Advertisement

Smart Card ವಿತರಣೆಯಲ್ಲಿ ವಿಳಂಬ; ಚಾಲನಾ ಪರವಾನಿಗೆ, ಆರ್‌ಸಿ ಸಿಗದೆ ಸವಾರರು ಕಂಗಾಲು

12:52 AM Apr 03, 2024 | Team Udayavani |

ಮಂಗಳೂರು: ಹೊಸ ವಾಹನ ಖರೀದಿಸಿದವರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪ್ರಯಾಣದ ವೇಳೆ ತಡೆದು ನಿಲ್ಲಿಸುವ ಅಧಿಕಾರಿಗಳು ದಾಖಲೆ ನೀಡುವಂತೆ ಕೇಳಿದಾಗ ತೋರಿಸಲು ಸ್ಮಾರ್ಟ್‌ ಕಾರ್ಡ್‌ ಇಲ್ಲದ ವಾಹನ ಮಾಲಕರು ಸಮಸ್ಯೆಗೀಡಾಗುತ್ತಿದ್ದಾರೆ.

Advertisement

ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿ ಸರಿಸುಮಾರು 1 ತಿಂಗಳೊಳಗೆ ನೋಂದಣಿ ಪತ್ರ (ಆರ್‌ಸಿ) ಕೈಸೇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೂರು- ನಾಲ್ಕು ತಿಂಗಳಾದರೂ ವಾಹನದ ನೋಂದಣಿ ಪತ್ರ ಸಿಗುತ್ತಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ಚೆಕ್‌ಪೋಸ್ಟ್‌ ಗಳನ್ನು ತೆರೆಯಲಾಗಿದ್ದು, ತೀವ್ರ ತಪಾಸಣೆ ನಡೆಯುತ್ತಿದೆ. ಹೊರ ಜಿಲ್ಲೆಯ ಅಧಿಕಾರಿಗಳು ತಪಾಸಣ ತಂಡದಲ್ಲಿರುವ ಹಿನ್ನೆಲೆಯಲ್ಲಿ ದಾಖಲೆ ಪರಿಶೀಲನೆ ವೇಳೆ ಮನವರಿಕೆ ಮಾಡುವುದೇ ಸವಾಲಿನ ಕೆಲಸ. ರಾತ್ರಿ ಸಂಚಾರದ ವೇಳೆ ತಪಾಸಣೆ ತೀವ್ರವಾಗಿರುವ ಕಾರಣ ಅನಗತ್ಯ ಸಂಕಷ್ಟ ಎದುರಾಗು ತ್ತಿದೆ ಎಂದು ವಾಹನ ಚಾಲಕರು ಅಸಮಾಧಾನ ಹೊರಹಾಕಿದ್ದಾರೆ.

ಸಂದೇಶ ಬಂದರೂ
ಕಾರ್ಡ್‌ ಸಿಗುತ್ತಿಲ್ಲ!
ಹೊಸ ವಾಹನ ಖರೀದಿಸಿದ ಕೆಲವರಿಗೆ ಸ್ಮಾರ್ಟ್‌ಕಾರ್ಡ್‌ ಅಂಚೆ ಮೂಲಕ ರವಾನಿಸಲಾಗಿದೆ ಎಂಬ ಸಂದೇಶ ಬರುತ್ತದೆ. ಆದರೆ ತಿಂಗಳು ಕಳೆದರೂ ಸ್ಮಾರ್ಟ್‌ಕಾರ್ಡ್‌ ಕೈ ಸೇರುತ್ತಿಲ್ಲ. ಸಂದೇಶದಲ್ಲಿರುವ ಟ್ರ್ಯಾಕಿಂಗ್‌ ಸಂಖ್ಯೆಯ ಮೂಲಕ ಪರಿಶೀಲನೆ ಅಸಾಧ್ಯ ವಾದ ಮಾತು ಎನ್ನುವುದು ಕೆಲವರ ಆರೋಪ.ಸ್ಮಾರ್ಟ್‌ ಕಾರ್ಡ್‌ ಸಿಗದೆ ಕಚೇರಿ ಅಲೆದಾಡುವ ಪ್ರಮೇಯ ಎದುರಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಚಾರದ ವೇಳೆಯಲ್ಲೂ ಸಮಸ್ಯೆಯಾಗುತ್ತಿದೆ. ಯಾರೂ ಕೂಡ ಸರಿಯಾದ ಮಾಹಿತಿ ಒದಗಿಸುತ್ತಿಲ್ಲ. ಸ್ಮಾರ್ಟ್‌ ಕಾರ್ಡ್‌ಗಳು ಕಚೇರಿಯಲ್ಲಿದ್ದರೂ ವಿತರಿಸುತ್ತಿಲ್ಲ.

