Advertisement

ಮೀನುಗಾರಿಕೆಗೆ ಈ ವರ್ಷವೂ ಆರಂಭದಲ್ಲೇ ಅಡ್ಡಿ : ಕಡಲಿಗಿಳಿಯದೆ ದಡದಲ್ಲೇ ಉಳಿದ ಬೋಟುಗಳು

09:30 AM Aug 08, 2022 | Team Udayavani |

ಮಲ್ಪೆ : ಮಳೆ, ಗಾಳಿಯಿಂದಾಗಿ ಸಮುದ್ರ ಪ್ರಕ್ಷುಬ್ಧವಾಗಿದ್ದು, ಯಾಂತ್ರಿಕ ಮೀನುಗಾರಿಕೆ ಆರಂಭದ ದಿನದಲ್ಲೇ ಅಡಚಣೆ ಉಂಟಾಗಿದೆ. 61 ದಿನಗಳ ರಜೆಯ ಬಳಿಕ ಬಹು ನಿರೀಕ್ಷೆಯೊಂದಿಗೆ ಆ. 1ರಿಂದ ಕಡಲಿಗಿಳಿಯಬೇಕಿದ್ದ ಮೀನುಗಾರರಿಗೆ ನಿರಾಶೆಯಾಗಿದೆ.

Advertisement

ದೋಣಿಗಳನ್ನು ಕಡಲಿಗೆ ಇಳಿಸುವುದು ವಿಳಂಬವಾಗುತ್ತಿರುವುದರಿಂದ ಮಂಜುಗಡ್ಡೆ ವ್ಯವಹಾರ, ಮೀನು ಸಾಗಾಟ ವ್ಯವಸ್ಥೆ, ಮಾರಾಟಗಾರರು ಸೇರಿದಂತೆ ಮೀನುಗಾರಿಕೆಗೆ ಅವಲಂಬಿತ ಕ್ಷೇತ್ರಗಳೆಲ್ಲವೂ ಹಿನ್ನೆಡೆ ಕಂಡಿವೆ.

ಕಳೆದ ಋತುವಿನಲ್ಲಿ ಮೀನಿನ ಕ್ಷಾಮದ ಜತೆಗೆ ಚಂಡಮಾರುತದಿಂದಾಗಿ ಪದೇಪದೆ ಸಮುದ್ರ ಪ್ರಕ್ಷುಬ್ಧವಾಗಿದ್ದು ಮೀನುಗಾರರು ಸಂಕಷ್ಟ ಎದುರಿಸಿದ್ದರು. ಈ ಋತುವಿನ ಆರಂಭವೂ ಅದೇ ರೀತಿ ಆಗಿರುವುದು ಅವರನ್ನು ಆತಂಕಕ್ಕೆ ಈಡು ಮಾಡಿದೆ.

ದೋಣಿಗಳೆಷ್ಟು?
ಮಂಗಳೂರು ಮೀನುಗಾರಿಕೆ ದಕ್ಕೆಯಲ್ಲಿ ಪರ್ಸಿನ್‌ ಹಾಗೂ ಟ್ರಾಲ್‌ ಸೇರಿ ಒಟ್ಟು 1,400 ಬೋಟುಗಳು ಹಾಗೂ ಮಲ್ಪೆ ಹಾಗೂ ಗಂಗೊಳ್ಳಿ ಸೇರಿ ಟ್ರಾಲ್‌, ಪರ್ಸಿನ್‌ ಸೇರಿ ಸುಮಾರು 2,166 ಬೋಟುಗಳು ಸಮುದ್ರ ಮೀನುಗಾರಿಕೆ ನಡೆಸುತ್ತವೆ. ಬಂದರಿನಿಂದ ಎಲ್ಲ ಬೋಟ್‌ಗಳೂ ಏಕಕಾಲಕ್ಕೆ ಕಡಲಿಗಿಳಿಯಲು ಅವಕಾಶ ಇಲ್ಲದ ಕಾರಣ ಆರಂಭದಲ್ಲಿ ಹೊರಡುವ ಆಳಸಮುದ್ರ ಬೋಟುಗಳು ಮಂಜುಗಡ್ಡೆ ಮತ್ತು ಡೀಸೆಲನ್ನು ಈಗಾಗಲೇ ತುಂಬಿಸಿಕೊಂಡು ಸಿದ್ಧವಾಗಿವೆ.

