ಪಿರಿಯಾಪಟ್ಟಣ: ರಾಷ್ಟ್ರಕವಿ ಕುವೆಂಪು ಮಾನಸ ಪುತ್ರರೆಂದೇ ಕರೆಯಲ್ಪಡುವ ದೇಜಗೌ ಕನ್ನಡಕ್ಕೆ ಎಲ್ಲೆ ಧಕ್ಕೆ ಉಂಟಾದರೂ ಹಾಜರಾಗುತ್ತಿದ್ದುದು ಅವರ ಅಪ್ರತಿಮ ಕನ್ನಡ ಪ್ರೇಮ ತೋರಿಸುತ್ತದೆ ಎಂದು ಪಿರಿಯಾಪಟ್ಟಣ ಯಜಮಾನ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಂಜುಡಸ್ವಾಮಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ದೇಜಗೌ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಏಳು ದಶಕಗಳ ಕಾಲ ವಿದ್ವತ್ತು, ಆಡಳಿತ ಹಾಗೂ ಚಳವಳಿಗಳೆಂಬ ಮೂರು ನೆಲೆಗಳಲ್ಲಿ ಮಾಡಿರುವ ಕೆಲಸಗಳು ವಿಶ್ವಮಾನ್ಯವಾಗಿವೆ ಎಂದರು. ಕಸಾಪ ತಾಲೂಕು ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿ, 103 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಕಸಾಪ ವತಿಯಿಂದ “ಶಾಲೆಯೆಡೆಗೆ ಪರಿಷತ್ತಿನ ನಡೆಗೆ’ ಧ್ಯೇಯ ವಾಕ್ಯದಡಿ ಕನ್ನಡ ಕೃತಿ, ಸಾಹಿತಿಗಳ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಜಾನಪದ ಗ್ರಂಥ ಸಂಪಾದನೆ, ಸಾಹಿತ್ಯ ವಿಮರ್ಶೆ, ಜೀವನ ಚರಿತ್ರೆ, ಪ್ರವಾಸ ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ವ್ಯಾಪಕ ಕೆಲಸ ಮಾಡಿರುವ ದೇಜಗೌ 400ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆಂದರು. ಕಾರ್ಯಕ್ರಮದಲ್ಲಿ ಸಾಹಿತಿ ಅಂಬಲಾರೆ ಬಸವೇಗೌಡ, ಪ್ರಾಂಶುಪಾಲ ಕೆ.ಕೆ.ಅನಿತ್,
ಕಸಾಪ ಹೋಬಳಿ ಘಟಕದ ಅಧ್ಯಕ್ಷ ಆಲನಹಳ್ಳಿ ಕೆಂಪರಾಜು, ಕಾರ್ಯದರ್ಶಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಅಂದಾನಯ್ಯ, ಗೊರಳ್ಳಿ ಕ.ಸಾ.ಪ ಘಟಕದ ಆಧ್ಯಕ್ಷ ವಾಸುದೇವ್, ಉಪನ್ಯಾಸಕರಾದ ಜಯಣ್ಣ. ಈರಾಜು. ಲೋಕೇಶ್,ದಿವ್ಯಾ, ಎಸ್‌ಎಂಎಸ್ ಸಂಸ್ಥೆ ಮುಖ್ಯ ಶಿಕ್ಷಕ ಎಸ್ ಆರ್ ವೆಂಕಟೇಶ್ ಇತರರಿದ್ದರು.