ಹೊಸ ಸಂಸ್ಥೆಯೊಂದಿಗೆ ವಿಲೀನದಿಂದ ವಿಳಂಬ!
ರೋಸ್ಮಾಟ ಕಂಪೆನಿಗೆ ಸ್ಮಾರ್ಟ್‌ ಕಾರ್ಡ್‌ಗಳನ್ನು ತಯಾರಿಸುವ ಜವಾಬ್ದಾರಿ ನೀಡಲಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ ದಲ್ಲಿದ್ದ ವಾಹನಗಳ ಮಾಹಿತಿಯನ್ನು ರೋಸ್ಮಾಟ ಕಂಪೆನಿಗೆ ಹಸ್ತಾಂತರ ಮಾಡುವ ವೇಳೆ ವಿಳಂಬವಾಗಿದೆ. ಕಾರ್ಡ್‌ಗಳನ್ನು ಮುದ್ರಿಸಿ ಬಳಿಕ ಅವುಗಳಿಗೆ ಆಯಾ ವಾಹನದ ಮಾಹಿತಿಯನ್ನು ಶೇಖರಿಸುವ ಪ್ರಕ್ರಿಯೆ
(ನಾಲೆಡ್ಜ್ ಮ್ಯಾನೇಜ್ಮೆಂಟ್ ಸಿಸ್ಟಂ)ಗೆ ಕಾಲಾವಕಾಶ ಅಗತ್ಯವಾಗಿದ್ದು, ಕಳೆದ ಕೆಲವು ತಿಂಗಳಲ್ಲಿ ಈ ಪ್ರಕ್ರಿಯೆ ತಡವಾಗಲು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಜಿಲಾಕರ್‌ನಲ್ಲಿದೆ ಮಾಹಿತಿ
ವಾಹನದ ಮಾಹಿತಿ ಡಿಜಿಲಾಕರ್‌ನಲ್ಲಿ ದಾಖಲಾಗಿರುತ್ತದೆ. ಯುವ ಜನತೆ ಬಹುತೇಕ ಡಿಜಿ ಲಾಕರ್‌ ಬಳಸುತ್ತಿರುವ ಕಾರಣ ದಾಖಲೆಗಳನ್ನು ಗಮನಿಸುತ್ತಾರೆ. ಆದರೆ ಹಿರಿಯ ನಾಗರಿಕರಿಗೆ ಹಾಗೂ ಅನೇಕ ವಾಹನ ಸವಾರರಿಗೆ ಡಿಜಿ ಲಾಕರ್‌ ಬಗ್ಗೆ ಮಾಹಿತಿಯ ಕೊರತೆ ಇದ್ದು, ಕಾರ್ಡ್‌ ಬೇಕೆಂದು ದುಂಬಾಲು ಬೀಳುತ್ತಿದ್ದಾರೆ.

Advertisement

ಮಂಗಳೂರು ಆರ್‌ಟಿಒ ವ್ಯಾಪ್ತಿಯಲ್ಲಿ ನೊಂದಣಿಗೊಂಡಿರುವ ಎಲ್ಲ ವಾಹನಗಳ ಸ್ಮಾರ್ಟ್‌ ಕಾರ್ಡ್‌ಗಳನ್ನು ಅಂಚೆ ಮೂಲಕ ಮಾಲಕರಿಗೆ ರವಾನಿಸಲಾಗಿದೆ. ಎಚ್‌ಎಸ್‌ಆರ್‌ಪಿ ಸಂಖ್ಯೆ ಆಗದೇ ಇರುವ ಕೆಲವು ವಾಹನಗಳ ಆರ್‌ಸಿ ಮಾತ್ರವೇ ಬಾಕಿ ಇವೆ.
-ಶ್ರೀಧರ್‌ ಮಲ್ಲಾಡ್‌,
ಉಪ ಸಾರಿಗೆ ಆಯುಕ್ತರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next