Advertisement
ಈ ನಡುವೆ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ನಿಯೋಗ ಬುಧವಾರ ರಾತ್ರಿ ನವದೆಹಲಿಗೆ ತೆರಳಿದ್ದು, ಕುತೂಹಲ ಮೂಡಿಸಿದೆ. ಭಾವಿ ಮುಖ್ಯಮಂತ್ರಿಯೆಂದೇ ಬಿಂಬಿತರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಬುಧವಾರ ಇಡೀ ದಿನ ಪಕ್ಷದ ನಾಯಕರು, ಮುಖಂಡರು, ಬೆಂಬಲಿಗರು, ಅಭಿಮಾನಿಗಳು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಎಲ್ಲರಿಗೂ ಬಿಎಸ್‌ವೈ ಕೃತಜ್ಞತೆ ಸಲ್ಲಿಸಿದರು.
Related Articles
Advertisement
ರಾಜೀನಾಮೆ ಅಂಗೀಕಾರವಾದರೆ ಇಲ್ಲವೇ ಅನರ್ಹತೆಗೊಳಿಸಿದರೆ ಸಮಸ್ಯೆ ತಲೆದೋರುವುದಿಲ್ಲ. ಒಂದೊಮ್ಮೆ ಕೆಲವರ ರಾಜೀನಾಮೆ ತಿರಸ್ಕರಿಸಿದರೆ ಅವರು ಕಾಂಗ್ರೆಸ್, ಜೆಡಿಎಸ್ ಶಾಸಕರಾಗಿಯೇ ಮುಂದುವರಿಯುವುದರಿಂದ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಏರಿಳಿತವಾಗಲಿದೆ. ಹಾಗಾಗಿ ಸ್ಪೀಕರ್ ನಡೆ ಆಧರಿಸಿ ಮುಂದುವರಿಯುವುದು ಸೂಕ್ತ ಎಂದು ಹೇಳಲಾಗಿದೆ.
ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗ ಕೇವಲ 104 ಶಾಸಕ ಬಲವಿದ್ದರೂ ಬಹುಮತ ಸಾಬೀತು ಪಡಿಸಲಾಗದೆ ಬಿಜೆಪಿ ಮುಜುಗರಕ್ಕೆ ಒಳಗಾಗಿತ್ತು. ಈ ಬಾರಿಯೂ ಆ ರೀತಿ ಆಗಬಾರದೆಂಬ ಸಲಹೆಗಳೂ ಕೇಳಿಬಂದಿವೆ. ಮುಖ್ಯವಾಗಿ ಮುಂಬೈನಲ್ಲಿರುವ ಅತೃಪ್ತರ ಪೈಕಿ ಅದರಲ್ಲೂ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿ ಬಳಿಕ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿರುವ ಶಾಸಕರ ಪೈಕಿ ಕೆಲವರು ರಾಜೀನಾಮೆ ಹಿಂಪಡೆದರೆ ವ್ಯತ್ಯಾಸಗಳಾಗಲಿವೆ. ಹೀಗಾಗಿ ತಾಳ್ಮೆ ಅಗತ್ಯವಿದೆ.
ಅಶೋಕ್, ಅಶ್ವತ್ಥ ನಾರಾಯಣ ಮುಂಬೈಗೆ?: ಮೈತ್ರಿ ಸರ್ಕಾರದ ಆಡಳಿತ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕ ಡಾ.ಸಿ.ಎನ್‌ಅಶ್ವತ್ಥ ನಾರಾಯಣ ಬುಧವಾರ ಮುಂಬೈಗೆ ತೆರಳಿದ್ದು, ಅತೃಪ್ತರನ್ನು ಭೇಟಿಯಾಗಿ ಇಲ್ಲಿನ ವಿದ್ಯಮಾನಗಳ ಬಗ್ಗೆ ನೇರವಾಗಿ ಮಾಹಿತಿ ನೀಡಿದ್ದಾರೆ. ಜತೆಗೆ ರಾಜೀನಾಮೆ ಸಂಬಂಧಪಟ್ಟಂತೆ ಮುಂದಿನ ಪ್ರಕ್ರಿಯೆ, ಕಾನೂನು ನೆರವಿನ ಬಗ್ಗೆಯೂ ತಿಳಿಸಿಕೊಡಲಿದ್ದು, ಇನ್ನೂ ಕೆಲ ದಿನ ಒಗ್ಗಟ್ಟಾಗಿಯೇ ವಾಸ್ತವ್ಯ ಮುಂದುವರಿಸುವಂತೆ ಮನವೊಲಿಸಲಿದ್ದಾರೆ ಎನ್ನಲಾಗಿದೆ.
