Advertisement
ತಾಲೂಕಿನ ಏಕೈಕ ಪ್ರಥಮ ದರ್ಜೆ ಕಾಲೇಜು: ಹನೂರು ಕ್ಷೇತ್ರವು ಬಹುಪಾಲು ಗುಡ್ಡಗಾಡು, ಗ್ರಾಮೀಣ ಪ್ರದೇಶ ಮತ್ತು ಅರಣ್ಯದಿಂದ ಆವೃತ್ತವಾದ ವಿಸ್ತಾರವಾದ ದೊಡ್ಡ ಕ್ಷೇತ್ರವಾಗಿದ್ದು ಕ್ಷೇತ್ರದ ಒಂದು ತುದಿಯಿಂದ ಮತ್ತೊಂದು ತುದಿಗೆ 150ಕಿ.ಮೀಗೂ ಅಧಿಕ ದೂರವಿರುವ ಕ್ಷೇತ್ರವಾಗಿದೆ. ಈ ಕ್ಷೇತ್ರವು ಕೊಡಗು ಜಿಲ್ಲೆಯ ವಿಸ್ತೀರ್ಣಕ್ಕೆ ಸಮಾನವಾದ ಭೂ ಪ್ರದೇಶ ಹೊಂದಿದೆ. ಇಂತಹ ಗಡಿಭಾಗದ ಕ್ಷೇತ್ರವಾದ ಹನೂರಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣ ಕ ಪ್ರಗತಿಗಾಗಿ ಪ್ರಥಮ ದರ್ಜೆ ಕಾಲೇಜನ್ನು ತೆರೆದಿದ್ದು ಈ ಭಾಗದ ಕಡುಬಡತನದಿಂದ ಕೂಡಿರುವ ಹಿಂದುಳಿದ ವರ್ಗದ, ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಸೇರಿದ ಬಹುಪಾಲು ವಿದ್ಯಾರ್ಥಿಗಳು ತಮ್ಮ ಪದವಿ ವಿದ್ಯಾಭ್ಯಾಸಕ್ಕಾಗಿ ಹನೂರು ಪಟ್ಟಣದ ಪ್ರಥಮ ದರ್ಜೆ ಕಾಲೇಜನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಸರ್ಕಾರಿ ಕಾಲೇಜಿರಲಿ, ಖಾಸಗಿ ಕಾಲೇಜುಗಳೂ ಕೂಡಾ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ವರ್ಗಾಯಿಸಿರುವುದು ಈ ಭಾಗದ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರ ಆತಂಕಕ್ಕೆ ಕಾರಣವಾಗಿದೆ.
Related Articles
Advertisement
ಸಾರ್ವಜನಿಕರ ಆಗ್ರಹ: ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಪ್ರಥಮ ದರ್ಜೆ ಕಾಲೇಜನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು. ಒಂದೊಮ್ಮೆ ಕಾಲೇಜು ಸ್ಥಳಾಂತರಗೊಂಡಿದ್ದೆ ಆದಲ್ಲಿ ವಿದ್ಯಾರ್ಥಿಗಳು ಈಗ ಕ್ರಮಿಸುತ್ತಿರುವ ದೂರದ ಜೊತೆಗೆ ಇನ್ನೂ 25 ಕಿ.ಮೀ ಹೆಚ್ಚಿನ ದೂರ ಕ್ರಮಿಸಬೇಕಾಗುತ್ತದೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಠಿಯಿಂದ ಮಾರಕವಾಗಲಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕಾಲೇಜನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಖಾಸಗಿ ಸಂಸ್ಥೆಗಳಿಂದ ಕಿಕ್‍ಬ್ಯಾಕ್ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಿರುವ ಕಾಲೇಜು ಶಿಕ್ಷಣ ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹನೂರು ತಾಲೂಕಿನ ಏಕೈಕ ಪ್ರಥಮ ದರ್ಜೆ ಕಾಲೇಜನ್ನು ಬೇರೆಡೆಗೆ ಸ್ಥಳಾಂತರಿಸಿರುವುದು ನನ್ನ ಗಮನಕ್ಕೆ ಬಂದಿದ್ದು ಇದು ಅಧಿಕಾರಿಗಳ ಕಣ್ತಪ್ಪಿನಿಂದ ಆಗಿರುವ ಪ್ರಮಾದವಾಗಿದೆ. ಈ ಸಂಬಂಧ ಈಗಾಗಲೇ ಉಪಮುಖ್ಯಮಂತ್ರಿ ಅಶ್ವಥ್‍ನಾರಾಯಣ್ ಅವರಿಗೆ ಮತ್ತು ಸಂಬಂಧಪಟ್ಟ ಕಮಿಷನರ್ ಅವರಿಗೆ ಮನವಿ ಮಾಡಲಾಗಿದ್ದು ಕಾಲೇಜನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಆರ್.ನರೇಂದ್ರ ರಾಜುಗೌಡ ಹೇಳಿದ್ದಾರೆ.
ನಾನು ಈ ಹುದ್ದೆಗೆ ಬಂದು 1 ವರ್ಷ ಕಳೆದಿದೆ. ಈ ಹಿಂದೆ ನೀಡಿದ್ದ ವರದಿಯ ಆಧಾರದ ಮೇಲೆ ಆದೇಶವಾಗಿದೆ ಎನ್ನಲಾಗುತ್ತಿದೆ. ಆದರೆ ಈ ಸಂಬಂಧ ನಮಗೆ ಇದುವರೆಗೂ ಯಾವುದೇ ಅಧಿಕೃತ ಪತ್ರ ಬಂದಿಲ್ಲ. ಹನೂರು ಕಾಲೇಜು ಉತ್ತಮವಾಗಿ ನಡೆಯುತ್ತಿದ್ದು ಹಾಸ್ಟೆಲ್ ನಿರ್ಮಾಣಕ್ಕೂ ಕೂಡ ಕ್ರಮವಹಿಸಲಾಗಿದೆ. ಇದೀಗ ಯಾವ ಆಧಾರದ ಮೇಲೆ ಸ್ಥಳಾಂತರಿಸಲಾಗುತ್ತಿದೆ ಎಂಬುದ ಬಗ್ಗೆ ನಮಗೂ ಮಾಹಿತಿಯಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಮುಗೇಶಪ್ಪ ಹೇಳಿದ್ದಾರೆ.
ವಿನೋದ್ ಎನ್ ಗೌಡ