Advertisement

ಸರ್ಕಾರಿ ಕೆಲಸಕ್ಕೆ ವಿಳಂಬ, ಲಂಚ ಕೇಳಿದರೆ ದೂರು ಕೊಡಿ

09:32 PM Oct 15, 2019 | Lakshmi GovindaRaju |

ಶಿಡ್ಲಘಟ್ಟ: ಸರ್ಕಾರಿ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಕೊಡಲಿಕ್ಕೆ ವಿನಾಕಾರಣ ವಿಳಂಬ ಮಾಡಿದರೆ, ಹಾಗೂ ಲಂಚ ಕೇಳಿದರೆ ನೇರವಾಗಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಬಹುದು ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ಕೆ.ಎಸ್‌.ವೆಂಕಟೇಶ್‌ನಾಯ್ಡು ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜನೆ ಮಾಡಲಾಗಿದ್ದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದರು.

Advertisement

ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲದೆ ಜನರಿಂದ ಆಯ್ಕೆಯಾಗಿರುವ ಗ್ರಾಪಂನಿಂದ ಹಿಡಿದು ಲೋಕಸಭೆವರೆಗೂ ಜನಪ್ರತಿನಿಧಿಗಳು ಕರ್ತವ್ಯ ಲೋಪವೆಸಗಿದರೆ, ಕೆಲಸ ಮಾಡಿಕೊಡಲು ಹಣ ಕೇಳಿದರೆ ಅವರ ವಿರುದ್ಧವೂ ದೂರು ನೀಡಬಹುದೆಂದರು.

ಮೌಖಿಕವಾಗಿ ದೂರು ಸಲ್ಲಿಸಬೇಡಿ: ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸವಿಲ್ಲದೆ ವಿನಾಕಾರಣ ಯಾರಾದರೂ ಕಾಲಹರಣ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಂದ ಹಣ ಕೀಳುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಕೆಲ ಸಾರ್ವಜನಿಕರು ಮೌಖಿಕವಾಗಿ ದೂರು ಸಲ್ಲಿಸಿದ್ದಾರೆ. ಆದರೆ, ಏನೇ ಇದ್ದರೂ ನೇರವಾಗಿ ಬರವಣಿಗೆಯಲ್ಲಿ ಕೊಡಿ ಎಂದು ಹೇಳಿದರು.

1 ಅರ್ಜಿಗೆ 25 ಸಾವಿರ ರೂ.ವರೆಗೂ ದಂಡ: “ನೀವು ನೀಡುವ ದೂರುಗಳು ನಿಮಗೆ ಸಂಬಂಧಿಸಿದ್ದಾಗಿರಬೇಕು, ಪೂರ್ಣ ಅಂಚೆ ವಿಳಾಸ, ಮೊಬೈಲ್‌ ಸಂಖ್ಯೆ ಕಡ್ಡಾಯವಾಗಿ ನಮೂದಿಸಿ, ಎಫ್ಐಆರ್‌ ಮಾಡುವಂತಹ ದೂರುಗಳನ್ನು ಎಸಿಬಿಗೆ ಕೊಡಿ, ತನಿಖೆಯಾಗಬೇಕಾಗಿರುವ ದೂರುಗಳನ್ನು ಲೋಕಾಯುಕ್ತರಿಗೆ ಕೊಡಿ. ಯಾವುದೇ ದೂರುಗಳನ್ನು ನೀಡುವ ಮುನ್ನಾ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ ನಂತರ ಅರ್ಜಿದಾರರ ಕೆಲಸವಾಗದಿದ್ದ ನಂತರ ಎಸಿಬಿಗೆ ದೂರು ಕೊಡಿ. ಮಾಹಿತಿ ಹಕ್ಕು ಕಾಯಿದೆಯಡಿ ದೂರು ಸಲ್ಲಿಸುವ ಮುನ್ನ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೆ, ನಿಮ್ಮ ಅರ್ಜಿ ವಿಲೇವಾರಿಯಾಗದಿದ್ದರೆ, ಸಂಬಂಧಪಟ್ಟ ಅಧಿಕಾರಿಗೆ ಒಂದು ಅರ್ಜಿಗೆ 25 ಸಾವಿರದವರೆಗೂ ದಂಡ ವಿಧಿಸಲು ಅವಕಾಶವಿದೆ’ ಎಂದರು.

ಜಂಗಮಕೋಟೆ ನಿವಾಸಿ ರಜಿಯಾ ಎಂಬುವವರು, ನಮಗೆ ವಸತಿ ಯೋಜನೆಯಡಿ ಮನೆ ಮಂಜೂರಾಗಿದ್ದರೂ ಉದ್ದೇಶ ಪೂರ್ವಕವಾಗಿ ಹಣ ಬಿಡುಗಡೆ ಮಾಡದೇ ವಿನಾಕಾರಣ ಅಲೆದಾಡಿಸುತ್ತಿದ್ದಾರೆ ಎಂದು ದೂರು ಸಲ್ಲಿಸಿದರು. ಜೆ.ವೆಂಕಟಾಪುರ ನಿವಾಸಿ ಲಕ್ಷ್ಮೀನಾರಾಯಣಪ್ಪ, ನಮ್ಮ ಜಮೀನಿನ ವಿಚಾರದಲ್ಲಿ ನಮಗೆ ಮೋಸಮಾಡಲಾಗಿದೆ. ಈ ಬಗ್ಗೆ ಪೊಲೀಸ್‌ ಠಾಣೆಗೂ ದೂರು ಕೊಟ್ಟಿದ್ದೇನೆ. ತನಗೆ ನ್ಯಾಯಕೊಡಿ ಎಂದು ಮನವಿ ಸಲ್ಲಿಸಿದರು.

Advertisement

ವೈದ್ಯರ ಕೊರತೆ ನೀಗಿಸಿ: ಮುಸ್ಲಿಂ ಸಮಾಜದವರಿಗೆ ದರ್ವೇಶ್‌ ಪ್ರಮಾಣಪತ್ರ ನೀಡಲು ತಾಲೂಕು ಕಚೇರಿಯಲ್ಲಿ ಅವಕಾಶ ಕಲ್ಪಿಸುತ್ತಿಲ್ಲವೆಂದು ಮೊಹಮದ್‌ ನಿಜಾಮುದ್ದೀನ್‌ ದೂರು ಸಲ್ಲಿಸಿದರು. ಯೂನಿಟಿ ಸಿಲಸಿಲಾ ಫೌಂಡೇಶನ್‌ ಅಕ್ರಮ್‌ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ನೀಗಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ತಹಶೀಲ್ದಾರ್‌ ಎಂ.ದಯಾನಂದ್‌, ತಾಲೂಕು ಆರೋಗ್ಯ ಅಧಿಕಾರಿ ವೆಂಕಟೇಶ್‌ಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next