ಬಾಗಲಕೋಟೆ: ವಿದ್ಯಾರ್ಥಿಗಳ ಭವಿಷ್ಯ ಕುರಿತು ಮುಂದಾಲೋಚನೆ ಇಲ್ಲದ ರಾಣಿ ಚೆನ್ನಮ್ಮ ವಿವಿಯ ನಿರ್ಧಾರದಿಂದ ಜಿಲ್ಲೆಯ 45 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಆತಂಕ ಎದುರಿಸುವಂತಾಗಿದೆ. ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ, ತನ್ನ ಅಧೀನ ವ್ಯಾಪ್ತಿಯ ಪದವಿ ಕಾಲೇಜುಗಳ 1, 3 ಹಾಗೂ 5ನೇ ಸೆಮಿಸ್ಟರಿಯ ಅಂತಿಮ ವರ್ಷದ ಪರೀಕ್ಷೆಗಳನ್ನು ಮಾ.15ರಿಂದ ನಡೆಸಲು ವೇಳಾಪಟ್ಟಿ ಸಿದ್ಧಪಡಿಸಿದೆ.
ಪರೀಕ್ಷಾ ವೇಳಾಪಟ್ಟಿಯನ್ನು ಆಯಾ ಕಾಲೇಜುಗಳಿಗೆ ಕಳುಹಿಸಿದ್ದು, ಇದಕ್ಕೆ ವಿದ್ಯಾರ್ಥಿ ವಲಯ ಹಾಗೂ ಕಾಲೇಜುಗಳ ಪ್ರಾಚಾರ್ಯರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೂರ್ಣ ಪಠ್ಯಕ್ರಮವೇ ಮುಗಿದಿಲ್ಲ. ಈಗಲೇ ಪರೀಕ್ಷೆ ನಡೆಸಿದರೆ, ವಿದ್ಯಾರ್ಥಿಗಳು ಹೇಗೆ ಬರೆಯಬೇಕು ಎಂಬ ಪ್ರಶ್ನೆ ಮಾಡಲಾಗಿದೆ. 85 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ: ಜಿಲ್ಲೆಯಲ್ಲಿ 18 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಸೇರಿದಂತೆ ಒಟ್ಟು 65 ಡಿಗ್ರಿ ಕಾಲೇಜುಗಳು ಜಿಲ್ಲೆಯಲ್ಲಿವೆ. ಈ ಅಷ್ಟೂ ಕಾಲೇಜುಗಳಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಮೊದಲು ಆನ್‌ಲೈನ್ ಕ್ಲಾಸ್ ನಡೆಸಲಾಗಿತ್ತಾದರೂ, ಹಲವಾರು ವಿದ್ಯಾರ್ಥಿಗಳು ಹಲವು ಸಮಸ್ಯೆಯಿಂದ ಆನ್‌ಲೈನ್ ಕ್ಲಾಸ್‌ಗೆ ಭಾಗವಹಿಸಲು ಆಗಿರಲಿಲ್ಲ. ಅದರಲ್ಲೂ ಸರ್ಕಾರಿ ಕಾಲೇಜುಗಳು ಆನ್‌ಲೈನ್ ಕ್ಲಾಸ್ ನಡೆಸಲು ವಿವಿಧ ಸಮಸ್ಯೆ ಎದುರಿಸಿದ್ದವು.
ಈಗ ಕಾಲೇಜು ಆರಂಭಗೊಂಡು ಕೇವಲ ಒಂದೂವರೆ ತಿಂಗಳಾಗಿದೆ. ಕಾಲೇಜು ಆರಂಭಗೊಂಡ ಒಂದೂವರೆ ತಿಂಗಳಲ್ಲೇ ಅಂತಿಮ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದು ಪಾಲಕರು ಹಾಗೂ ಪ್ರಾಧ್ಯಾಪಕರ ಆತಂಕ. ಶೇ.20ರಷ್ಟು ಪಠ್ಯಕ್ರಮ: ಕಾಲೇಜುಗಳು ಆರಂಭಗೊಂಡು ಒಂದೂವರೆ ತಿಂಗಳಾದ ಹಿನ್ನೆಲೆಯಲ್ಲಿ ಸಧ್ಯ ಶೇ.20ರಷ್ಟು ಪಠ್ಯಕ್ರಮ ಮಾತ್ರ ಆಗಿದೆ. ಇನ್ನೂ ಶೇ.80ರಷ್ಟು ಪಠ್ಯಕ್ರಮ ಮುಗಿದಿಲ್ಲ.