Advertisement
ಕೈ ಕೆಸರಾದರೆ ಬಾಯಿ ಮೊಸರು. ರೈತ ಗದ್ದೆಯಲ್ಲೋ, ತೋಟದಲ್ಲೋ ಸೆನೆಕೆ, ಪಿಕಾಸಿ ಹಿಡಿದು ಕೈ ಕೆಸರು ಮಾಡಿಕೊಂಡರೆ ಬದುಕಿನ ಬಂಡಿ ನಡೆಯುವುದು. ಇವತ್ತು ಈ ರೀತಿ ಕೈ ಕೆಸರು ಮಾಡಿಕೊಳ್ಳುವುದೂ ಕೂಡ ಪದವಿಯಾಗಿದೆ. ಹೀಗಾಗಿ, ಕೃಷಿ ಮಾಡುವುದು ಅಕಾಡೆಮಿಕ್. ಇದು ಹೇಗೆ ಸಾಧ್ಯ? ಅನ್ನಬೇಡಿ. ಕೃಷಿ ಪದವಿಗಳಲ್ಲಿ ಥಿಯರಿ ಇದ್ದಂತೆ ಪ್ರಾಕ್ಟಿಕಲ್ ಕೂಡ ಇದೆ. ಇವತ್ತು, ಸಾಂಪ್ರದಾಯಿಕ ಕೃಷಿಯ ಜೊತೆಗೆ ಈ ರೀತಿ ಕೃಷಿಯನ್ನು “ಬಲ್ಲವರ’ ಅನಿವಾರ್ಯ ಕೂಡ ಇದೆ.
ಸ್ನಾತಕ ಪದವಿಗಳಾದ ಬಿ.ಎಸ್ಸಿ (ಆನರ್) ಕೃಷಿ, ಬಿ.ಎಸ್ಸಿ(ಆನರ್) ಕೃಷಿ ಮಾರಾಟ ಮತ್ತು ಸಹಕಾರ, ಬಿ.ಎಸ್ಸಿ (ಆನರ್) ರೇಷ್ಮೆ , ಬಿ.ಎಸ್ಸಿ (ಆನರ್) ಅರಣ್ಯ, ಬಿ.ಎಸ್ಸಿ (ಆನರ್) ತೋಟಗಾರಿಕೆ, ಬಿ.ಟೆಕ್ (ಕೃಷಿ ಇಂಜಿನಿಯರಿಂಗ್), ಬಿ.ಟೆಕ್ (ಆಹಾರ ತಂತ್ರಜ್ಞಾನ), ಬಿ.ಟೆಕ್ (ಜೈಕ ತಂತ್ರಜ್ಞಾನ). ಬಿ.ಟೆಕ್, ಹೈನುಗಾರಿಕೆ ಮತ್ತು ಬಿ.ಎಫ್.ಎಸ್‌ಸಿ ಮೀನುಗಾರಿಕೆ ಸ್ನಾತಕ ಪದವಿಗಳು 4 ವರ್ಷಗಳ (8 ಸೆಮಿಸ್ಟರ್) ಅವಧಿಯದಾಗಿರುತ್ತವೆ ಹಾಗೂ ಬಿಎಸ್‌ಸಿ ಎ.ಹೆಚ್ (ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ) ಪದವಿಯು 5 ವರ್ಷಗಳ (10 ಸೆಮಿಸ್ಟರ್)ದ್ದಾಗಿದೆ. 12 ನೇ ತರಗತಿಯಲ್ಲಿ ಪಿ.ಸಿ.ಎಂ.ಬಿ. ವಿಷಯಗಳ ಸಂಯೋಜನೆಗಳೊಂದಿಗೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಕೃಷಿಗೆ ಸಂಬಂಧಿಸಿದ ಸ್ನಾತಕ ಪದವಿಗಳಲ್ಲಿ ಪ್ರವೇಶ ಪಡೆಯಲು ಅರ್ಹರು.
