ದು, ಎರಡು ವಾಹನಗಳು ಸಂಚರಿಸಲು ಆಗುತ್ತಿಲ್ಲ. ಇತ್ತೀಚೆಗೆ ವಾಹನವೊಂದು ಪಲ್ಟಿಯಾದ ಕುರಿತು ಹೇಳುವ ಅವರು ಎರಡೂ ಕಡೆಯಲ್ಲಿ ಗಟಾರ ಮಾಡಿ ಸಿಮೆಂಟ್ ಬ್ಲಾಕ್‌ಗಳಿಂದ ಮುಚ್ಚಬೇಕು ಎನ್ನುತ್ತಾರೆ.  ರಸ್ತೆ ಬದಿಯಲ್ಲಿ ದೊಡ್ಡ ಕಂದಕ ಏರ್ಪಟ್ಟಿದ್ದು ಮಣ್ಣನ್ನು ಹಾಕಿ ಸರಿಪಡಿಸಬೇಕು. ಹಳೇಯದಾದ ಮೋರಿಗಳನ್ನು ಕೂಡಾ ಬದಲಾಯಿಸದೇ ಸಿಮೆಂಟ್ ರಸ್ತೆ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇಲ್ಲಿ ನೀರು ಹೋಗಲೂ ಸ್ಥಳವಿಲ್ಲದಂತಾಗುವ ಅಪಾಯವಿದೆ.  ಶೀಘ್ರದಲ್ಲಿ ರಸ್ತೆ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಬಾಬು ದೇವಡಿಗ ಕೋಟದಮಕ್ಕಿ, ಲಕ್ಷ್ಮಣ ನಾಯ್ಕ, ತಾ.ಪಂ.ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ನ್ಯಾಯವಾದಿ ಜಿ.ಟಿ. ನಾಯ್ಕ, ವಿಷ್ಣು ನಾಯ್ಕ, ಪ್ರಭಾಕರ ಶೆಟ್ಟಿ, ಮಾದೇವ ನಾಯ್ಕ, ನಾಗಪ್ಪ ನಾಯ್ಕ, ದೇವಿದಾಸ ನಾಯ್ಕ, ಎಂ.ಆರ್. ನಾಯ್ಕ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next