ಕಲಬುರಗಿ: ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಸ್ಥಳಗಳ ಅಧ್ಯಯನ ಪ್ರವಾಸ ಕೈಗೊಂಡಿರುವ ಕೇಂದ್ರ ತಂಡ, ಸಂತ್ರಸ್ತ ರೈತರ ನಿಖರವಾದ ಮಾಹಿತಿ ನೀಡುವ ವಿಚಾರವಾಗಿ ಸ್ಥಳೀಯ ಅಧಿಕಾರಿಗಳ ಚಳಿ ಬಿಡಿಸಿದರು.
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ರಮೇಶಕುಮಾರ ಘಂಟಾ ಮತ್ತು ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ನಿರ್ದೇಶಕ ಡಾ. ಭರ್ತೇಂದು ಕುಮಾರ್ ಸಿಂಗ್ ಅವರು ಸೋಮವಾರ, ತಾಲೂಕಿನ ಕಪನೂರ ಸಮೀಪ ನೆರೆಯಿಂದ ಹಾನಿಯಾದ ಎಸ್ ಟಿಪಿ ಘಟಕ ಮತ್ತು ಸುತ್ತಲಿನ ಗ್ರಾಮಗಳ ಬೆಳೆ ಹಾನಿ ಕುರಿತು ಮಾಹಿತಿ ಪಡೆದರು.
ಈ ವೇಳೆ ರೈತರು ಕೇಂದ್ರ ತಂಡದ ಮುಂದೆ ತಮ್ಮ ಅಳಲು ತೋಡಿಕೊಂಡರು. ಆಗ ಸ್ಥಳದಲ್ಲಿದ್ದ ರೈತರಿಗೆ ಪರಿಹಾರ ಸಿಕ್ಕಿದೆಯೋ ಇಲ್ಲವೋ ಎಂಬ ಮಾಹಿತಿ ನೀಡುವಂತೆ ತಂಡದ ಮುಖ್ಯಸ್ಥ ರಮೇಶಕುಮಾರ್ ಘಂಟಾ ಅವರು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಓ ಡಾ.ರಾಜಾ ಪಿ., ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ ಅವರಿಗೆ ಕೇಳಿದರು.
ಈ ಸಮಯದಲ್ಲಿ ಗ್ರಾಮ ಲೆಕ್ಕಾಧಿಕಾರಿ ಅವರಿಂದ ಮಾಹಿತಿ ಕೊಡಿಸಲು ಅಧಿಕಾರಿಗಳು ಮುಂದಾದರು. ಸ್ಥಳದಲ್ಲಿದ್ದ ರೈತರ ಮಾಹಿತಿ ಬಿಟ್ಟು ಇಡೀ ಗ್ರಾಮದ ಮಾಹಿತಿ ನೀಡಲು ಗ್ರಾಮ ಲೆಕ್ಕಾಧಿಕಾರಿ ಯತ್ನಿಸಿದರು. ಕೇಂದ್ರ ತಂಡದ ಅಧಿಕಾರಿಗಳು ಬಯಸಿದ ಮಾಹಿತಿ ನೀಡಲಿಲ್ಲ. ಬದಲಿಗೆ ಮತ್ತೊಬ್ಬ ಸಂತ್ರಸ್ತರ ಹೆಸರು ಹೇಳಿ ಅವರ ಮಗ ಇಲ್ಲಿದ್ದಾರೆ ಎಂದು ಗ್ರಾಮ ಲೆಕ್ಕಾಧಿಕಾರಿ ಹೇಳಿದರು.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಪಿಡಿಪಿ ಮುಖಂಡನ ಮನೆ ಮೇಲೆ ಉಗ್ರರ ದಾಳಿ; ಖಾಸಗಿ ಭದ್ರತಾ ಅಧಿಕಾರಿ ಸಾವು
ಆದರೆ, ಇದಕ್ಕೆ ಒಪ್ಪದ ರಮೇಶಕುಮಾರ್ ಘಂಟಾ ಅವರು, ನಮ್ಮ ಭೇಟಿಯ ಬಗ್ಗೆ ಮುಂಚೆಯೇ ನಿಮಗೆ ಮಾಹಿತಿ ಕೊಟ್ಟಿರುತ್ತೇವೆ. ಆದರೂ ನಾವು ಬಯಸಿದ ಮಾಹಿತಿ ಕೊಡಲಿಲ್ಲ ಅಂದರೆ ಹೇಗೆ ಎಂದು ಜಿಲ್ಲಾಧಿಕಾರಿ ಜೋತ್ಸ್ನಾ ಮತ್ತು ಇತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಸಂತ್ರಸ್ತರ ದಾಖಲಾತಿ ಪರಿಶೀಲನೆಗೆ ಅವರು ಒತ್ತು ಕೊಟ್ಟರು.
ನಂತರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಅವರು, ಮುಂದಿನ ಸ್ಥಳಕ್ಕೆ ಹೋಗುವುದರೊಳಗಾಗಿ ಕೇಂದ್ರ ತಂಡದ ಬಯಸುವ ಮಾಹಿತಿ ಕೊಡಲು ಅಧಿಕಾರಿಗಳಿಗೆ ತಿಳಿಸಿ ಎಂದು ಕೃಷಿ ಇಲಾಖೆಯ ಜೆಡಿ ಸೂಗುರ ಅವರಿಗೆ ತಾಕೀತು ಮಾಡಿದರು
ಇದನ್ನೂ ಓದಿ: ಪುತ್ರನಿಗಾಗಿ ತಾಯಿಯಿಂದ ಮಾಲೀಕರ ಮನೆಯಲ್ಲೇ ಕಳ್ಳತನ.!