Advertisement

ಹಾರೋಹಳ್ಳಿ ತಾಲೂಕು ರಚನೆ ವಿಳಂಬ 

02:50 PM May 28, 2022 | Team Udayavani |

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನಿಂದ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳನ್ನುಬೇರ್ಪಡಿಸಿ, ಹಾರೋಹಳ್ಳಿ ಹೊಸ ತಾಲೂಕು ರಚನೆಗೆ2018ರಲ್ಲಿ ಉದ್ದೇಶಿಸಲಾಗಿತ್ತು. 2019 ಫೆಬ್ರವರಿಯಲ್ಲಿಮಂಡನೆಯಾದ ಬಜೆಟ್‌ನಲ್ಲಿ ಈ ವಿಚಾರ ಉಲ್ಲೇಖವಾಗಿತ್ತು. ಆದರೆ, ಇಲ್ಲಿಯವರೆಗೂ ಹೊಸ ತಾಲೂಕುಇನ್ನು ರಚನೆಯಾಗಿಲ್ಲ. ರಾಜ್ಯದ ಆರ್ಥಿಕ ಇಲಾಖೆ ಅನುಮೋದನೆ ಇನ್ನಷ್ಟೆ ಸಿಗಬೇಕಾಗಿದೆ.

Advertisement

ಕಳೆದ ಜನವರಿಯಲ್ಲಿ ಸರ್ಕಾರ ಹಾರೋಹಳ್ಳಿ ಹೊಸ ತಾಲೂಕು ರಚನೆಗೆ ಸರ್ಕಾರ ಕಂದಾಯ ವೃತ್ತಗಳನ್ನುಗುರುತಿಸಿ ಅಂತಿಮ ಆದೇಶ ಹೊರಡಿಸಿತ್ತು. ಆಮೂಲಕ ಹೊಸ ತಾಲೂಕು ರಚನೆಗೆ ವೇದಿಕೆ ಸಿದ್ಧವಾಗಿದೆ ಅಂತಲೇ ಭಾವಿಸಲಾಗಿತ್ತು. ಆರ್ಥಿಕ ಇಲಾಖೆಯ ಅನುಮೋದನೆ ವಿಳಂಬವಾಗುತ್ತಿರುವ ಕಾರಣ ನೂತನ ತಾಲೂಕು ರಚನೆಯೂ ವಿಳಂಬವಾಗುತ್ತಿದೆ.

ತಾಲೂಕಿನ ಗಡಿ ನಿಶ್ಚಯ: ಹಾರೋಹಳ್ಳಿಯ 11 ವೃತ್ತಗಳ 107 ಗ್ರಾಮ ಮತ್ತು ಮರಳವಾಡಿ ಹೋಬಳಿ 15 ವೃತ್ತಗಳ 145 ಗ್ರಾಮಗಳು ಒಟ್ಟು 26 ಕಂದಾಯ ವೃತ್ತಗಳ 252 ಗ್ರಾಮಗಳನ್ನು ನೂತನ ತಾಲೂಕಿನಲ್ಲಿ ಸೇರ್ಪಡೆಗೆ ಸರ್ಕಾರ ಗುರುತಿಸಿದೆ. ಹಾರೋಹಳ್ಳಿ ತಾಲೂಕಿನ ಗಡಿಯೂ ನಿಶ್ಚಯವಾಗಿದ್ದು, ಪೂರ್ವಕ್ಕೆ ತಮಿಳುನಾಡಿನ ಧರ್ಮಪುರಿ ಜಿಲ್ಲೆ, ಪಶ್ವಿ‌ಮಕ್ಕೆ ರಾಮನಗರ ತಾಲೂಕು, ಉತ್ತರಕ್ಕೆ ಬೆಂಗಳೂರು ದಕ್ಷಿಣ ತಾಲೂಕು ಮತ್ತುಆನೇಕಲ್‌ ತಾಲೂಕುಗಳ ಗಡಿ ಹಾಗೂ ದಕ್ಷಿಣದಲ್ಲಿ ಕನಕಪುರ ತಾಲೂಕಿನ ಗಡಿ ಇರಲಿದೆ.

109 ಕೋಟಿ ವೆಚ್ಚಕ್ಕೆ ಅಂದಾಜು ಪಟ್ಟಿ: ಹಾರೋಹಳ್ಳಿ ತಾಲೂಕು ತಾಲೂಕು ರಚನೆ ಸಂಬಂಧ ಲೋಕೋಪಯೋಗಿ ಇಲಾಖೆ ಸರ್ಕಾರಿ ಇಲಾಖೆಗಳ ಹೊಸ ಕಚೇರಿಗಳ ನಿರ್ಮಾಣಕ್ಕೆ 109 ಕೋಟಿ ರೂ.ಗಳ ಅಂದಾಜು ವೆಚ್ಚದ ಪಟ್ಟಿ ಸಲ್ಲಿಸಿತ್ತು. ಇಲ್ಲಿಯವರೆಗೆ ಒಂದು ನಯಾಪೈಸೆ ಬಿಡುಗಡೆಯಾಗಿಲ್ಲ. ಈಗ ಅಂದಾಜು ವೆಚ್ಚವೂ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ತಾಲೂಕು ಕಚೇರಿ ಸೇರಿದಂತೆ ಒಟ್ಟು 31 ಸರ್ಕಾರಿಕಚೇರಿಗಳು ನೂತನ ತಾಲೂಕಿನ ಆಡಳಿತ ನಡೆಸಲಿವೆ.

