Advertisement

ಮುಂಗಾರು ವಿಳಂಬ – ಚುರುಕುಗೊಳ್ಳದ ಕೃಷಿ ಚಟುವಟಿಕೆ- ಮಳೆಗಾಗಿ ಕಾಯುತ್ತಿರುವ ರೈತರು

10:49 PM Jun 17, 2023 | Team Udayavani |

ಉಡುಪಿ: ಮುಂಗಾರು ಮಳೆ ವಿಳಂಬದಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೃಷಿ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ. ಮುಂಗಾರು ಋತುವಿನಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಪ್ರಧಾನವಾಗಿ ಭತ್ತವನ್ನು ಬೆಳೆಯುತ್ತಿದ್ದು, ಈ ಬಾರಿ ರೈತರಲ್ಲಿ ಆತಂಕ ಮನೆ ಮಾಡಿದೆ.

Advertisement

ಉಡುಪಿ ಜಿಲ್ಲೆಯಲ್ಲಿ ಸುಮಾರು 38 ಸಾವಿರ ಹೆಕ್ಟೇರ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9,300 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.
ಸಾಂಪ್ರದಾಯಿಕ ಬಿತ್ತನೆ ಪದ್ಧತಿ ಈಗ ಉಭಯ ಜಿಲ್ಲೆಗಳಲ್ಲೂ ತೀರಾ ಕಡಿಮೆಯಾಗಿದೆ. ರೈತರು ಬೀಜಗಳನ್ನು ತಂದು ಮನೆಯಲ್ಲೇ ಸಣ್ಣದಾಗಿ ನರ್ಸರಿ ರೀತಿಯಲ್ಲಿ ನೇಜಿ ಮಾಡುತ್ತಾರೆ ಅಥವಾ ನರ್ಸರಿಗಳಿಂದ ನೇಜಿ ತಂದು ಯಂತ್ರದ ಮೂಲಕ ನಾಟಿ ಮಾಡುತ್ತಾರೆ. ಗದ್ದೆಯನ್ನು ಹದ ಮಾಡಲೂ ಯಂತ್ರದ ಬಳಕೆಯೇ ಹೆಚ್ಚು.

ಈ ವರ್ಷ ನಿಗದಿತ ಪ್ರಮಾಣದಲ್ಲಿ ಮಳೆ ಆಗದೇ ಇರುವುದರಿಂದ ಇನ್ನೂ ಕೃಷಿ ಚಟುವಟಿಕೆ ಬಿರುಸುಗೊಂಡಿಲ್ಲ. ಸಾಮಾನ್ಯವಾಗಿ ಜೂನ್‌ ಮೊದಲ ವಾರದ ಮಳೆಯ ಆಧಾರದಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸುತ್ತಾರೆ. ಆದರೆ ಈ ಬಾರಿ ಹಾಗಾಗಿಲ್ಲ.

ನೇಜಿ ಮಾಡಲು 20ರಿಂದ 25 ದಿನ ಬೇಕಾಗುತ್ತದೆ. ಬಿತ್ತನೆ ಬೀಜವನ್ನು ತಂದು ನಿರ್ದಿಷ್ಟ ಕ್ರಮದಲ್ಲಿ ಆಧುನಿಕ ವಿಧಾನ ಬಳಸಿ ನೇಜಿ ಮಾಡಲಾಗುತ್ತದೆ. 20ರಿಂದ 22 ದಿನಕ್ಕೆ ಭತ್ತದ ಗಿಡಗಳು ಯಂತ್ರದ ಮೂಲಕ ನಾಟಿ ಮಾಡಲು ಸೂಕ್ತವಾದ ರೀತಿಯಲ್ಲಿ ಬೆಳೆಯುತ್ತವೆ. ನಾಟಿಯ ಬಳಿಕ ನೀರು ಹೆಚ್ಚು ಬೇಕಾಗುತ್ತದೆ. ನೀರು ಕಡಿಮೆಯಾದರೆ ಫ‌ಸಲು ಚೆನ್ನಾಗಿ ಬರುವುದಿಲ್ಲ. ಮಳೆಯೇ ಆಗದಿದ್ದರೆ ಒಣಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹಾಗಾಗಿ ಉತ್ತಮ ಮಳೆಯ ಅನಿವಾರ್ಯ ಎನ್ನುತ್ತಾರೆ ರೈತರಾದ ಸತೀಶ್‌ ಕುಮಾರ್‌ ಶೆಟ್ಟಿ ಯಡ್ತಾಡಿ.

