ನನ್ನ ಫ್ರೆಂಡ್ಸ್, ಟೀಚರ್, ಫ್ಯಾಮಿಲಿ ಮಂದಿ ಒಳ್ಳೆ ಸಲಹೆ ಕೊಡ್ತಾರಾ ಅಂತ ನೋಡಿದ್ರೆ, ಅಬ್ಟಾ… ಅವರ ಸಲಹೆ ಕೇಳಿ ನನಗಿದ್ದ ಗೊಂದಲ ಇನ್ನಷ್ಟು ಹೆಚ್ಚಿತು.
“ನೀನು ದೊಡ್ಡವಳಾದ ಮೇಲೆ ಏನಾಗ್ತಿಯಾ? ಡಾಕ್ಟರ್ರಾ, ಇಂಜಿನಿಯರ್ರಾ?’ ಇಂತಹ ಪ್ರಶ್ನೆಗಳು ಹಿರಿಯರು ಮಕ್ಕಳಿಗೆ ಕೇಳುತ್ತಿದ್ದುದು ಸಾಮಾನ್ಯ. ಜೀವನದಲ್ಲಿ ಮುಂದೆ ಏನಾಗುತ್ತೇನೋ ಎಂಬ ಅರಿವಿಲ್ಲದೆ, ಆತ್ಮವಿಶ್ವಾಸ ಹಾಗೂ ಹಿರಿಯರ ಪ್ರೋತ್ಸಾಹದಿಂದ ನಾನು “ಡಾಕ್ಟರ್’, “ಇಂಜಿನಿಯರ್’, “ಟೀಚರ್’ ಎಂದು ಎಲ್ಲರೂ ತಮ್ಮ ಬಾಲ್ಯದಲ್ಲಿ ಉತ್ತರಿಸಿದ್ದುಂಟು. ಕ್ಲಾಸಿನಲ್ಲಿ ಸ್ವಲ್ಪ ಚೂಟಿ, ಜೋರಿನ ಹುಡುಗಿ ಇದ್ದರೆ, “ನೀನು ಟೀಚರ್ ಆದರೆ ನಿನ್ನ ವಿದ್ಯಾರ್ಥಿಗಳು ಶಾಲೆಯಿಂದ ಓಡಿ ಹೋಗುತ್ತಾರಷ್ಟೇ’ ಎಂದು ತಮಾಷೆ ಕೂಡ ಮಾಡಿದ್ದುಂಟು. ಇನ್ನೂ ಕೆಲವರು ಯಾವಾಗಲೂ ಪುಸ್ತಕವನ್ನೇ ಓದುತ್ತಿದ್ದರೆ, “ನೀನು ಡಾಕ್ಟರ್ ಆಗ್ತಿಯಾ. ನೀನು ಪುಸ್ತಕದ ಬದನೆಕಾಯಿ’ ಎಂದು ಟೀಕಿಸಿದ್ದೂ ಉಂಟು. ಕೆಲವರಿಗೆ ತಾನು ಇಂತಹದ್ದೇ ಸಾಧನೆ ಮಾಡಬೇಕು ಎಂದು ಇದ್ದರೆ ಇನ್ನೂ ಕೆಲವರಿಗೆ ದೇವರು ತೋರಿಸಿದ ದಾರಿಯಲ್ಲಿ ಮುಂದುವರಿಯುತ್ತೇವೆ ಎಂದು ಸುಮ್ಮನಾಗುತ್ತಾರೆ.