Related Articles
Advertisement
ಇನ್ನುಳಿದ ಸ್ನಾತಕ ಪದವಿಗಳಿಗೆ ಪಿಯುಸಿಯ ಪಿ.ಸಿ.ಎಂ.ಬಿ ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸೀಟು ಸಿಗುತ್ತದೆ. ಇದಲ್ಲದೆ ಕೃಷಿಗೆ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳು ಶೇಕಡಾ. 40ರಷ್ಟು ಸೀಟುಗಳನ್ನು ಕೃಷಿಕರ ಮಕ್ಕಳಿಗಾಗಿ ಮೀಸಲಿರಿಸಿದ್ದು, ಕೃಷಿಕರ ಕೋಟದಲ್ಲಿ ಅರ್ಜಿ ಸಲ್ಲಿಸಿ ಏಕಕಾಲಕ್ಕೆ ನಡೆಸುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಪರೀಕ್ಷೆಯು 200 ಅಂಕಗಳದ್ದಾಗಿರುತ್ತದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳು (50%), ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳು (25%) ಹಾಗೂ ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳನ್ನು (25%) ಒಂದುಕೂಡಿಸಿ ಜೇಷ್ಠತಾ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರತ್ಯೇಕವಾಗಿ ತಯಾರಿಸಿ ಸೀಟು ಹಂಚಿಕೆ ಮಾಡುತ್ತದೆ.
ಇದಲ್ಲದೆ, ಕರ್ನಾಟಕದ ಪ್ರತಿಯೊಂದು ಕೃಷಿ ವಿವಿ ಅನಿವಾಸಿ ಭಾರತೀಯರಿಗಾಗಿ ಶೇಕಡಾ 10ರಷ್ಟು ಸೀಟುಗಳು ಮತ್ತು ಡಿಪ್ಲೊಮೊ ವಿದ್ಯಾರ್ಥಿಗಳಿಗೆ ಶೇಕಡಾ 5ರಷ್ಟು ಸೀಟುಗಳನ್ನು ಮೀಸಲಿಡುತ್ತವೆ. ನಮ್ಮ ಕೃಷಿ ವಿವಿಗಳು ಎಂ.ಎಸ್ಸಿ ಮತ್ತು ಪಿಹೆಚ್.ಡಿ ಪದವಿಗಳನ್ನು ನೀಡುತ್ತಿವೆ. ಅವುಗಳೆಂದರೆ, ಜೈವಿಕ ತಂತ್ರಜ್ಞಾನ, ಬೆಳೆಶಾಸ್ತ್ರ, ವಂಶಾಭಿವೃದ್ಧಿ ಮತ್ತು ತಳಿಶಾಸ್ತ್ರ, ಸೂಕ್ಷ್ಮಜೀಶಾಸ್ತ್ರ, ಬೀಜ ಜ್ಞಾನ ಮತ್ತು ತಂತ್ರಜ್ಞಾನ, ಮಣ್ಣು ಮತ್ತು ರಾಸಾಯನಶಾಸ್ತ್ರ, ಅರಣ್ಯಶಾಸ್ತ್ರ, ಕೀಟಶಾಸ್ತ್ರ, ರೇಷ್ಮೆ ಕೃಷಿ, ಅರ್ಥಶಾಸ್ತ್ರ, ವಿಸ್ತರಣೆ, ಸಂಖ್ಯಾಶಾಸ್ತ್ರ, ಆಹಾರ ಮತ್ತು ಪೋಷಕಾಂಶ, ವಾಣಿಜ್ಯ ತೋಟಗಾರಿಕಾ ಬೆಳೆಗಳು, ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳು ಮುಂತಾದವುಗಳ ವಿಷಯಗಳಲ್ಲಿ ಪಿಎಚ್.ಡಿ ಪದವಿಗಳನ್ನು ನೀಡುತ್ತಿವೆ. ಕೃಷಿಗೆ ಸಂಬಂಧಿಸಿದ ಎರಡು ವರ್ಷಗಳ (4 ಸೆಮಿಸ್ಟರ್) ಡಿಪ್ಲೊಮೊ ಕೋರ್ಸ್‌ಗಳೂ ಇವೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಭಾಷೆಯಾಗಿ ಅಭ್ಯಾಸಿಸಿ . ಕನಿಷ್ಠ ಶೇ. 45 ಅಂಕಗಳೊಂದಿಗೆ ಉತ್ತೀರ್ಣರಾಗಿರುವವರು ಈ ಕೋರ್ಸ್ ಕಲಿಯಬಹುದು.
ಅಂಚೆ ಶಿಕ್ಷಣಕೃಷಿ ತಂತ್ರಜ್ಞಾನದ ಹೊಸ ಆವಿಷ್ಕಾರಗಳ ವಿಷಯಗಳ ಬಗ್ಗೆ ದೂರ ಶಿಕ್ಷಣದ ಮೂಲಕ ಸರ್ಟಿಫಿಕೇಟ್ ಮತ್ತು ಡಿಪ್ಲೊಮೊ ಕೋರ್ಸ್‌ಗಳನ್ನು ಮಾಡಬಹುದು. ಬೆಂಗಳೂರು ವಿವಿ ಇದನ್ನು ಪ್ರಾರಂಭಿಸಿದೆ. ಒಂದು ವರ್ಷದ ಕೃಷಿ ಡಿಪ್ಲೊಮೊಗೆ 10ನೇ ತರಗತಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು. 7ನೇ ತರಗತಿ ಮುಗಿಸಿದವರು ಸಮಗ್ರ ಕೃಷಿಯ ಸರ್ಟಿಫಿಕೇಟ್ ಕೋರ್ಸ್ ಮಾಡಬಹುದು. ಓದು, ಬರಹ ಬಲ್ಲವರು ಸಾವಯವ ಕೃಷಿ ಸರ್ಟಿಫಿಕೇಟ್ ಕೋರ್ಸ್ ಕಲಿಕೆಗೆ (ಅಂಚೆ ಶಿಕ್ಷಣ)ಗೆ ಅರ್ಜಿ ಸಲ್ಲಿಸಬಹುದು. ಉದ್ಯೋಗ ಎಲ್ಲಿ?
ಕೃಷಿ ಪದವಿಯು ಭಾರತೀಯ ಆಡಳಿತ ಸೇವೆ, ಭಾರತೀಯ ಅರಣ್ಯ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಹಕಾರಿಯಾಗುತ್ತದೆ. ಕೃಷಿ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ, ಅರಣ್ಯ ಮತ್ತು ಕೃಷಿ ಮಾರುಕಟ್ಟೆಯಂಥ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಾವಕಾಶಗಳಿವೆ. ಕೃಷಿ ವಿವಿಗಳು, ಕೇಂದ್ರ ಸರ್ಕಾರದ ಕಾಫಿ ಮಂಡಳಿ, ಗೋಡಂಬಿ ಅಭಿವೃದ್ಧಿ ಮಂಡಳಿ, ಸಂಬಾರು ಮಂಡಳಿ, ತೆಂಗು ಅಭಿವೃದ್ಧಿ ಮಂಡಳಿ, ತಂಬಾಕು ಮಂಡಳಿ ಮುಂತಾದವುಗಳಲ್ಲಿ ಉದ್ಯೋಗವಕಾಶಗಳು ಹೇರಳವಾಗಿವೆ. ಇದಲ್ಲದೇ, ಗೊಬ್ಬರ, ಬೀಜ ಕಂಪನಿಗಳು, ಕೃಷಿ ಉಪಕರಣಗಳನ್ನು ತಯಾರಿಸುವ ಕಾರ್ಖನೆಗಳಲ್ಲೂ ಇವರ ಅನಿವಾರ್ಯ ಇದ್ದೇ ಇದೆ. ಹೀಗಾಗಿ ಕೃಷಿ ಪದವಿ ಪಡೆದವರಿಗೆ ಕೆಲಸ ಸಿಗುವುದು ಸುಲಭ. ಸಂಪರ್ಕಕ್ಕೆ-
ಬೆಂಗಳೂರು ಕೃಷಿ ವಿವಿ-www.uasbangalore.edu.in
ಧಾರವಾಡ ವಿವಿ-www.uasd.edu.in
ರಾಯಚೂರು ವಿವಿ-www.uasraichur.edu.in
ಬೀದರ್ ವಿವಿ-ಡಿಡಿಡಿ.www.kvafsu.kar.nic.in
ಬಾಗಲಕೋಟ-www.uasbagalkot.edu.in
ಶಿವಮೊಗ್ಗ-www.uahs.in ಡಾ. ಕೆ. ಶಿವರಾಮು, ಎಂ.ಎ. ಮೂರ್ತಿ