Advertisement

ಖರೀದಿ ವಿಳಂಬ: ರೈತರಿಗೆ ಸಂಕಷ್ಟ 

03:13 PM Dec 19, 2022 | Team Udayavani |

ಮಂಡ್ಯ: ಮಳೆ ಅತಿವೃಷ್ಟಿಯಿಂದ ಬೆಳೆಗಳು ನೆಲಕಚ್ಚುತ್ತಿರುವ ಬೆನ್ನಲ್ಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಭತ್ತ ಹಾಗೂ ರಾಗಿ ಖರೀದಿ ಕೇಂದ್ರ ತೆರೆಯದ ಹಿನ್ನೆಲೆ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಮಳೆಯ ನಷ್ಟದ ಜತೆಗೆ ಉಳಿದಿರುವ ಬೆಳೆಯನ್ನು ಕಟಾವು ಮಾಡಿ ದಲ್ಲಾಳಿಗಳಿಗೆ ಬೇಕಾದ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.

Advertisement

ವಿಳಂಬ: ಈಗಾಗಲೇ ಖರೀದಿ ಕೇಂದ್ರ ತೆರೆಯದೆ ವಿಳಂಬ ಮಾಡಿರುವುದರಿಂದ ಶೇ.20ರಷ್ಟು ಕಟಾವು ಮುಗಿದಿದೆ. ಪ್ರಸ್ತುತ ಡಿಸೆಂಬರ್‌ನಲ್ಲಿ ಸಂಪೂರ್ಣ ಕಟಾವು ಮುಗಿಯು ವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕಟಾವು ಮಾಡಿರುವ ಭತ್ತ, ರಾಗಿ ಒಕ್ಕಣೆಯೂ ಮುಗಿದಿದ್ದು, ಸಂಗ್ರಹಿಸಲು ತೊಂದರೆಯಾಗಿದೆ.

ದಲ್ಲಾಳಿಗಳ ಹಾವಳಿ: ಕಟಾವು ಮಾಡಿರುವ ರೈತರ ಗದ್ದೆಗಳಿಗೆ ಲಗ್ಗೆ ಇಡುತ್ತಿರುವ ದಲ್ಲಾಳಿಗಳು ಭತ್ತ ಹಾಗೂ ರಾಗಿ ಖರೀದಿಗೆ ಮುಂದಾಗಿದ್ದಾರೆ. ಬೆಂಬಲ ಬೆಲೆಗಿಂತ 300ರಿಂದ 400 ರೂ. ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಇದರಿಂದ ರೈತರು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗದೆ ಬಂದ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.

ಡಿ.15ರಿಂದ ನೋಂದಣಿ: ರೈತರಿಂದ ಭತ್ತ ಹಾಗೂ ರಾಗಿ ಖರೀದಿಸಲು ನೋಂದಣಿ ಡಿ.15ರಿಂದ ಪ್ರಾರಂಭವಾಗಿದೆ. ಜ.1ರಿಂದ 31ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ. ಒಬ್ಬ ರೈತನಿಂದ ಕನಿಷ್ಠ 25 ಕ್ವಿಂಟಲ್‌ ಹಾಗೂ ಗರಿಷ್ಠ 40 ಕ್ವಿಂಟಲ್‌ ಭತ್ತ ಖರೀದಿಗೆ ತೀರ್ಮಾನಿಸಲಾಗಿದೆ. ಅದರಂತೆ ರಾಗಿಯನ್ನು ಪ್ರತಿ ಎಕರೆಗೆ ಕನಿಷ್ಠ 10 ಕ್ವಿಂಟಲ್‌ ಹಾಗೂ ಗರಿಷ್ಠ 20 ಕ್ವಿಂಟಲ್‌ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಅಲ್ಲಿಯವರೆಗೂ ರೈತರಿಗೆ ಸಂಗ್ರಹಿಸಿ ಟ್ಟುಕೊಳ್ಳುವ ಅನಿವಾರ್ಯತೆ ಎದು ರಾಗಿದೆ. ಜಿಲ್ಲಾದ್ಯಂತ 32 ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ.

ಖರೀದಿ ದರ ಹೆಚ್ಚಳ: ಈ ಬಾರಿ 2022-23ನೇ ಸಾಲಿನಲ್ಲಿ ಭತ್ತ ಹಾಗೂ ರಾಗಿ ಖರೀದಿ ದರವನ್ನು 200ರಿಂದ 250 ರೂ. ಹೆಚ್ಚಿಸಲಾಗಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ 2040 ರೂ. ಹಾಗೂ ಎ ಗ್ರೇಡ್‌ ಭತ್ತಕ್ಕೆ 2060 ರೂ. ನಿಗದಿಪಡಿಸಲಾಗಿದೆ. ಅದರಂತೆ ರಾಗಿಗೆ ಪ್ರತಿ ಕ್ವಿಂಟಲ್‌ಗೆ 3578 ರೂ. ನಿಗದಿಪಡಿಸಲಾಗಿದೆ.