ಹೋದ ದೋಣಿಗಳೂ ಬರಿಗೈಯಲ್ಲಿ ವಾಪಸ್‌
ಮಂಗಳೂರು ಬಂದರಿನಲ್ಲಿ ಹೊರರಾಜ್ಯದ ಕಾರ್ಮಿಕರು ದುಡಿಯುವ ಬೋಟುಗಳು ಈಗಾಗಲೇ ಮೀನುಗಾರಿಕೆಗೆ ತೆರಳಿದ್ದರೂ ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ನಡೆಸಲಾರದೆ ವಾಪಸಾಗಿವೆ ಎನ್ನಲಾಗಿದೆ.

Advertisement

ಆ. 11, 12ರಂದು ಸಮುದ್ರಪೂಜೆ
ಮಂಗಳೂರಿನ ಮೀನುಗಾರರು ಆ. 11ರಂದು ತಣ್ಣೀರುಬಾವಿ ಬೆಂಗ್ರೆಯಲ್ಲಿ ಸಮುದ್ರಪೂಜೆ ನೆರವೇರಿಸುವರು ಎಂದು ಪರ್ಸಿನ್‌ ಮೀನುಗಾರರ ಸಂಘದ ಅಧ್ಯಕ್ಷ ಶಶಿಕುಮಾರ್‌ ಬೆಂಗ್ರೆ ತಿಳಿಸಿದ್ದಾರೆ.

ಮಲ್ಪೆ ಮೀನುಗಾರ ಸಂಘದ ವತಿಯಿಂದ ಆ. 12ರಂದು ಬೆಳಗ್ಗೆ 9ಕ್ಕೆ ವಡಭಾಂಡೇಶ್ವರದಲ್ಲಿ ಸಮುದ್ರಪೂಜೆ ನಡೆಯಲಿದೆ. ಮೊದಲು ಬಲರಾಮ ದೇವರಿಗೆ ಮತ್ತು ಬೊಬ್ಬರ್ಯನಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಯಲ್ಲಿ ಕಡಲತೀರಕ್ಕೆ ತೆರಳಿ ಗಂಗಾಮಾತೆಗೆ ಪೂಜೆ ಮತ್ತು ಸಮುದ್ರರಾಜನಿಗೆ ಪುಷ್ಪ – ಕ್ಷೀರವನ್ನು ಸಮರ್ಪಿಸಿ ಯಾವುದೇ ಅವಘಡಗಳು ಸಂಭವಿಸದೇ ಹೇರಳ ಮತ್ಸéಸಂಪತ್ತು ಲಭಿಸುವಂತಾಗಲಿ ಎಂದು ಪ್ರಾರ್ಥಿಸಲಾಗುವುದು ಎಂದು ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ತಿಳಿಸಿದ್ದಾರೆ.

ಆ. 9ರ ವರೆಗೆ ಎಚ್ಚರಿಕೆ
ಆ. 9ರ ವರೆಗೆ ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪದ ಕರಾವಳಿಯಲ್ಲಿ ಗಾಳಿ, ಸಮುದ್ರದ ನೀರಿನ ಒತ್ತಡ ಹೆಚ್ಚಾಗಿರಲಿದ್ದು, ಅಲ್ಲಿಯವರೆಗೆ ಯಾವುದೇ ಬೋಟುಗಳು ಕಡಲಿಗಿಳಿಯುವುದು ಸೂಕ್ತವಲ್ಲ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
– ಗಣೇಶ್‌ ಕೆ., ಜಂಟಿ ನಿರ್ದೇಶಕರು ಮೀನುಗಾರಿಕೆ ಇಲಾಖೆ

ಗಾಳಿ-ಮಳೆಯಿಂದಾಗಿ ಸಮುದ್ರದ ನೀರಿನ ಒತ್ತಡ ಹೆಚ್ಚಾಗಿರುವುದರಿಂದ ಮಲ್ಪೆ ಬಂದರಿನಿಂದ ಯಾವುದೇ ವರ್ಗದ ಬೋಟುಗಳು ಸಮುದ್ರಕ್ಕೆ ಇಳಿದಿಲ್ಲ. ಸಮುದ್ರ ಸಹಜ ಸ್ಥಿತಿಗೆ ಬಂದ ಕೂಡಲೇ ಇಲ್ಲವೆ ಸಮುದ್ರಪೂಜೆಯ ಆನಂತರ ಪೂರ್ಣ ಪ್ರಮಾಣದ ಬೋಟುಗಳು ತೆರಳುವ ಸಾಧ್ಯತೆ ಇದೆ.
– ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next