Advertisement

ಹರಾಜು ಕಟ್ಟೆ ನಿರ್ಮಾಣ ವಿಳಂಬ

12:06 PM Jul 15, 2019 | Suhan S |

ಮಾಲೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಿರ್ಮಿಸುತ್ತಿರುವ ಹರಾಜು ಕಟ್ಟೆ ಕಾಮಗಾರಿ ವಿಳಂಬವಾಗುತ್ತಿದ್ದು, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ರೈತರು ಹಾಗೂ ವರ್ತಕರಿಗೆ ಅನುಕೂಲ ಕಲ್ಪಿಸುವಂತೆ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

Advertisement

ಪಟ್ಟಣದ ಮಾಲೂರು-ಬೆಂಗಳೂರು ಮುಖ್ಯರಸ್ತೆಯ ಪಂಪ್‌ಹೌಸ್‌ ಬಳಿ 10.5 ಎಕರೆಯಲ್ಲಿ ನಿರ್ಮಿಸುತ್ತಿರುವ ಎಪಿಎಂಸಿ ಹರಾಜು ಕಟ್ಟೆಯ ಕಟ್ಟಡ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಎಪಿಎಂಸಿ ಸದಸ್ಯರು, ವರ್ತಕರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ಶೀಘ್ರ ಕಾಮಗಾರಿ ಮುಗಿಸಿ: ಎಪಿಎಂಸಿಯಿಂದ 1.20 ಕೋಟಿ ರೂ. ವೆಚ್ಚದಲ್ಲಿ ರೈತರು ಬೆಳೆದ ಹಣ್ಣು, ತರಕಾರಿ ಮಾರಾಟ ಮಾಡಲು ಹರಾಜು ಕಟ್ಟೆ ಕಾಮಗಾರಿ ನಿರ್ಮಿಸಲಾಗುತ್ತಿದೆ. ಆದರೆ, ಕಾಮಗಾರಿಗೆ ಫೆಬ್ರವರಿ ತಿಂಗಳಲ್ಲಿ ಚಾಲನೆ ನೀಡಿದ್ದರೂ ಮಂದಗತಿಯಿಂದ ನಡೆಯುತ್ತಿದೆ. ಇದರಿಂದ ವರ್ತಕರು ಹಾಗೂ ರೈತರಿಗೆ ಅನಾನುಕೂಲವಾಗಿದೆ. ಗುತ್ತಿಗೆದಾರರು 3 ತಿಂಗಳಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ ಶೀಘ್ರ ಹಸ್ತಾಂತರ ಮಾಡಬೇಕು ಎಂದು ಸಭೆಯಲ್ಲಿ ಗುತ್ತಿಗೆದಾರರಿಗೆ ಸೂಚಿಸಿದರು.

ಗುಣಮಟ್ಟಕ್ಕೆ ಆದ್ಯತೆ ನೀಡಿ: ಎಪಿಎಂಸಿ ಇಲಾಖೆ ಅಧಿಕಾರಿಗಳು, ಸದಸ್ಯರು ಕಾಮ ಗಾರಿ ನಡೆಯುತ್ತಿರುವ ಸ್ಥಳದಲ್ಲಿ ಹಾಜರಿದ್ದು, ಗುಣಮಟ್ಟದ ಕಾಮಗಾರಿ ಮಾಡಲು ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.

ಚರಂಡಿ ಕಾಮಗಾರಿ: 2.18 ಲಕ್ಷ ರೂ. ವೆಚ್ಚದಲ್ಲಿ ಕಚೇರಿ, ಸುತ್ತಲು ಕಾಂಪೌಂಡ್‌ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆರ್‌.ಐ.ಡಿ.ಎಫ್‌ ಯೋಜನೆಯಡಿ ಮುಖ್ಯರಸ್ತೆಯಿಂದ ಹರಾಜು ಕಟ್ಟೆಯ ಕೊನೆವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 83 ಲಕ್ಷ ರೂ. ಬಿಡುಗಡೆಯಾಗಿದೆ. ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಹೇಳಿದರು.

