ಗುಳೇದಗುಡ್ಡ: ಖಣಗಳಿಗೆ ಹೆಸರುವಾಸಿಯಾದ ಗುಳೇದಗುಡ್ಡ ತಾಲೂಕು ಕೇಂದ್ರವಾಗಿ ವರ್ಷ ಕಳೆದಿದೆ. ಪ್ರಥಮ ದರ್ಜೆ ಕಾಲೇಜು ಆರಂಭವಾಗಲು ಹಣಕಾಸು ಇಲಾಖೆ ಒಪ್ಪಿಗೆಯೊಂದೆ ಬಾಕಿ ಎಂದು ಶಾಸಕ ಸಿದ್ದರಾಮಯ್ಯ ಹೇಳಿದ್ದರೂ ಇದುವರೆಗೂ ಕಾಲೇಜು ಆರಂಭದ ಬಗ್ಗೆ ಮಾಹಿತಿಯಿಲ್ಲ.
ರಾಜ್ಯ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ವರ್ಷ ಕಳೆಯುತ್ತ ಬಂದರೂ ಪ್ರಥಮ ದರ್ಜೆ ಕಾಲೇಜು ಆರಂಭವಾಗುತ್ತಿಲ್ಲ. ಮೂಲಗಳ ಪ್ರಕಾರ ಇದುವರೆಗೂ ಹಣಕಾಸು ಇಲಾಖೆಯ ಒಪ್ಪಿಗೆ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಪ್ರಸಕ್ತ ವರ್ಷವು ಡಿಗ್ರಿ ಕಾಲೇಜು ಆರಂಭಗೊಳ್ಳುವುದು ಅನುಮಾನ.
2018ರ ಶೈಕ್ಷಣಿಕ ವರ್ಷದಲ್ಲಿ ಬಾದಾಮಿ ಶಾಸಕ ಸಿದ್ದರಾಮಯ್ಯನವರು ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳಿಗೆ ಗುಳೇದಗುಡ್ಡ ಪಟ್ಟಣಕ್ಕೆ ಕೂಡಲೇ ಪದವಿ ಕಾಲೇಜು ಮಂಜೂರಿ ಮಾಡಲು ತಿಳಿಸಿದ್ದರು. ಇದಕ್ಕೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದರು. ಕರಡು ಪ್ರತಿಗೆ ಅಧೀನ ಕಾರ್ಯದರ್ಶಿ ಒಪ್ಪಿಗೆ ಸಿಕ್ಕಿತ್ತು. ಹಣಕಾಸು ಇಲಾಖೆ ಒಪ್ಪಿಗೆ ಬಾಕಿಯಿದ್ದು, ಶೀಘ್ರ ಆರಂಭಗೊಳ್ಳಲಿದೆ ಎಂದು ಕಳೆದ ವರ್ಷ ಸಿದ್ಧರಾಮಯ್ಯ ಹೇಳಿದ್ದರು. ಮತ್ತೆ ಒಂದು ತಿಂಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಆದರೂ ಇದುವರೆಗೂ ಕಾಲೇಜು ಆರಂಭದ ಬಗ್ಗೆ ಮಾಹಿತಿ ಇಲ್ಲ.
ವರ್ಷಕ್ಕೆ 500 ವಿದ್ಯಾರ್ಥಿಗಳು: ಸದ್ಯ ಪಟ್ಟಣದಲ್ಲಿ ಒಂದೇ ಖಾಸಗಿ ಪದವಿ ಕಾಲೇಜಿದ್ದು, ಅಲ್ಲಿ ಬಿ.ಎ, ಬಿಕಾಂ, ಬಿಎಸ್ಸಿ, ಬಿಸಿಎ ಪದವಿಗಳಿವೆ. ಪಟ್ಟಣದಲ್ಲಿಯೇ ಸುಮಾರು ಐದು ಪಿಯು ಕಾಲೇಜುಗಳಿವೆ. ವರ್ಷಕ್ಕೆ ಸುಮಾರು 500 ವಿದ್ಯಾರ್ಥಿಗಳು ಪಿಯುಸಿ ತೇರ್ಗಡೆ ಹೊಂದಿ ಪದವಿ ಕಲಿಯಲು ಬರುತ್ತಾರೆ. ಎಲ್ಲರಿಗೂ ಒಂದೇ ಕಾಲೇಜಿನಲ್ಲಿ ಪ್ರವೇಶ ದೊರೆಯುವುದು ಕಷ್ಟ.
ಪದವಿ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅವರಿಗೆ ಬೇಕಾಗುವ ಐಚ್ಚಿಕ ವಿಷಯಗಳು ಸಿಗುವುದಿಲ್ಲ. ಹೆಚ್ಚಿನ ಡೊನೇಶನ್ ಕೊಟ್ಟು ಶಿಕ್ಷಣ ಪಡೆಯುವುದು ಬಡ ನೇಕಾರರಿಗೆ ಕಷ್ಟವಾಗಿದೆ. ಅಲ್ಲದೇ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೂ ಸಹ ತೊಂದರೆಯಾಗುತ್ತದೆ.
ನೇಕಾರರ ಪಟ್ಟಣವಾದ ಗುಳೇದಗುಡ್ಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬಡ ವಿದ್ಯಾರ್ಥಿಗಳು 22ಕಿಮೀ. ಬಾದಾಮಿಯ ಸರಕಾರಿ ಪದವಿ ಕಾಲೇಜಿನತ್ತ ಹಾಗೂ 25 ಕಿಮೀ ದೂರದ ಬಾಗಲಕೋಟೆ ನಗರ ಕಡೆಗೆ ಮುಖ ಮಾಡುವಂತಾಗಿದೆ. ಕಾಲೇಜು ಆರಂಭವಾದರೇ ಬಡ ಕುಟುಂಬದ ಮಕ್ಕಳು ಬೇರೆ ಪಟ್ಟಣಕ್ಕೆ ತೆರಳುವುದು ತಪ್ಪ್ಪುತ್ತದೆ.