ಆಗಸ್ಟ್‌ 15ರ ವರೆಗೂ ಸಮಯವಿದೆ
ಸದ್ಯ ಮಳೆ ಆಗದೇ ಇದ್ದರೂ ಜುಲೈ ಮೊದಲ ವಾರದ ಅನಂತರದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ರೈತರಿಗೆ ಆಗಸ್ಟ್‌ 15ರ ವರೆಗೂ ಕಾಲಾವಕಾಶ ಇರುತ್ತದೆ. ಆಗಸ್ಟ್‌ ಅನಂತರದಲ್ಲಿ ನಾಟಿ ಕಷ್ಟ. ಫ‌ಸಲು ಬರುವಾಗ ವಿಳಂಬವಾಗುತ್ತದೆ. ಅಲ್ಲದೆ ಫ‌ಸಲು ಬಂದ ಅನಂತರದಲ್ಲಿ ಮಳೆ ಹೆಚ್ಚಾದರೆ ಕೃಷಿಕರಿಗೆ ನಷ್ಟವೂ ಹೆಚ್ಚು. ಹೀಗಾಗಿ ಜುಲೈಯಲ್ಲಿ ಉತ್ತಮ ಮಳೆಯಾದರೆ ಕೃಷಿಕರಿಗೆ ಅನುಕೂಲವಾಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

Advertisement

ಬಿತ್ತನೆಯಾಗಿಲ್ಲ
ಉಡುಪಿ ಜಿಲ್ಲೆಯಲ್ಲಿ ಈವರೆಗೂ ಕೇವಲ 33 ಹೆಕ್ಟೇರ್‌ಗಳಲ್ಲಿ ಮಾತ್ರ ಬಿತ್ತನೆಯಾಗಿದೆ. ಕಾಪುವಿನಲ್ಲಿ 1, ಬ್ರಹ್ಮಾವರದಲ್ಲಿ 2, ಕುಂದಾಪುರದಲ್ಲಿ 10 ಹಾಗೂ ಬೈಂದೂರಿನಲ್ಲಿ 20 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದೆ. ದ.ಕ.ದಲ್ಲಿ ಬಿತ್ತನೆ ಇನ್ನೂ ಆರಂಭವಾಗಿಲ್ಲ.

ರೈತರು ಕೃಷಿ ಚಟುವಟಿಕೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ನೇಜಿ ತಯಾರಾಗುತ್ತಿವೆ. ಆದರೆ ಮಳೆ ತೀರಾ ಕಡಿಮೆಯಿದೆ. ಭೂಮಿ ಹದ ಮಾಡಿಕೊಳ್ಳುವಷ್ಟು ಮಳೆ ಆಗುತ್ತಿದೆ. ಆದರೆ ಭತ್ತದ ಪೋಷಣೆಗೆ ಹೆಚ್ಚು ಮಳೆ ಅಗತ್ಯ. ಮಾನ್ಸೂನ್‌ ಈವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ.
– ಡಾ| ಕೆಂಪೇಗೌಡ, ಸೀತಾ ಎಂ.ಸಿ., ಉಪ ನಿರ್ದೇಶಕರು, ಕೃಷಿ ಇಲಾಖೆ, ದ.ಕ., ಉಡುಪಿ

 ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next