Advertisement

ಮುಂದಿನ ವರ್ಷವೂ ಶಾಲಾ ಮಕ್ಕಳಿಗೆ ಸೈಕಲ್‌, ಶೂ ಅನುಮಾನ

10:15 PM Mar 24, 2022 | Team Udayavani |

ಬೆಂಗಳೂರು: ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಯನ್ನು ಪ್ರೋತ್ಸಾಹಿಸುವ ಮತ್ತು ಸಾರಿಗೆ ಸೌಲಭ್ಯ ವಂಚಿತ ಮಕ್ಕಳು ಶಾಲೆಗೆ ಬರಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಿ.ಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ 2006-07ರಲ್ಲಿ ಜಾರಿಗೊಳಿಸಿದ ಶಾಲಾ ಮಕ್ಕಳಿಗೆ ಸೈಕಲ್‌ ವಿತರಿಸುವ ಯೋಜನೆ ಮುಂದಿನ ವರ್ಷವೂ ಪುನಾರಂಭಿಸುವುದು ಅನುಮಾನ ಎಂದು ಹೇಳಲಾಗುತ್ತಿದೆ.

Advertisement

ಕಳೆದ ಎರಡು ವರ್ಷಗಳಿಂದ ಕೊರೊನಾ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಭೌತಿಕ ತರಗತಿಗಳು ನಡೆಯದಿರುವುದು ಮತ್ತು ತಡವಾಗಿ ತರಗತಿಗಳು ಆರಂಭವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಸೈಕಲ್‌ ಮತ್ತು ಶೂ-ಸಾಕ್ಸ್‌ ವಿತರಿಸಿಲ್ಲ. ಈ ಯೋಜನೆ ಮುಂದಿನ ಶೈಕ್ಷಣಿಕ ವರ್ಷ (2022-23)ಕೂಡ ಆರಂಭಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತಿದೆ. ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ, ಶೌಚಾಲಯ, ಕಾಂಪೌಂಡ್‌ ನಿರ್ಮಾಣ ಒಳಗೊಂಡಂತೆ ಮೂಲ ಸೌಕರ್ಯ ಕಲ್ಪಿಸಲು ಇನ್ನಿತರ ಖರ್ಚು ವೆಚ್ಚಗಳನ್ನು ಭರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಶಾಲಾ ಮಕ್ಕಳಿಗೆ ಸೈಕಲ್‌, ಶೂ ಸಿಗಲ್ಲ ಎನ್ನಲಾಗುತ್ತಿದೆ.

ಈ ಯೋಜನೆಗಳನ್ನು ಮುಂದುವರಿಸುವ ಸಂಬಂಧ ಪ್ರಸಕ್ತ ಬಜೆಟ್‌ನಲ್ಲಿ ಕೂಡ ಯಾವುದೇ ಪ್ರಸ್ತಾಪವಾಗಿಲ್ಲ. ಶಾಲೆ ಆರಂಭವಾದ ಬಳಿಕ ಇಲಾಖೆ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುತ್ತದೆ. ಆದರೆ, ಈ ವರೆಗೆ ಯೋಜನೆ ಕುರಿತ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಆದರೆ, ಈ ವರ್ಷ ದೇಶದಲ್ಲಿಯೇ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-2020) ಜಾರಿಗೊಳಿಸುತ್ತಿದೆ. ಇದಕ್ಕಾಗಿ 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡುವುದು ಸೇರಿದಂತೆ ಮೂಲ ಸೌಕರ್ಯ ಹೆಚ್ಚಳಕ್ಕೆ ಸರ್ಕಾರ ಆದ್ಯತೆ ನೀಡಿದೆ.

Advertisement

3 ವರ್ಷದ್ದು:

ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಸೈಕಲ್‌ ವಿತರಣೆ ಮಾಡಿಲ್ಲ. ಒಂದು ವೇಳೆ ಸೈಕಲ್‌ ವಿತರಿಸಲು ಮುಂದಾದರೆ, ಈ ವರ್ಷ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಜೊತೆಗೆ ಈಗ 9 ಮತ್ತು 10ನೇ ತರಗತಿ ಓದುತ್ತಿರುವ ಮಕ್ಕಳಿಗೂ ಸೈಕಲ್‌ ವಿತರಣೆ ಸಂದರ್ಭ ಎದುರಾಗಬಹುದು. ಆಗ ಇಲಾಖೆಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳಲಿದೆ ಎಂಬ ಆತಂಕ ಕೂಡ ಇಲಾಖೆಯಲ್ಲಿದೆ. ಈ ಎಲ್ಲಾ ಕಾರಣಗಳಿಂದ ಯೋಜನೆ ಆರಂಭಿಸದಿರುವುದೇ ಉತ್ತಮ ಎಂಬುದು ಇಲಾಖೆಯ ಚಿಂತನೆಯಾಗಿದೆ.

ಗ್ರಾಮೀಣ ಮಕ್ಕಳಿಗಾಗಿ 2006ರಲ್ಲಿ ಆರಂಭವಾಗಿದ್ದ ಯೋಜನೆ :

ಹೆಣ್ಣುಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳ ಮಾಡುವುದು, ಮನೆಯಿಂದ ದೂರದಲ್ಲಿರುವ ಶಾಲೆಯನ್ನು ತಲುಪಲು ಅನುಕೂಲ ಮಾಡಿಕೊಡುವುದು, ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವ ಜೊತೆಗೆ ಪ್ರಯಾಣ ಅವಧಿಯನ್ನು ಕಡಿತಗೊಳಿಸುವ ಉದ್ದೇಶದಿಂದ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದಲ್ಲಿರುವ ಶಾಲಾ ಮಕ್ಕಳಿಗೆ 2006-07ರಲ್ಲಿ ಸೈಕಲ್‌ ವಿತರಣೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿಯ ಬಿಪಿಎಲ್‌ ಕುಟುಂಬದ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸೈಕಲ್‌ ವಿತರಿಸಲಾಗುತ್ತಿತ್ತು.

ಶಿಕ್ಷಕರ ನೇಮಕಾತಿ, ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸೈಕಲ್‌, ಶೂ-ಸಾಕ್ಸ್‌ ವಿತರಿಸುವ ಸಂಬಂಧ ಇನ್ನಷ್ಟೇ ಚರ್ಚಿಸಬೇಕಿದೆ. ಇಲಾಖೆಯ ಸಾಧಕ-ಬಾಧಕಗಳನ್ನು ನೋಡಿಕೊಂಡು ನಿರ್ಧಾರ ಮಾಡಲಾಗುತ್ತದೆ.– ಬಿ.ಸಿ. ನಾಗೇಶ್‌, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.