ಪಠ್ಯಕ್ರಮ ಮುಗಿಯದೇ ಪರೀಕ್ಷೆ ನಡೆಸಲು ರಾಣಿ ಚೆನ್ನಮ್ಮ ವಿವಿ ಹೇಗೆ ನಿರ್ಧಾರಕ್ಕೆ ಬಂತು ಎಂಬುದು ವಿದ್ಯಾರ್ಥಿಗಳ ಪ್ರಶ್ನೆ. ಒಂದು ವೇಳೆ ಒಂದೂವರೆ ತಿಂಗಳಲ್ಲೇ ಪರೀಕ್ಷೆ ನಡೆಸುವುದಾದರೆ, ಅದಕ್ಕೆ ತಕ್ಕಂತೆ ಪಠ್ಯಕ್ರಮವಾದರೂ ಕಡಿತ ಮಾಡಬೇಕಿತ್ತು. ಈಗಾಗಲೇ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ತರಗತಿಗಳಿಗೆ ಇದನ್ನು ಅನ್ವಯಿಸಲಾಗಿದೆ. ಆದರೆ, ಪದವಿ ಕಾಲೇಜಿಗೆ ವಿಶ್ವ ವಿದ್ಯಾಲಯ ಈ ರೀತಿ ನಿರ್ಲಕ್ಷé ಮಾಡುತ್ತಿರುವುದೇಕೆ ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಕಳೆದ ವರ್ಷವೂ ಎಡವಟ್ಟು: ಕಳೆದ ವರ್ಷವೂ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಇದೇ ಪರೀಕ್ಷೆ ವಿಷಯದಲ್ಲಿ ಎಡವಟ್ಟು ಮಾಡಿಕೊಂಡಿತ್ತು. ಪ್ರಶ್ನೆ ಪತ್ರಿಕೆಗಳನ್ನು ವಾಟ್ಸಾಪ್, ಇ ಮೇಲ್ ಮೂಲಕ ಕಳುಹಿಸಿ, ಮರುದಿನವೇ ಪರೀಕ್ಷೆ ನಡೆಸಲು ಕಾಲೇಜುಗಳಿಗೆ ತಿಳಿಸಿತ್ತು. ಅಲ್ಲದೇ ಆಯಾ ದಿನ ನಿಗದಿಯಾದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಪೂರೈಸದೇ, ಒಂದೆರಡು ದಿನ ಮುಂಚೆ ಇರುವ ವಿಷಯದ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿ, ಎಡವಟ್ಟು ಮಾಡಿತ್ತು. ಇದೀಗ ಪಠ್ಯಕ್ರಮ ಮುಗಿಯದೇ ಪರೀಕ್ಷೆ ನಡೆಸಲು ಮುಂದಾಗಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚಲ್ಲಾಟವಾಡುತ್ತಿದೆ ಎಂಬ ಆಕ್ರೋಶ ಕೇಳಿ ಬಂದಿದೆ ಜಿಲ್ಲೆಯಲ್ಲಿ 65 ಪ್ರಥಮಿ ದರ್ಜೆ ಕಾಲೇಜುಗಳಿದ್ದು, 1, 3 ಹಾಗೂ 5ನೇ ಸೆಮಿಸ್ಟರಿಯ ಅಂತಿಮ ಪರೀಕ್ಷೆ ನಡೆಸಲು ರಾಣಿ ಚೆನ್ನಮ್ಮ ವಿವಿ ಆದೇಶಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಕಾಲೇಜು ಆರಂಭಗೊಂಡು ಈಗ ಒಂದೂವರೆ ತಿಂಗಳಾಗಿದೆ. ಶೇ.20ರಷ್ಟು ಮಾತ್ರ ಪಠ್ಯಕ್ರಮ ಪೂರ್ಣಗೊಂಡಿದೆ. ಹೀಗಾಗಿ ಪಠ್ಯಕ್ರಮ ಕಡಿತ ಮಾಡಿ, ಪೂರ್ಣ ಪಠ್ಯಕ್ರಮ ಮುಗಿದ ಬಳಿಕ ಪರೀಕ್ಷೆ ನಡೆಸುವುದು ಉತ್ತಮ ಎಂಬ ಅಭಿಪ್ರಾಯವನ್ನು ಎಲ್ಲ ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ. ಈ ಅಭಿಪ್ರಾಯವನ್ನು ರಾಣಿ ಚೆನ್ನಮ್ಮ ವಿವಿಯ ಕುಲಸಚಿವರು, ಕುಲಪತಿಗಳ ಗಮನಕ್ಕೆ ಲಿಖೀತ ಪತ್ರದ ಮೂಲಕ ತರಲಾಗಿದೆ. ಡಾ|ಅರುಣಕುಮಾರ ಗಾಳಿ, ಪ್ರಥಮ ದರ್ಜೆ ಕಾಲೇಜುಗಳು ಜಿಲ್ಲಾ ನೋಡಲ್ ಅಧಿಕಾರಿ.
ಶ್ರೀಶೈಲ ಕೆ. ಬಿರಾದಾರ