Advertisement

ಅನುದಾನ ಕೊಡಿಸುತ್ತೇನೆ: ರೈತ ಭವನ, ಶೌಚಾಲಯ, ಬೀದಿ ದೀಪ, ವಿದ್ಯುತ್‌ ಸಮರ್ಪಕ, 2 ಬದಿ ಹೈಮಾಸ್ಟ್‌ ದೀಪ ಅಳವಡಿಕೆಗೆ ಎಪಿಎಂಸಿ ಆಡಳಿತ ಮಂಡಳಿ ಸಭೆಯಲ್ಲಿ ಕ್ರಿಯಾ ಯೋಜನೆ ರೂಪಿಸಿ ಸಭೆಯಲ್ಲಿ ಅನುಮೋದನೆ ಪಡೆದು ಟೆಂಡರ್‌ ಪ್ರಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಮಾರುಕಟ್ಟೆ ಪ್ರಾಂಗಣದಲ್ಲಿ ಅವಶ್ಯಕತೆ ಇರುವ ರಸ್ತೆಗಳ ಅಭಿವೃದ್ಧಿಗೆ ಎಪಿಎಂಸಿ ಕಾರ್ಯದರ್ಶಿಗಳು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದರೆ ಮತ್ತಷ್ಟು ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದರು.

ಹೊಸ ಅನುಮತಿ ಇಲ್ಲ: ಸಭೆಯಲ್ಲಿ ಹಮಾಲಿಗಳು ವಿಶ್ರಾಂತಿ ಗೃಹ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದ್ದು, ಶ್ರಮಿಕರ ಭವನ ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸುವಂತೆ ಸೂಚಿಸಿದರು. ತರಕಾರಿ ಮತ್ತು ಹಣ್ಣು ವ್ಯಾಪಾರಸ್ಥರು ಹೊಸದಾಗಿ ಪರವಾನಗಿ ನೀಡಿಲ್ಲ. ಹಳೆಯದ್ದನ್ನೇ ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಎಪಿಎಂಸಿಯಿಂದ ನಿರ್ಮಾಣವಾಗುತ್ತಿರುವ ಮಾರುಕಟ್ಟೆ ಪ್ರಾಂಗಣದ ಅಭಿವೃದ್ಧಿ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅಧಿಕಾರಿಗಳು ಎಚ್ಚರ ವಹಿಸಿ ಕಾಮಗಾರಿ ವೀಕ್ಷಿಸಲು ಸೂಚಿಸಿದರು. ಎಪಿಎಂಸಿ ಅಧ್ಯಕ್ಷ ಗೋವಿಂದರಾಜರೆಡ್ಡಿ, ಮಾಜಿ ಅಧ್ಯಕ್ಷ ಕೆ.ಎಚ್.ಕೃಷ್ಣಕುಮಾರ್‌, ಸದಸ್ಯರಾದ ಸಂತೇಹಳ್ಳಿ ಸುರೇಶ್‌, ಚಂದ್ರಶೇಖರ್‌, ಪಾರ್ಥಸಾರಥಿ, ಸಬ್ದಾರ್‌ಬೇಗ್‌, ಪಟ್ಲಪ್ಪ, ರಾಮೇಗೌಡ, ಕಾರ್ಯದರ್ಶಿ ಅಂಜನೇಯಗೌಡ, ಪುರಸಭಾ ಸದಸ್ಯರಾದ ಎ.ರಾಜಪ್ಪ, ಎನ್‌.ಮಂಜುನಾಥ್‌, ವರ್ತಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಆಲುಮಂಜು, ಮುಖಂಡರಾದ ಎಂ.ಜಿ.ಮಧುಸೂದನ್‌, ಡಿ.ಕೆ.ನಾರಾಯಣಸ್ವಾಮಿ, ಮಾದನಹಟ್ಟಿ ರವಿ, ನಾಗಪ್ಪ, ಎಂ.ಸಿ.ರವಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next