ಬೆಂಗಳೂರು: ನಾಲ್ಕು ತಿಂಗಳುಗಳಲ್ಲಿ ಯಕೃತ್ (ಲಿವರ್) ಕಸಿ ಘಟಕ ಸ್ಥಾಪಿಸುವುದಾಗಿ ತನಗೆ ನೀಡಿದ್ದ ಮಾತನ್ನು ಈಡೇರಿಸದ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀ ಲಾಗಿ ಬಡವರ ಜೀವದ ಜತೆ ಆಟವಾಡುತ್ತಿ ದ್ದಾರೆ ಎಂಬಂತಿದೆ ಎಂದು ಹೇಳಿದೆ.
ಈ ವಿಚಾರವಾಗಿ ವಕೀಲ ಎಂ.ಎನ್. ಉಮೇಶ್ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯು ಮುಖ್ಯ ನ್ಯಾ| ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎ.ಎಂ. ವಿಜಯ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋಎಂಟರಾಲಜಿ ಮತ್ತು ಯಕೃತ್ ಕಸಿ ಘಟಕವನ್ನು ನಾಲ್ಕು ತಿಂಗಳಲ್ಲಿ ಸ್ಥಾಪಿಸುವುದಾಗಿ 2021ರ ಜನವರಿಯಲ್ಲಿ ಸರಕಾರ ಹೈಕೋರ್ಟ್‌ಗೆ ತಿಳಿಸಿತ್ತು. ಆದರೆ, ಇದುವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ, ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಇದನ್ನೂ ಓದಿ:ಫಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್
ಸರಕಾರಿ ವಕೀಲರು ವಾದ ಮಂಡಿಸಿ, ಕೋವಿಡ್‌ನಿಂದಾಗಿ ಆಸ್ಪತ್ರೆ ಆರಂಭಿಸುವುದು ಸ್ವಲ್ಪ ವಿಳಂಬವಾಗಿದೆ. ಈಗಾಗಲೇ ಒಪಿಡಿ ಸೇವೆಗಳನ್ನು ಆರಂಭಿಸಲಾಗಿದೆ, ಆಪರೇಶನ್ ಥಿಯೇಟರ್ ಒಳಗೊಂಡ ಪೂರ್ಣಪ್ರಮಾಣದ ಆಸ್ಪತ್ರೆ ಸದ್ಯದಲ್ಲೇ ಆರಂಭವಾಗ ಲಿದೆ. ಈಗಾಗಲೇ ಯಂತ್ರೋ ಪಕರಣಗಳನ್ನು ಖರೀದಿಸಲಾಗಿದೆ, ಅವುಗಳನ್ನು ಸ್ಯಾನಿಟೈಸ್ ಮಾಡಲು 2 ತಿಂಗಳು ಬೇಕಾಗಿದೆ. ಬಡವರಿಗೆ ಉಚಿತ ಯಕೃತ್ ಕಸಿಗೆ ಸಿಎಸ್‌ಆರ್ ನೆರವಿನಲ್ಲಿ 20 ಕೋಟಿ ರೂ. ದೇಣಿಗೆ ಸಂಗ್ರಹಿಸಲಾಗಿದೆ ಎಂದು ಹೇಳಿದರು.
ಸರಕಾರದ ಕಾರ್ಯ ವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಯಂತ್ರೋಪಕರಣಗಳನ್ನು ಸ್ಯಾನಿ ಟೈಸ್ ಮಾಡಲು ಎರಡು ತಿಂಗಳು ಬೇಕೇ? ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳ ಜತೆ ಶಾಮೀಲಾಗಿ ವಿಳಂಬ ಮಾಡುತ್ತಿದ್ದಾರೆಯೇ? ಬಡವರ ಜೀವದ ಜೊತೆ ಆಟವಾಡುತ್ತಿದ್ದಾರೆಯೇ? ತಪ್ಪು ಮಾಡಿದ ಅಧಿಕಾರಿಗಳನ್ನು ಜೈಲಿಗೆ ಕಳಿಸಿದರೆ ಗೊತ್ತಾಗುತ್ತದೆ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯರನ್ನು ಖುದ್ದು ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿತು.