Advertisement

ಪದವಿ ಕಾಲೇಜು ಪುನರಾರಂಭ ಮುಂದೂಡಲು ಆಗ್ರಹ

10:59 AM Dec 01, 2018 | Team Udayavani |

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಅಧಿಧೀನಕ್ಕೊಳಪಟ್ಟ ಸರಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಕಾಲೇಜುಗಳ ಪುನರಾರಂಭದ ದಿನಾಂಕ ಮುಂದೂಡಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘ ಕುಲಸಚಿವರಲ್ಲಿ ಆಗ್ರಹಿಸಿದೆ.

Advertisement

ಗುಲಬರ್ಗಾ ವಿಶ್ವವಿದ್ಯಾಲಯವು ಪ್ರಸ್ತುತ ಅನುಸರಿಸುತ್ತಿರುವ ಹಳೆ ಹಾಗೂ ಅವೈಜ್ಞಾನಿಕ ಶೈಕ್ಷಣಿಕ ವೇಳಾಪಟ್ಟಿಗೆ ಅಧ್ಯಾಪಕರ ಸಂಘ ತೀವ್ರವಾಗಿ ವಿರೋಧಿಸುತ್ತದೆ. 2018ನೇ ಶೈಕ್ಷಣಿಕ ಸಾಲಿನ ಬಿಎ, ಬಿ.ಕಾಂ,ಬಿ.ಎಸ್ಸಿ, ಬಿಸಿಎ ಮತ್ತು ಬಿಬಿಎಂ 1ನೇ, 3ನೇ ಮತ್ತು 5ನೇ ಸೆಮೆಸ್ಟರ್‌ಗಳ ಪದವಿ ಪರೀಕ್ಷೆಗಳು ನ.9 ರಿಂದ ಆರಂಭವಾಗಿ ಡಿ.9ರ ವರೆಗೆ ನಡೆಯಲಿವೆ. ಆದರೆ ಕಾಲೇಜುಗಳ ಪುನರಾರಂಭದ ದಿನಾಂಕವನ್ನು ಮಾತ್ರ ಡಿ.1 ಎಂದು ನಿಗದಿ ಮಾಡಿ ವಿವಿಯು ಆದೇಶ ಹೊರಡಿಸಿರುವುದು ಅಧ್ಯಾಪಕರಲ್ಲಿ ತೀವ್ರ ಗೊಂದಲ ಉಂಟು ಮಾಡಿದೆ.

ಈಗಾಗಲೇ ಹೊರಡಿಸಿರುವ ಶೈಕ್ಷಣಿಕ ವೇಳಾಪಟ್ಟಿಯನ್ನು ತಕ್ಷಣವೇ ವಾಪಸ್‌ ಪಡೆದು ಹೊಸ ಪರಿಷ್ಕೃತ ಶೈಕ್ಷಣಿಕ ವೇಳಾ ಪಟ್ಟಿ ಪ್ರಕಟಿಸಬೇಕೆಂದು ಅಧ್ಯಾಪಕರ ಸಂಘವು ಒತ್ತಾಯಿಸಿದೆ. ಹಳೆ ಶೈಕ್ಷಣಿಕ ವೇಳಾಪಟ್ಟಿ ಅವೈಜ್ಞಾನಿಕವಷ್ಟೇ ಅಲ್ಲ, ಅಪ್ರಸ್ತುತವಾಗಿದೆ. ಹಳೆ ವೇಳಾಪಟ್ಟಿಯಿಂದ ಅಧ್ಯಾಪಕರಿಗೆ ಶೈಕ್ಷಣಿಕವಾಗಿ ಅನಾನುಕೂಲವಾಗಿದೆ.

ಡಿ.1 ರಂದು ತರಗತಿಗಳು ಪುನರ್‌ ಪ್ರಾರಂಭವಾಗಲಿವೆ ಎಂದು ವಿಶ್ವವಿದ್ಯಾಲಯ ವೆಬ್‌ಸೈಟ್‌ನಲ್ಲಿ ದಿನಾಂಕ ಪ್ರಕಟಿಸಿದೆ. ಆದರೆ ಒಬ್ಬ ಅಧ್ಯಾಪಕರು ಪರೀಕ್ಷೆ ಹಾಗೂ ಬೋಧನಾ ಕಾರ್ಯ ಎರಡು ಒಟ್ಟಿಗೆ ನಿಭಾಯಿಸುವುದು ಹೇಗೆ ಸಾಧ್ಯ ಎನ್ನುವ ಗೊಂದಲದಲ್ಲಿದ್ದಾರೆ. ಈಗಾಗಲೇ ರಾಜ್ಯದ ವಿಶ್ವವಿದ್ಯಾಲಯಗಲ್ಲಿ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ ಪದ್ಧತಿ ಜಾರಿಯಲ್ಲಿರುವುದರಿಂದ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ತಮ್ಮ ಪದವಿ ಪರೀಕ್ಷೆಗಳ ನಿಮಿತ್ತ ಕಾಲೇಜುಗಳ ಆರಂಭದ ದಿನಾಂಕವನ್ನು ಮುಂದೂಡಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿ ಆದೇಶ ಹೊರಡಿಸಿವೆ.ಆದರೆ ಗುಲಬರ್ಗಾ ವಿಶ್ವವಿದ್ಯಾಲಯವು ಮಾತ್ರ ಹಳೆ ಶೈಕ್ಷಣಿಕ ವೇಳಾಪಟ್ಟಿಯನ್ನೇ ಮುಂದುವರಿಸುವುದು ಸರಿಯಾದ ಕ್ರಮವಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಗುಲಬರ್ಗಾ ವಿಶ್ವವಿದ್ಯಾಲಯ ಕುಲಸಚಿವ ಪ್ರೊ| ಸಿ.ಸೋಮಶೇಖರ ಅವರಿಗೆ ಸಂಘದ ಅಧ್ಯಕ್ಷ ಡಾ| ಶರಣಪ್ಪ ಸೈದಾಪುರ ನೇತೃತ್ವದಲ್ಲಿ ಸಂಘದ ಕಾರ್ಯದರ್ಶಿ ಡಾ| ಶ್ರೀಮಂತ ಹೋಳ್ಕರ್‌, ಡಾ| ಮಲ್ಲಿಕಾರ್ಜುನ ಶೆಟ್ಟಿ, ತ್ರಿವಿಕ್ರಮ ಯಕ್ಕಂಚಿ, ಡಾ| ದೇವಿದಾಸ ರಾಠೊಡ, ಡಾ| ಶಿವಶರಣಪ್ಪ ಮೋತಕಪಲ್ಲಿ , ಡಾ| ವಿಜಯಕುಮಾರ ಗೋಪಾಲೆ, ನಾಗರೆಡ್ಡಿ ಪೋಶೆಟ್ಟಿ, ಡಾ| ವೆಂಕಟೇಶ ಜಾಧವ, ಮಹಮ್ಮದ ಯೂನುಸ್‌, ಮಲ್ಲಪ್ಪ ಮಾನೆಗರ ಇನ್ನಿತರರು ಈ ಸಂದರ್ಭದಲ್ಲಿದ್ದರು. ಕುಲಸಚಿವರು ಮನವಿ ಸ್ವೀಕರಿಸಿ ಕಾಲೇಜುಗಳ ಪ್ರಾರಂಭದ ದಿನಾಂಕವನ್ನು ತಕ್ಷಣವೇ ಮುಂದೂಡಲು ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ನಿಯೋಗಕ್ಕೆ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next