Advertisement

ಸಿಇಟಿ ಪ್ರಕ್ರಿಯೆ ವಿಳಂಬ: ಇತರ ಕೋರ್ಸ್‌ಗಳ ಪ್ರವೇಶಕ್ಕೂ ಹೊಡೆತ

11:45 PM Sep 07, 2022 | Team Udayavani |

ಬೆಂಗಳೂರು: ಎಂಜಿನಿಯರಿಂಗ್‌ ಸಹಿತ ವಿವಿಧ ವೃತ್ತಿಪರ ಕೋರ್ಸ್‌ ಗಳ ಪ್ರವೇಶಕ್ಕಾಗಿ ನಡೆಸುವ ಸಿಇಟಿ ಪ್ರವೇಶ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬವು ಸಾಮಾನ್ಯ ಪದವಿ ತರಗತಿಗಳ ಪ್ರವೇಶದ ಮೇಲೂ ಪರಿಣಾಮ ಬೀರಿದೆ.

Advertisement

ವಿವಿಧ ವೃತ್ತಿಪರ ಕೋರ್ಸ್‌ ಗಳಲ್ಲಿ ತಾವು ಇಚ್ಛಿಸಿದ ಕೋರ್ಸ್‌ ಅಥವಾ ಕಾಲೇಜುಗಳಲ್ಲಿ ಪ್ರವೇಶ ದೊರೆಯದಿದ್ದರೆ, ಸಂಬಂಧಪಟ್ಟ ಅಭ್ಯರ್ಥಿಗಳು ಬಿಕಾಂ ಅಥವಾ ಬಿಸ್ಸಿ ಪದವಿ ತರಗತಿಗಳಿಗೆ ಸೇರ್ಪಡೆಯಾಗುತ್ತಾರೆ. ಆದರೆ ಈ ಬಾರಿ ಸೆಪ್ಟಂಬರ್‌ ತಿಂಗಳು ನಡೆಯುತ್ತಿದ್ದರೂ ಇನ್ನೂ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಸಿಇಟಿ ಪ್ರವೇಶ ಪ್ರಕ್ರಿಯೆ ನ್ಯಾಯಾಲಯದಲ್ಲಿದೆ.

1.25 ಲಕ್ಷ ವಿದ್ಯಾರ್ಥಿಗಳ ನೋಂದಣಿ ಕುಸಿತ
ಸಾಮಾನ್ಯವಾಗಿ ಪದವಿ ಕಾಲೇಜುಗಳಿಗೆ ಪ್ರತಿ ವರ್ಷ ಮೊದಲ ಸೆಮಿಸ್ಟರ್‌ ತರಗತಿಗಳಿಗೆ ಕನಿಷ್ಠ 3.5 ಲಕ್ಷ ವಿದ್ಯಾರ್ಥಿಗಳು ದಾಖಲಾಗುತ್ತಾರೆ. ಆದರೆ ಈ ವರ್ಷ (2022-23ನೇ ಸಾಲಿಗೆ )ಇಲ್ಲಿಯವರೆಗೆ 2,43,868 ವಿದ್ಯಾರ್ಥಿಗಳಷ್ಟೇ ನೋಂದಣಿಯಾಗಿದ್ದಾರೆ. ಇದರಲ್ಲಿ ಕಲಾ ವಿಭಾಗಕ್ಕೆ 86,726, ವಾಣಿಜ್ಯಕ್ಕೆ 82,871, ವಿಜ್ಞಾನಕ್ಕೆ 18,654 ಹಾಗೂ ಬಿಬಿಎಗೆ 17,626 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ.

ಆದರೆ 2019-20ರಲ್ಲಿ 3,88,775 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. 2021 -22ರಲ್ಲಿ ಕೊರೊನಾ ವರ್ಷವಾಗಿದ್ದರಿಂದ ದ್ವಿತೀಯ ಪಿಯುಸಿಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿತ್ತು. ಹೀಗಾಗಿ ಶೇ.30ರಷ್ಟು ನೋಂದಣಿ ಹೆಚ್ಚಳವಾಗಿತ್ತು. ಅದನ್ನು ಹೊರತುಪಡಿಸಿ ಸರಾಸರಿ ನೋಂದಣಿಯನ್ನು ಪರಿಗಣಿಸಿದರೆ, ಕನಿಷ್ಠ 1.25 ಲಕ್ಷ ವಿದ್ಯಾರ್ಥಿಗಳ ನೋಂದಣಿ ಕುಸಿತವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಅಲ್ಲಿ ಪ್ರಕ್ರಿಯೆ ಮುಗಿದ ಬಳಿಕ ಹಲವು ವಿದ್ಯಾರ್ಥಿಗಳು ಸಾಮಾನ್ಯ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸೆ.15ರ ವರೆಗೆ ದಾಖಲಾತಿ ಅವಧಿಯನ್ನು ವಿಸ್ತರಿಸಲಾಗಿದೆ ಎನ್ನುತ್ತಾರೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್‌.

Advertisement

ಪಿಯುಸಿ ಪರೀಕ್ಷೆಯು ಮೇ 18ರಂದು ಕೊನೆಯಾಗಿದೆ. ಸಿಬಿಎಸ್‌ಇ ಫ‌ಲಿತಾಂಶ ನೀಡಿಲ್ಲವೆಂಬ ಕಾರಣದಿಂದ ಸಿಇಟಿ ಫ‌ಲಿತಾಂಶ ವಿಳಂಬ ಮಾಡಲಾಯಿತು. ಈಗ ಪ್ರವೇಶ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಶೈಕ್ಷಣಿಕ ವರ್ಷದ ಪ್ರಕ್ರಿಯೆಗಳನ್ನು ಇಷ್ಟು ವಿಳಂಬ ಮಾಡುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಲಿವೆ. ಇದನ್ನು ಸರಕಾರ ಅರ್ಥ ಮಾಡಿಕೊಂಡು ಪ್ರಕ್ರಿಯೆ ಆರಂಭಿಸಬೇಕು.
– ರಂಜಿತ್‌, ಸಿಇಟಿ ಸೀಟು ಆಕಾಂಕ್ಷಿ

ದಾಖಲಾತಿಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಗುರುವಾರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ನ್ಯಾಯಾಲಯದ ತೀರ್ಪಿನ ಅನುಗುಣವಾಗಿ ಮುಂದಿನ ಪ್ರಕ್ರಿಯೆ ನಡೆಯಲಿದೆ.
– ಎಸ್‌. ರಮ್ಯ, ಕಾರ್ಯನಿರ್ವಾಹಕ ನಿರ್ದೇಶಕಿ, ಕೆಇಎ

– ಎನ್‌.ಎಲ್‌.ಶಿವಮಾದು

 

Advertisement

Udayavani is now on Telegram. Click here to join our channel and stay updated with the latest news.

Next