ವರಿಷ್ಠರ ಭೇಟಿಗೆ ನಿಯೋಗ ದೆಹಲಿಗೆ: ಬಿಜೆಪಿಗೆ ಸರ್ಕಾರ ರಚನೆ ಅವಕಾಶ ಒದಗಿ ಬಂದಿದ್ದರೂ ಸಂಸದೀಯ ಮಂಡಳಿ ಸಭೆ ನಡೆಸಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಕುರಿತು ಚರ್ಚೆ ನಡೆದಿಲ್ಲ. ಆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ನಿಯೋಗ ದೆಹಲಿಗೆ ತೆರಳಿದೆ. ವರಿಷ್ಠರನ್ನು ಭೇಟಿಯಾಗಿ ಸರ್ಕಾರ ರಚನೆಗಿರುವ ಅವಕಾಶ, ಕಾನೂನಾತ್ಮಕ ಅಡೆತಡೆ ಹಾಗೂ ನಿವಾರಣೆ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಿದೆ. ಜತೆಗೆ ಸಂಸದೀಯ ಮಂಡಳಿ ಸಭೆಯನ್ನು ತ್ವರಿತವಾಗಿ ನಡೆಸಿ ಮುಂದಿನ ಪ್ರಕ್ರಿಯೆಗಳಿಗೆ ಅನುವು ಮಾಡಿಕೊಡುವಂತೆ ಮನವಿ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಹೇಗೆ?: ಸಂಸದೀಯ ಮಂಡಳಿ ಸೂಚನೆಯಂತೆ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಬಳಿಕ ವೀಕ್ಷಕರ ಸಮ್ಮುಖದಲ್ಲಿ ಸಂಸದೀಯ ಮಂಡಳಿ ತೀರ್ಮಾನದಂತೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಸೂಚಕರು ಮತ್ತು ಅನುಮೋದಕರು ಅನುಮೋದಿಸಿದ ಬಳಿಕ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದವರು ಪತ್ರದೊಂದಿಗೆ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡುವುದು.
ಬಹಳ ವರ್ಷಗಳ ಬಳಿಕ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಬರುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಸಿಗಲಿದೆ. ಜತೆಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅನುಕೂಲವಾಗಲಿದೆ. ವರಿಷ್ಠರ ಸೂಚನೆಗಾಗಿ ಕಾಯುತ್ತಿದ್ದು, ಅವರ ನಿರ್ದೇಶನದಂತೆ ಮುಂದುವರಿಯುತ್ತೇವೆ.-ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿರುವ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ನಾಯಕರು ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದ್ದಾರೆ. ಅವರ ಸೂಚನೆಯಂತೆ ಎಲ್ಲ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಲಾಗುತ್ತದೆ.
-ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿಜೆಪಿ ಸರ್ಕಾರ ರಚನೆಯ ಹೊಸ್ತಿಲಲ್ಲಿರುವುದು ರೈತ ಸಮೂಹಕ್ಕೆ ಸಂತಸದ ಸಂಗತಿ. ಮೈತ್ರಿ ಸರ್ಕಾರಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಬಹುಮತವಿಲ್ಲದ ಎಚ್‌ಡಿಕೆ ಸರ್ಕಾರ ಪತನವಾಗಿದೆ. ಕುಮಾರಸ್ವಾಮಿಯವರು ಬಹುಮತಕ್ಕೆ ಹಾಕಬಾರದಿತ್ತು. ವಿಶ್ವಾಸಮತ ಯಾಚನೆ ಪ್ರಸ್ತಾವವನ್ನು ಮತ ವಿಭಜನೆಗೆ ಹಾಕುವ ಮೂಲಕ ತಮಗಿದ್ದ ಅಲ್ಪಸ್ವಲ್ಪ ಗೌರವವನ್ನು ಕಳೆದುಕೊಂಡಿದ್ದಾರೆ.
-ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