Advertisement

ನ್ಯಾಯದಾನ ಪ್ರಕ್ರಿಯೆಯಲ್ಲಿನ ವಿಳಂಬ ಜನ ದಂಗೆಯೇಳುವಂತೆ ಮಾಡುತ್ತದೆ: ಸಿಜೆಐ ಬೊಬ್ಡೆ

09:41 AM Dec 19, 2019 | Hari Prasad |

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ದೋಷಿಗಳೆಂದು ನ್ಯಾಯಾಲಯದಲ್ಲಿ ಘೋಷಿತಗೊಂಡು ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಿಗೆ ಶಿಕ್ಷೆಯನ್ನು ನೀಡುವಲ್ಲಿ ಆಗುತ್ತಿರುವ ವಿಳಂಬಕ್ಕೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಅತ್ಯಾಚಾರ ಮತ್ತು ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯದಾನ ವಿಳಂಬ ಉಂಟಾಗುತ್ತಿರುವುದರಿಂದ ಜನ ಸಾಮಾನ್ಯರು ಆತಂಕಕ್ಕೀಡಾಗುತ್ತಾರೆ ಮತ್ತು ಇದು ನಿಧಾನವಾಗಿ ಅವರಲ್ಲಿ ನ್ಯಾಯದಾನ ಪ್ರಕ್ರಿಯೆಯ ಕುರಿತಾಗಿ ರೋಷ ಉಂಟಾಗಲು ಕಾರಣವಾಗುವ ಅಪಾಯ ಇದೆ ಎಂಬ ಕಳವಳವನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ವ್ಯಕ್ತಪಡಿಸಿದ್ದಾರೆ.

ಮತ್ತು ಈ ಪ್ರಕರಣದ ಹಿನ್ನಲೆಯಲ್ಲಿ ಸ್ವಯಂಪ್ರೇರಿತ ಪತ್ರವೊಂದನ್ನು ಬರೆದಿರುವ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು, ಲೈಂಗಿಕ ಅಪರಾಧಗಳಲ್ಲಿ ಸಂತ್ರಸ್ತರಾದವರಿಗೆ ಶೀಘ್ರ ನ್ಯಾಯ ಒದಗಿಸಿಕೊಡುವಂತಾಗಲು ಈಗಿರುವ ಕಾನೂನು ಚೌಕಟ್ಟನ್ನ ಮತ್ತು ಪೊಲೀಸ್ ಕಾರ್ಯವೈಖರಿ ವಿಧಾನವನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ ಎಂದು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ಗಂಭೀರ ಸೂಚನೆ ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮುಖ್ಯ ನ್ಯಾಯಮೂರ್ತಿಯವರು ನೀಡಿರುವ ಈ ಸೂಚನಾ ಪತ್ರದಲ್ಲಿ, 2017ರಲ್ಲಿ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 32,559 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಮತ್ತು ಇದು ಅತ್ಯಂತ ಕಳವಳಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಲೈಂಗಿಕ ಅಪರಾಧ ಪ್ರಕರಣಗಳಿಗೆ ಈಗಿರುವ ಕಾನೂನು ಕ್ರಮಗಳ ಕುರಿತಾಗಿ ಸ್ಥಿತಿಗತಿ ವರದಿಯೊಂದನ್ನು ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿಯವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಪೊಲೀಸ್ ಮಹಾನಿರ್ದೇಶಕರುಗಳಿಗೆ ಅವರು ಆದೇಶ ನೀಡಿದ್ದಾರೆ.

Advertisement

ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ತಮ್ಮ ಕರ್ತವ್ಯವನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ತತ್ಸಂಬಂಧಿ ಕರ್ತವ್ಯ ನಿರ್ವಹಣೆಗಾಗಿರುವ ಮಾನದಂಡಗಳೇನು ಎಂಬ ಮಾಹಿತಿಯನ್ನೂ ಸಹ ಮುಖ್ಯನ್ಯಾಯಮೂರ್ತಿಯವರು ಅಪೇಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next