Advertisement

ಉತ್ಪಾದನೆ ಕುಂಠಿತ: ಮಳೆ ಹಿನ್ನೆಲೆ ಜಿಲ್ಲಾದ್ಯಂತ ಭತ್ತ, ರಾಗಿ ಉತ್ಪಾದನೆಯಲ್ಲೂ ಕುಂಠಿತವಾಗಿದೆ. ಪೂರ್ವ ಮುಂಗಾರು, ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು ಈ ಬಾರಿ ಉತ್ಪಾದನೆ ಕುಂಠಿತವಾಗಿದೆ.

ಎಪಿಎಂಸಿ ಮೂಲಕ ಖರೀದಿ: ಕಳೆದ ವರ್ಷ ರೈಸ್‌ಮಿಲ್‌ ಮಾಲೀಕರ ಮೂಲಕ ಖರೀದಿಸಲಾಗುತ್ತಿತ್ತು. ಈ ಬಾರಿ ರಾಜ್ಯ ಸಹಕಾರ ಮಾರಾಟ ಮಂಡಳಿ ಖರೀದಿ ಏಜೆನ್ಸಿಗೆ ನೀಡಲಾಗಿ ದ್ದು, ಎಪಿಎಂಸಿ ಮೂಲಕ ಖರೀದಿಸಲಾಗುತ್ತಿದೆ. ಆದರೆ ವಿಳಂಬ ಧೋರಣೆಯಿಂದ ರೈತರಿಗೆ ತೊಂದರೆಯಾಗಿದೆ.

1,07,187 ಹೆಕ್ಟೇರ್‌ ಬಿತ್ತನೆ: ಜಿಲ್ಲಾದ್ಯಂತ 1,07,187 ಹೆಕ್ಟೇರ್‌ನಲ್ಲಿ ಭತ್ತ ಹಾಗೂ ರಾಗಿ ಬಿತ್ತನೆ ಮಾಡಲಾಗಿದೆ. ಭತ್ತ 61,459 ಹೆಕ್ಟೇರ್‌ ಹಾಗೂ ರಾಗಿ 45728 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಬಿತ್ತನೆ ಮಾಡಲಾಗಿದೆ. ಆದರೆ, ಅಕಾಲಿಕವಾಗಿ ಸುರಿದ ಮಳೆಯಿಂದ ಉತ್ಪಾದನೆ ಕುಂಠಿತವಾಗಿದೆ. ಭತ್ತ 4,91,672 ಮೆಟ್ರಿಕ್‌ ಟನ್‌ ಹಾಗೂ ರಾಗಿ 1,00,602 ಮೆಟ್ರಿಕ್‌ ಟನ್‌ ಉತ್ಪಾದನೆಯಾಗಿದೆ ಎಂದು ಅಂದಾಜಿಸಲಾಗಿದೆ.

ಈಗಾಗಲೇ ನೋಂದಣಿ ಆರಂಭ ವಾಗಿದ್ದು, ಜ.1ರಿಂದ ಭತ್ತ ಹಾಗೂ ರಾಗಿ ಖರೀದಿಗೆ ಕ್ರಮ ವಹಿಸಲಾಗಿದೆ. ಈಗಾಗಲೇ ಕಟಾವು ಮಾಡಿರುವ ರೈತರು ಭತ್ತವನ್ನು ಚೆನ್ನಾಗಿ ಒಣಗಿಸಿ ಸಂಗ್ರಹಿಸಿಟ್ಟು ಕೊಳ್ಳಬೇಕು. ದಲ್ಲಾಳಿಗಳಿಗೆ ಮಾರಾಟ ಮಾಡಬೇಡಿ. ಅಶೋಕ್‌, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಮಂಡ್ಯ

ಖರೀದಿ ಕೇಂದ್ರ ತೆರೆಯದೆ ವಿಳಂಬವಾಗಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ದಲ್ಲಾಳಿಗಳಿಗೆ ಮಾರಾಟ ಮಾಡುವ ಬದಲು ರೈಸ್‌ಮಿಲ್‌ ಮಾಲೀಕರೇ ಖರೀದಿಸುವುದರಿಂದ ಸಾಗಾಣಿಕೆ ವೆಚ್ಚ ಸೇರಿ ಇತರೆ ವೆಚ್ಚ ಕಡಿಮೆಯಾಗಲಿದೆ. ಆದ್ದರಿಂದ ಸರ್ಕಾರ ಕ್ರಮ ವಹಿಸಬೇಕು. – ಎಸ್‌.ಸಿ. ಮಧುಚಂದನ್‌, ರಾಜ್ಯ ಸಂಘಟನಾ ಕಾರ್ಯದರ್ಶಿ, ರೈತಸಂಘ

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next