Advertisement

ಬೈಂದೂರು ಯೋಜನಾ ಪ್ರಾಧಿಕಾರ ರಚನೆ ವಿಳಂಬಕ್ಕೆ ತರಾಟೆ

11:50 PM Mar 03, 2021 | Team Udayavani |

ಕುಂದಾಪುರ/ಕೊಲ್ಲೂರು: ಬೈಂದೂರು ಪಟ್ಟಣ ಪಂಚಾಯತ್‌ಗೆ ಸ್ಥಳೀಯ ಯೋಜನಾ ಪ್ರಾಧಿಕಾರ ರಚನೆಗೆ ಗೆಜೆಟ್‌ ಸುತ್ತೋಲೆ ಹೊರಡಿಸಿ, 6 ತಿಂಗಳುಗಳು ಕಳೆದರೂ ಇನ್ನೂ ಪ್ರಾಧಿಕಾರ ಆರಂಭವಾಗದ ಕುರಿತಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ಕೊಲ್ಲೂರಿನಲ್ಲಿ ನಡೆಯಿತು.

Advertisement

ಕೊಲ್ಲೂರಿನ ಅಮ್ಮ ವಿಶ್ರಾಂತಿ ಗೃಹದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ಹಾಗೂ ಪ.ಪಂ. ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿ ಕುರಿತ ಪ್ರಗತಿ ಪರಿಶೀಲನ ಸಭೆಯಲ್ಲಿ ಸಂಸದರು ಕೆಲವೊಂದು ವಿಚಾರಗಳ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದರು.
ಬೈಂದೂರು ಸ್ಥಳೀಯಾಭಿವೃದ್ಧಿ ಯೋಜನಾ ಪ್ರಾಧಿಕಾರವನ್ನು ರಚಿಸುವಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು. ಎಸಿ ಹಾಗೂ ಡಿಸಿಯವರು ಈ ಬಗ್ಗೆ ಪರಿಶೀಲನೆ ನಡೆಸಸಲು ಸೂಚಿಸಿದರು.

ಬೈಂದೂರು ಪ. ಪಂ. ವ್ಯಾಪ್ತಿಯನ್ನು ಸಿಆರ್‌ಝಡ್‌-2 ವಲಯ ವ್ಯಾಪ್ತಿಗೆ ಸೇರ್ಪಡೆ ಮಾಡಲು ಚೆನ್ನೈಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಿಆರ್‌ಝಡ್‌ ಉಡುಪಿಯ ಪ್ರಾದೇಶಿಕ ನಿರ್ದೇಶಕರು ಮಾಹಿತಿ ನೀಡಿದರು.

ಮೂಲ ಸೌಲಭ್ಯಕ್ಕೆ ಕ್ರಮ
ಶ್ಮಶಾನಕ್ಕೆ ಐದೂವರೆ ಸೆಂಟ್ಸ್‌ ಜಾಗ ಗುರುತಿಸಲಾಗಿದ್ದು, ಶೀಘ್ರ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸೂಚಿಸಿದರು.
ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಎಂಟೂವರೆ ಸೆಂಟ್ಸ್‌ ಜಾಗ ಗುರುತಿಸಿದ್ದು ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಕೊಲ್ಲೂರು ರಿಂಗ್‌ ರೋಡ್‌ ರಚನೆ, ಆಗಬೇಕಾದ ತುರ್ತು ಕೆಲಸಗಳ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಈ ಸಂದರ್ಭ ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ, ರೋಹಿತ್‌ ಕುಮಾರ್‌ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು, ಕುಂದಾಪುರ ಡಿಎಫ್‌ಒ ಆಶೀಶ್‌ ರೆಡ್ಡಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭಾ, ಸಿಆರ್‌ಝಡ್‌ ಉಡುಪಿಯ ಪ್ರಾದೇಶಿಕ ನಿರ್ದೇಶಕ ದಿನೇಶ್‌, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು ಮತ್ತಿತರರಿದ್ದರು.

ಸಾಫ್ಟ್‌ವೇರ್‌ ಸಮಸ್ಯೆ
ಬೈಂದೂರು ಪ.ಪಂ.ವ್ಯಾಪ್ತಿಯ ಬಡವರಿಗೆ ಮನೆ ಕಟ್ಟಲು ಅನುಕೂಲವಾಗುವಂತೆ ಪಿಎಂಎವೈ ಸೌಲಭ್ಯ ಕಲ್ಪಿಸಲು ಹಾಗೂ ಅದಕ್ಕಿರುವ ತಾಂತ್ರಿಕ ತೊಂದರೆ ನಿವಾರಿಸಲು ಸಂಸದರು ಸೂಚಿಸಿದರು. ಇದಕ್ಕುತ್ತರಿಸಿದ ಅಧಿಕಾರಿಗಳು ಬೈಂದೂರು ಪಟ್ಟಣ ಪಂಚಾಯತ್‌ ರಚನೆಯಾಗಿದ್ದರೂ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಲ್ಲಿ ಇನ್ನೂ ನೋಂದಣಿಯಾಗದ್ದರಿಂದ ಯೋಜನೆಯಲ್ಲಿ ಸೇರ್ಪಡೆಗೊಳಿಸಲು ತಾಂತ್ರಿಕ ತೊಂದರೆ ಯಾಗಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಎಸಿಯವರಿಗೆ ಸಂಸದರು ತಿಳಿಸಿದರು.

ರಿಂಗ್‌ ರೋಡ್‌ ಪ್ರಸ್ತಾವನೆ
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕೊಲ್ಲೂರಿನಲ್ಲಿ ರಿಂಗ್‌ ರೋಡ್‌ ನಿರ್ಮಾಣಕ್ಕೆ ತೀರ್ಮಾನಿ ಸಲಾಗಿದೆ. ಇದರ ನಿರ್ಮಾಣ ಕಾಮಗಾರಿ ಹೆದ್ದಾರಿ ಇಲಾಖೆ ಹಾಗೂ ಭೂಸ್ವಾಧೀನ ಕಾರ್ಯ ಲೋಕೋಪಯೋಗಿ ಇಲಾಖೆಯಿಂದ ಆಗಲಿದೆ ಎಂದರು. ಇದಕ್ಕಾಗಿ ಈಗಾಗಲೇ ಕರಡು ಯೋಜನೆ ಸಿದ್ಧಪಡಿಸಲಾಗಿದೆ. 6.5 ಕೋ.ರೂ. ವೆಚ್ಚದ ಪ್ರಸ್ತಾವನೆ ಸರಕಾರಕ್ಕೆ ಕಳುಹಿಸಲಾಗಿದೆ. ಇದರಲ್ಲಿ 3 ಕೋ.ರೂ. ಭೂಸ್ವಾಧೀನಕ್ಕೆ ಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next