ಅದರಲ್ಲೂ ನಮಗೆ ಜಾಸ್ತಿಯಾಗಿ ಗೊಂದಲ ಹುಟ್ಟೋದೇ ಪದವಿ ಶಿಕ್ಷಣದ ನಂತರ. ಈಗ ಡಿಗ್ರಿ ಮಾಡಿದ್ರೆ ಏನೂ ಪ್ರಯೋಜನ ಇಲ್ಲ, ಪಿ.ಜಿ.ನೂ ಮಾಡಬೇಕು ಅಂತ ಟೀಚರ್, ಫ್ರೆಂಡ್ಸ್‌ಗಳಿಂದ ಸಲಹೆ. ಕೆಲವರು ಪಿ.ಜಿ. ಮಾಡಿ ಎರಡು ವರ್ಷ ಎಂಜಾಯ್ ಮಾಡಿ ಕೆಲಸಕ್ಕೆ ಹೋಗ್ತಿನಿ ಅಂದ್ರೆ ಇನ್ನೂ ಕೆಲವರು ಸಾಕಪ್ಪಓದಿದ್ದು, ಇನ್ನೂ ಯಾರು ಓದೋದು ಅಂತ ಯಾವುದಾದ್ರು ಕೆಲಸ ನೋಡಿಕೊಳ್ತಾರೆ. ಹೀಗೆ ನನಗೂ ಕೂಡ ಪದವಿಯ ನಂತರ ಮುಂದೇನು ಎಂಬ ಗೊಂದಲ ಸೃಷ್ಟಿಯಾಯಿತು.
ನನ್ನ ಫ್ರೆಂಡ್ಸ್, ಟೀಚರ್, ಫ್ಯಾಮಿಲಿ ಮಂದಿ ಒಳ್ಳೆ ಸಲಹೆ ಕೊಡ್ತಾರಾ ಅಂತ ನೋಡಿದ್ರೆ, ಅಬ್ಟಾ… ಅವರ ಸಲಹೆ ಕೇಳಿ ನನಗಿದ್ದ ಗೊಂದಲ ಇನ್ನಷ್ಟು ಹೆಚ್ಚಿತು. ಇನ್ನೂ ಯಾರ ಮಾತು ಕೇಳಲ್ಲ ಅಂತ ಪತ್ರಿಕೋದ್ಯಮದ ಕಡೆ ಗಮನ ಹರಿಸಿದರೆ, “ಅದೆಲ್ಲಾ ಹುಡುಗಿಯರಿಗೆ ಹೇಳಿದ್ದಲ್ಲ. ತುಂಬಾ ರಿಸ್ಕ್ ತಗೋಳ್ಬೇಕು. ನಿನ್ನಿಂದ ಅದೆಲ್ಲಾ ಆಗೋಲ್ಲ’ ಅಂತ ಅಪ್ಪ, “ಮಗಳೇ ನೀನು ಸ್ವಲ್ಪ$ಡಿಫೆರೆಂಟ್ ಆಗಿರು’ ಅಂತ ಅಮ್ಮ. “ಯಾವುದೂ ಬೇಡಮ್ಮ, ಮದುವೆ ಆಗಿಬಿಡು’ ಅಂತ ಅಣ್ಣನ ಸಲಹೆ! ಹೀಗೆ ಪರ- ವಿರೋಧದ ನಡುವೆ, ಮುಂದೇನು ಎಂಬ ಗೊಂದಲದ ನಡುವೆ ಸ್ನಾತಕೋತ್ತರ ಶಿಕ್ಷಣಕ್ಕೆ ಕಾಲಿಡಲು ಮುಂದಾದೆ.
ಹೀಗೆ ಇಂದು ಎಷ್ಟು ಪದವಿ ಪಡೆದರೂ ಕೂಡ ಸಾಕಾಗುವುದಿಲ್ಲ. ಶಿಕ್ಷಣ ಎಂಬುದು ವ್ಯಕ್ತಿಯೊಬ್ಬರಿಗೂ ಮುಖ್ಯ. ಪ್ರತಿಯೊಬ್ಬರ ಜೀವನದಲ್ಲೂ ಗೊಂದಲಗಳು ಇರೋದು ಸಾಮಾನ್ಯ. ಆದನ್ನು ಲೆಕ್ಕಿಸದೇ ಮುಂದುವರೆಯುವುದೇ ಜೀವನ.
ಅನ್ವಯ ಮೂಡಬಿದಿರೆ