ಇನ್ನು ಗುರುತಿಸಿಲ್ಲ ಕಚೇರಿ ಸ್ಥಳ: ಹಾರೋಹಳ್ಳಿ ತಾಲೂಕು ರಚನೆಯಾದರೆ ತಾಲೂಕು ಕಚೇರಿ ಸ್ಥಾಪನೆಗೆ ಸೂಕ್ತ ಸ್ಥಳವನ್ನು ಇನ್ನು ಗುರುತಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸದ್ಯ ಹಾರೋಹಳ್ಳಿ ಪಟ್ಟಣ ಪಂಚಾಯ್ತಿ ಹಿಂಭಾಗದಲ್ಲಿರುವ ಹಾಸ್ಟೆಲ್‌ನಲ್ಲಿ ತತ್ಕಾಲಿಕವಾಗಿ ತಾಲೂಕು ಕಚೇರಿ ಸ್ಥಾಪನೆಗೆ ಚಿಂತನೆ ನಡೆದಿದೆ.

Advertisement

ಸಬ್‌ ರಜಿಸ್ಟ್ರಾರ್‌ ಕಚೇರಿಗೆ ಸಮುದಾಯ ಭವನ ಅಥವಾ ಕಲ್ಯಾಣ ಮಂಟಪವನ್ನು ಬಾಡಿಗೆ ಪಡೆಯುವ ಸಾಧ್ಯತೆ ಇದೆ. ಆರ್‌ಎಚ್‌ಎಸ್‌ ಶಾಲೆಯ ಒಂದು ಕಟ್ಟಡವನ್ನುಸಹ ಸರ್ಕಾರದ ಯಾವುದಾದರು ಇಲಾಖೆಗೆ ಬಾಡಿಗೆಪಡೆಯುವ ಸಾಧ್ಯತೆ ಇದೆ. ಶಿಕ್ಷಣ ಇಲಾಖೆ, ಪಿಡಬ್ಲೂéಡಿ, ಅರಣ್ಯ ಇಲಾಖೆಗಳ ಕಟ್ಟಡ ಹಾರೋಹಳ್ಳಿಯಲ್ಲಿ ಈಗಾಗಲೆ ಇದ್ದು, ಈ ಇಲಾಖೆಗಳ ತಾಲೂಕುಮಟ್ಟದ ಕಚೇರಿಗಳನ್ನು ತತ್ಕಾಲಿಕವಾಗಿ ಇಲ್ಲೆ ಸ್ಥಾಪಿಸಬಹುದಾಗಿದೆ.

ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟರೆ ತಾಲೂಕು ಅಸ್ತಿತ್ವಕ್ಕೆ :

ಹಾರೋಹಳ್ಳಿ ತಾಲೂಕು ರಚನೆಯ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭೆಯಲ್ಲಿ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ನಿಯಮ 351ರಡಿ ಹಾರೋಹಳ್ಳಿ ನೂತನ ತಾಲೂಕು ಘೋಷಣೆಯಾಗಿದ್ದು, ಇದುವರೆಗೂ ಅಂತಿಮ ಅಧಿಸೂಚನೆ ಹೊರಡಿಸಲು ವಿಳಂಬವಾಗುತ್ತಿದೆ ಎಂದು ಸರ್ಕಾರದ ಗಮನ ಸೆಳೆದಿದ್ದರು. ನೂತನ ತಾಲೂಕಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಜಿಲ್ಲಾಡಳಿತ ಒದಗಿಸದೆ ಇರುವುದರಿಂದ ನೂತನ ತಾಲೂಕು ಪ್ರಾರಂಭವಾಗಲು ವಿಳಂಬವಾಗುತ್ತಿದೆ ಎಂದು ದೂರಿದ್ದರು. ಅನಿತಾ ಕುಮಾರಸ್ವಾಮಿಯವರ ಈ ಸೂಚನೆಗೆ ಕಂದಾಯ ಸಚಿವ ಆರ್‌.ಅಶೋಕ್‌ ಉತ್ತರ ನೀಡಿ ದಿನಾಂಕ 31.12.2020ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಂದ ಸಲಹೆ, ಆಕ್ಷೇಪಗಳನ್ನು ಆಹ್ವಾನಿಸಲಾಗಿತ್ತು. ಈ ಅಧಿಸೂಚನೆಗೆ ನಿಗದಿತ ಅವಧಿಯಲ್ಲಿ ಸ್ವೀಕೃತವಾಗಿದ್ದ ಸಲಹೆ, ಆಕ್ಷೇಪಣೆ ಪರಿಶೀಲಿಸಿ, ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸದರಿ ವರದಿ ಪರಿಶೀಲಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದರು. ತದ ನಂತರದ ಬೆಳವಣಿಗೆಯಲ್ಲಿ ಸರ್ಕಾರ ಕಂದಾಯ ವೃತ್ತಗಳನ್ನು ಗುರುತಿಸಿ ಅಂತಿಮ ಆದೇಶ ಹೊರಡಿಸಿದ್ದು, ಹೊಸ ತಾಲೂಕು ರಚನೆಗೆ ವೇದಿಕೆ ಸಿದ್ಧವಾಗಿದೆ. ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟರೆ ನೂತನ ತಾಲೂಕು ಅಸ್ತಿತ್ವಕ್ಕೆ ಬರಲಿದೆ.

-ಬಿ.ವಿ.ಸೂರ್ಯಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next